ನವದೆಹಲಿ: ಲೇಹ್ ಅನ್ನು ಕೇಂದ್ರಾಡಳಿತ ಪ್ರದೇಶ ಲಡಾಖ್ ಭಾಗವಲ್ಲದೇ, ಜಮ್ಮು ಮತ್ತು ಕಾಶ್ಮೀರದ ಭಾಗವಾಗಿ ತೋರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಟ್ವಿಟರ್‌ಗೆ ನೋಟಿಸ್ ನೀಡಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳು ತಿಳಿಸಿವೆ.
ತಪ್ಪಾದ ನಕ್ಷೆಯನ್ನು ತೋರಿಸುವ ಮೂಲಕ ಭಾರತದ ಪ್ರಾದೇಶಿಕ ಸಮಗ್ರತೆಗೆ ಅಗೌರವ ತೋರಿದ ಕಾರಣಕ್ಕಾಗಿ, ಟ್ವಿಟರ್ ಮತ್ತು ಅದರ ಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಏಕೆ ಕೈಗೊಳ್ಳಬಾರದು ಎಂದು ಕೇಳಿರುವ ಸರ್ಕಾರ, ಐದು ದಿನಗಳ ಒಳಗಾಗಿ ಇದಕ್ಕೆ ಸಮಜಾಯಿಷಿ ನೀಡುವಂತೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಟ್ವಿಟರ್ ಪ್ರಕಾರ ಲೇಹ್, ಜಮ್ಮು–ಕಾಶ್ಮೀರ ಚೀನಾದ ಭಾಗ!
ನವೆಂಬರ್ 9 ರಂದು ಟ್ವಿಟರ್‌ಗೆ ಐಟಿ ಸಚಿವಾಲಯ ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
'ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶ ಎಂದು ಭಾರತದ ಸಂಸತ್ತು ಘೋಷಿಸಿದೆ. ಅದರ ರಾಜಧಾನಿ ಲೇಹ್‌ನಲ್ಲಿದೆ. ಲೇಹ್ ಅನ್ನು ಜಮ್ಮು ಮತ್ತು ಕಾಶ್ಮೀರದ ಭಾಗ ಎಂದು ಟ್ವಿಟರ್ ಬಿಂಬಿಸಿರುವುದು ಭಾರತದ ಸಂಸತ್‌ನ ಸಾರ್ವಭೌಮತ್ವಕ್ಕೆ ಭಂಗ ಉಂಟು ಮಾಡುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ,' ಎಂದು ಸಚಿವಾಲಯ ಪ್ರತಿಪಾದಿಸಿದೆ.
ಟ್ವಿಟರ್ ಈ ಹಿಂದೆ ಲೇಹ್ ಅನ್ನು ಚೀನಾದ ಭಾಗವೆಂದು ತೋರಿಸಿತ್ತು. ಹೀಗಾಗಿ ಐಟಿ ಕಾರ್ಯದರ್ಶಿ ಕಂಪನಿಯ ಸಿಇಒ ಜಾಕ್ ಡಾರ್ಸಿಗೆ ಪತ್ರ ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ನಕ್ಷೆಯನ್ನು ಬದಲಾಯಿಸಿತಾದರೂ, ಲೇಹ್ ಅನ್ನು ಕೇಂದ್ರಾಡಳಿತ ಪ್ರದೇಶವಾದ ಲಡಾಕ್ ಭಾಗವಲ್ಲದೇ, ಜಮ್ಮು ಕಾಶ್ಮೀರದ ಭಾಗವೆಂದು ತೋರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.