ಹಲವು ವಿದೇಶಿಗರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವುದನ್ನು ನಾವು ಕೇಳಿರುತ್ತೇವೆ. ಅನೇಕರು ನಮ್ಮ ಬೆಂಗಳೂರಿಗೆ ಬಂದು ನೆಲೆಯೂರಿರುವ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಸದ್ಯ, ರಷ್ಯಾದ ಕುಟುಂಬವೊಂದು ಭಾರತದ ಸಂಸ್ಕೃತಿ ಮೆಚ್ಚಿ ಇಲ್ಲಿಯೇ ನೆಲೆಯೂರಲು ನಿರ್ಧರಿಸಿದೆ.
ರಷ್ಯಾ ಕುಟುಂಬವೊಂದು ಎತ್ತಿನ ಗಾಡಿಯಲ್ಲಿ ಕುಳಿತುಕೊಂಡು ಕನ್ನಡದ ಹಾಡಿಗೆ ರೀಲ್ಸ್ ಮಾಡಿದೆ. ಇದರ ಜೊತೆಗೆ ತಾವು ಯಾವ ಕಾರಣಕ್ಕೆ ಭಾರತವನ್ನು ಆಯ್ಕೆ ಮಾಡಿಕೊಂಡೆವು ಎಂಬುದಕ್ಕೆ ಅಡಿಬರಹ ಕೂಡ ನೀಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂನಲ್ಲಿ ‘ ನಾವು ಭಾರತದಲ್ಲಿ ವಾಸ ಮಾಡಲು ಆಯ್ಕೆ ಮಾಡಿಕೊಂಡಿರುವುದು ಪ್ರವಾಸಿಗರಾಗಿ ಅಲ್ಲ ಅಥವಾ ಅಲ್ಪಾವಧಿ ಜೀವನ ಕಳೆಯಲೂ ಅಲ್ಲ. ನಾವು ಜೀವನ ಪೂರ್ತಿ ಇಲ್ಲಿಯೇ ಇರಬೇಕು ಎಂದು ನಿರ್ಧರಿಸಿದ್ದೇವೆ. ನಮ್ಮ ಮನೆ, ದೈನಂದಿನ ದಿನಚರಿ, ಮಾರುಕಟ್ಟೆಗಳು, ಮಗವಿನ ಶಿಕ್ಷಣ ಎಲ್ಲವನ್ನು ಇಲ್ಲಿಯೇ ಪಡೆಯಬೇಕೆಂಬ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಭಾರತವು ನಮಗೆ ಸರಳ ಜೀವನವನ್ನು ಕಲಿಸಿಕೊಟ್ಟಿದೆ. ಇಲ್ಲಿನ ಜೀವನ ಆತುರದಿಂದ ಕೂಡಿರದೆ, ಬಹಳ ಆರಾಮದಾಯಕವಾಗಿರುತ್ತದೆ‘ ಎಂದು ಬರೆದುಕೊಂಡಿದ್ದಾರೆ.
‘ಸ್ಥಳೀಯರನ್ನು ನಾವು ಪ್ರೀತಿಸಲು ಆರಂಭಿಸಿದ್ದೇವೆ. ಅವರ ಮುಕ್ತತೆ, ದಯೆ, ಸಹಾಯ ಮಾಡುವ ಗುಣಗಳನ್ನು ನಾವೂ ಅಳವಡಿಕೊಳ್ಳುತ್ತಿದ್ದೇವೆ. ಇಲ್ಲಿ ಕಳೆಯುವ ಪ್ರತಿಯೊಂದು ಕ್ಷಣವನ್ನು ಕೂಡ ಅನುಭವಿಸುತ್ತೇವೆ. ಇಲ್ಲಿನ ಭಾಷೆ, ಆಚರಣೆ ಹಾಗೂ ಹಬ್ಬಗಳು ಎಲ್ಲವೂ ನಮಗೆ ತುಂಬಾ ಇಷ್ಟವಾಗಿವೆ‘ ಎಂದು ಹೇಳಿದ್ದಾರೆ.
ಮಕ್ಕಳ ಭವಿಷ್ಯದ ಕುರಿತು ಮಾತನಾಡಿರುವ ಅವರು ’ಇಲ್ಲಿ ನಾವು ವಾಸಿಸುವುದರಿಂದ ನಮ್ಮ ಮಕ್ಕಳ ಭವಿಷ್ಯ ಕೂಡಾ ಉತ್ತಮವಾಗಿರುತ್ತದೆ. ಮುಕ್ತ ಮನಸ್ಸಿನಿಂದ ಎಲ್ಲರ ಜೊತೆ ಹೊಂದಿಕೊಳ್ಳುವುದನ್ನು ಕಲಿಯುತ್ತಾರೆ. ಇಲ್ಲಿನ ಬಹುಭಾಷಾ ಮತ್ತು ಸಂಸ್ಕೃತಿಯನ್ನು ಕಲಿಯಲು ಅನುಕೂಲಕರವಾಗಿದೆ’ ಎಂದು ಹೇಳಿದ್ದಾರೆ.
ಕಾಮೆಂಟ್‌ನಲ್ಲಿ ಪ್ರತಿಕ್ರೆಯೆ:
ಈ ವಿಡಿಯೋ ನೋಡಿದ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವರು ವಿಡಿಯೊದಲ್ಲಿ ಕನ್ನಡ ಹಾಡು ಬಳಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಭಾರತೀಯರು ನಿಮ್ಮನ್ನು ಗೌರವಿಸುತ್ತಾರೆ, ಭಾರತೀಯರೆಲ್ಲರೂ ಒಂದು ಕುಟುಂಬ, ಹೀಗೆ ಹತ್ತು ಹಲವು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.