
ಸಾಂರ್ಭಿಕ ಚಿತ್ರ
ಸಾಮಾನ್ಯವಾಗಿ ಟ್ಯಾಕ್ಸಿ ಅಥವಾ ಆಟೊ ಚಾಲಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯಲು ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಬಾಡಿಗೆಯನ್ನು ಕೇಳುವುದುಂಟು. ಆದರೆ ಮುಂಬೈನಲ್ಲೊಬ್ಬ ಟ್ಯಾಕ್ಸಿ ಚಾಲಕ ಪ್ರಯಾಣಿಕರೊಬ್ಬರ ಬಳಿ ಹೆಚ್ಚು ಹಣ ಕೇಳಿ ನಂತರ ಮೀಟರ್ ತೋರಿಸಿರುವುದಕ್ಕಿಂತ ಹೆಚ್ಚಿನ ಹಣವನ್ನು ಪಡೆದಿದ್ದೇನೆ ಎಂದಿದ್ದಾನೆ.
ಹೊಸದಾಗಿ ಮಹಾನಗರಗಳಿಗೆ ಬರುವವರಿಗೆ ಟ್ಯಾಕ್ಸಿ ಚಾಲಕರು ವಂಚಿಸುತ್ತಾರೆ, ಎಚ್ಚರಿಕೆಯಿಂದ ಇರಬೇಕು ಎಂದು ಚಾಲಕ ವಿವರಿಸಿರುವ ಬಗ್ಗೆ ಎಕ್ಸ್ ಬಳಕೆದಾರರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರ ವ್ಯಾಪಕವಾಗಿ ಹರಿದಾಡುತ್ತಿದೆ.
‘ಮುದ್ರಿತಾ’ ಎಂಬ ಪ್ರಯಾಣಿಕರು ಟ್ಯಾಕ್ಸಿ ಚಾಲಕನೊಂದಿಗೆ ನಡೆದ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ. ‘ನಾನು ಮುಂಬೈನ ಕ್ರಾಫರ್ಡ್ ಮಾರುಕಟ್ಟೆಯಿಂದ ಚರ್ಚ್ ಗೇಟ್‌ಗೆ ತಲುಪಬೇಕಿತ್ತು. ಹೀಗಾಗಿ ಟ್ಯಾಕ್ಸಿ ಮೂಲಕ ಪ್ರಯಾಣಿಸಲು ಯೋಚಿಸಿದೆ. ಟ್ಯಾಕ್ಸಿ ಚಾಲಕನೊಬ್ಬನನ್ನು ಕೇಳಿದಾಗ, ಆತ ₹200 ಶುಲ್ಕವಾಗುತ್ತದೆ ಎಂದು ಹೇಳಿದ. ನಾನು ಆತನೊಂದಿಗೆ ಮಾತುಕತೆ ನಡೆಸಿ, ಶುಲ್ಕವನ್ನು ₹150ಕ್ಕೆ ಇಳಿಸಿದೆ. ನಂತರ ಅವನು ಮರು ಮಾತನಾಡದೆ ಒಪ್ಪಿಕೊಂಡ’ ಎಂದು ಬರೆದಿದ್ದಾರೆ.
‘ಚರ್ಚ್‌ಗೇಟ್ ತಲುಪಿದ ನಂತರ ಹಣವನ್ನು ಪಡೆದ ಟ್ಯಾಕ್ಸಿ ಚಾಲಕ ‘ಅಗತ್ಯಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಿದ್ದೇನೆ’ ಎಂದು ಬಹಿರಂಗವಾಗಿ ಹೇಳಿದನು. ‘ನಾನು ನಿಮ್ಮಿಂದ ₹30 ರಿಂದ ₹40 ಹೆಚ್ಚುವರಿಯಾಗಿ ತೆಗೆದುಕೊಂಡಿದ್ದೇನೆ. ನೋಡಿ, ಮೀಟರ್ ಬೆಲೆ ₹110 ಆಗಿದೆ‘ ಎಂದು ಹೇಳಿದ್ದಾನೆ.
ಜೊತೆಗೆ ಆಕೆಗೆ ಸಲಹೆ ನೀಡಿದ ಟ್ಯಾಕ್ಸಿ ಚಾಲಕ ‘ನೀವು ಈ ನಗರಕ್ಕೆ ಹೊಸಬರಾಗಿರುವುದರಿಂದ ನಾನು ನಿಮಗೊಂದು ಸಲಹೆ ನೀಡುತ್ತೇನೆ. ಮುಂದಿನ ಬಾರಿ ಪ್ರಯಾಣಿಸಿದಾಗ ಮೀಟರ್‌ನಲ್ಲಿನ ಬೆಲೆಯನ್ನು ಪರಿಶೀಲಿಸಿ ಪಾವತಿಸಿ’ ಎಂದು ಹೇಳಿದ್ದಾನೆ.
ಈ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಕಮೆಂಟ್ ಮಾಡಿದ್ದಾರೆ. ಎಕ್ಸ್ ಬಳಕೆದಾರರೊಬ್ಬರು ‘ಮುಂಬೈ ನಿವಾಸಿಗಳು ಅಲ್ಲಿನ ಪ್ರವಾಸಿಗರಿಗೆ ಸಹಾಯ ಮಾಡಿದ ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಮುಂಬೈಗೆ ಸುಮಾರು 5 ರಿಂದ 6 ಬಾರಿ ಹೋಗಿದ್ದೇನೆ. ಅಲ್ಲಿನ ಅನುಭವ ಯಾವಾಗಲೂ ಉತ್ತಮವಾಗಿತ್ತು’ ಎಂದಿದ್ದಾರೆ.
ಮತ್ತೊಬ್ಬರು ‘ಮುಂಬೈನಲ್ಲಿ ಟ್ಯಾಕ್ಸಿ ಚಾಲಕರು ನಿಮ್ಮನ್ನು ವಂಚಿಸುತ್ತಾರೆ. ನಂತರ ನಿಮಗೆ ರಶೀದಿ ನೀಡುತ್ತಾರೆ. ಮುಂದಿನ ಬಾರಿ ವಂಚನೆಯನ್ನು ಹೇಗೆ ತಪ್ಪಿಸುವುದು ಎಂಬುದರ ಕುರಿತು ಟ್ಯುಟೋರಿಯಲ್ ಕೂಡಾ ನೀಡುತ್ತಾರೆ. ನಾನು ಕೇಳಿದ ಅತ್ಯಂತ ಪ್ರಾಮಾಣಿಕ, ಅಪ್ರಾಮಾಣಿಕತೆ ಇದು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.