ಬಂಧನ
(ಪ್ರಾತಿನಿಧಿಕ ಚಿತ್ರ)
ಲಖನೌ: ಎಂಟು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪತಿಯನ್ನು ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಪತ್ನಿ ಪತ್ತೆ ಹಚ್ಚಿರೋ ಘಟನೆ ಉತ್ತರ ಪ್ರದೇಶದ ಹರ್‌ದೋಯಿ ಜಿಲ್ಲೆಯಲ್ಲಿ ನಡೆದಿದೆ. 8 ವರ್ಷಗಳ ಬಳಿಕ ಆರೋಪಿ ಜಿತೇಂದ್ರ ಅಲಿಯಾಸ್ ಬಬ್ಲುನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ..?
2018ರಲ್ಲಿ ಆರೋಪಿ ಜಿತೇಂದ್ರ ಅಲಿಯಾಸ್ ಬಬ್ಲು ತನ್ನ ಗರ್ಭಿಣಿ ಪತ್ನಿ ಶೀಲು ಅವರನ್ನು ತೊರೆದು ಪಂಜಾಬ್‌ನ ಲುಧಿಯಾನದಲ್ಲಿ ವಾಸಿಸುತ್ತಿದ್ದನಂತೆ. ಅಷ್ಟೇ ಅಲ್ಲದೇ ಅಲ್ಲಿಯೇ ಜಿತೇಂದ್ರ ಅಲಿಯಾಸ್ ಬಬ್ಲು ಮರು ಮದುವೆ ಕೂಡ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿ ಪತ್ತೆ ಆಗಿದ್ದು ಹೇಗೆ..?
ಶೀಲು ಸಂದಿಲಾ ಪ್ರದೇಶದ ಮುರಾರ್ನಗರ ನಿವಾಸಿ. ಇತ್ತೀಚೆಗೆ ಶೀಲು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ನೋಡುತ್ತಿದ್ದರು. ಆಗ ಏಕಾಏಕಿ ವಿಡಿಯೊದಲ್ಲಿ ಪತಿ ಕಾಣಿಸಿಕೊಂಡಿದ್ದಾರೆ. ಪತಿಯನ್ನು ನೋಡುತ್ತಿದ್ದಂತೆ ಶೀಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ತನಿಖೆ ಆರಂಭಿಸಿದ ಪೊಲೀಸರು ಆತನ ಗುರುತು ಮತ್ತು ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಜಿತೇಂದ್ರ ಅಲಿಯಾಸ್ ಬಬ್ಲು ಅಟಮೌ ಗ್ರಾಮದ ನಿವಾಸಿಯಾಗಿದ್ದ. ಆದರೆ 2018ರಲ್ಲಿ ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದ ಎಂದು ತಂದೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಆರೋಪಿ ಜಿತೇಂದ್ರ ನಾಪತ್ತೆಯಾಗಿದ್ದಾಗ ಕುಟುಂಬಸ್ಥರು ಶೀಲು ಅವರ ಸಂಬಂಧಿಕರ ಮೇಲೆ ಗಂಭೀರವಾಗಿ ಆರೋಪಿಸಿದ್ದರು. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೋಳ್ಳುತ್ತೇವೆ ಎಂದು ಸರ್ಕಲ್ ಆಫೀಸರ್ ಸಂತೋಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.