
ರಷ್ಯಾದ ಸೆನಿಯಾ ಷಕಿರ್ಝಿಯಾನೊವಾ
ಕೃಪೆ: ಇನ್‌ಸ್ಟಾಗ್ರಾಮ್ / Kseniia Shakirzianova
ಭಾರತಕ್ಕೆ ಸ್ಥಳಾಂತರಗೊಂಡ ನಂತರ ವಿದೇಶಿಯರ ಜೀವನಶೈಲಿಯಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಇರುವ ಕೆಲವು ಸಾಮಾನ್ಯ ಅಭಿಪ್ರಾಯಗಳ ಕುರಿತು ರಷ್ಯಾ ಮಹಿಳೆಯೊಬ್ಬರು ಮುಕ್ತವಾಗಿ ಮಾತನಾಡಿದ್ದಾರೆ. ಸದ್ಯ ಭಾರತದಲ್ಲಿ ನೆಲೆಸಿರುವ ಅವರು ಹಂಚಿಕೊಂಡಿರುವ ವಿಡಿಯೊ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಸೆನಿಯಾ ಷಕಿರ್ಝಿಯಾನೊವಾ ಎಂಬ ಮಹಿಳೆ, 'ಭಾರತದಲ್ಲಿ ಮೂರು ವರ್ಷಗಳಿಂದ ಉಳಿದುಕೊಂಡಿದ್ದೇನೆ. ನಿಮಗೆ, ಕೆಲವು ಮಿಥ್ಯೆಗಳ ಬಗ್ಗೆ ಸ್ಪಷ್ಟನೆ ನೀಡುತ್ತೇನೆ' ಎನ್ನುತ್ತಾ ಮಾತು ಆರಂಭಿಸಿದ್ದಾರೆ.
ಭಾರತದ ಬಿಸಿಲು ವಿದೇಶಿಯರನ್ನು ಕಪ್ಪಾಗಿಸಲಿದೆ ಎಂಬ ಕಲ್ಪನೆ ಕುರಿತು, 'ಭಾರತದಲ್ಲಿ ಬಿಸಿಲಿನಿಂದ ಕಪ್ಪಾಗುವೆ ಎಂದು ಹಲವರು ನನಗೆ ಹೇಳಿದ್ದರು. ಆದರೆ, ನಾನು ಈವರೆಗೂ ಬಣ್ಣಗುಂದಿಲ್ಲ' ಎಂದಿದ್ದಾರೆ.
ಇಲ್ಲಿನ ಆಹಾರಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ, 'ಭಾರತದ ಆಹಾರ ಸೇವಿಸಿದ ನಂತರವೂ ನಾನು ದಪ್ಪ ಆಗಿಲ್ಲ. ಇಲ್ಲಿನ ಆಹಾರವು ತುಂಬಾ ಎಣ್ಣೆಯುಕ್ತವಾಗಿರುತ್ತವೆ ಎಂಬುದಾಗಿ ನನಗೆ ಎಚ್ಚರಿಸಲಾಗಿತ್ತು' ಎಂದು ಹೇಳಿಕೊಂಡಿದ್ದಾರೆ.
ಸಂಸ್ಕೃತಿ ವಿಚಾರವಾಗಿ ಕೆಲವು ತಪ್ಪುಕಲ್ಪನೆಗಳಿವೆ ಎಂದಿರುವ ಸೆನಿಯಾ, 'ತಾವೇನೂ ನಿತ್ಯ ಸೀರೆಯುಡುವುದಿಲ್ಲ'ವೆಂದು ನಕ್ಕಿದ್ದಾರೆ. ಹಾಗೆಯೇ, 'ಆಘಾತವಾಯಿತಾ?' ಎಂದು ತಮಾಷೆಯಾಗಿ ಕೇಳಿದ್ದಾರೆ.
ಮುಂದುವರಿದು, ತಮ್ಮ ಜೀವನವನ್ನು ಆಧ್ಯಾತ್ಮಿಕವಾಗಿಯೇನೂ ಬದಲಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸುತ್ತಾ, ತಾವು ಏಕಾಂತವಾಸದಲ್ಲಿ ಕಳೆದುಹೋಗಿಲ್ಲ ಎಂದಿದ್ದಾರೆ. ಹಾಗೆಯೇ, 'ಖಂಡಿತವಾಗಿಯೂ ನಾನು ದಿನಕ್ಕೆ ಐದು ಸಲ ಮಸಾಲ ಟೀ ಕುಡಿಯುತ್ತಿಲ್ಲ' ಎಂದು ಹಾಸ್ಯ ಮಾಡಿದ್ದಾರೆ.
ಕೊನೆಯಲ್ಲಿ, 'ಭಾರತವು ನನ್ನಲ್ಲಿ ಏಕತಾನತೆ ಮೂಡಿಸಿಲ್ಲ. ಅದು ಭಾರತದಲ್ಲೇ ಉಳಿಯಿತು. ನಾನು ನಾನಾಗಿಯೇ ಉಳಿದೆ' ಎಂದಿದ್ದಾರೆ.
ರಷ್ಯಾ ಮಹಿಳೆಯ ಅಭಿಪ್ರಾಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಭಾರತದ ಸಂಸ್ಕೃತಿಯ ಬಗ್ಗೆ ಆಸಕ್ತಿ ಇರುವ ವಿದೇಶಿಯರನ್ನು ನೋಡಿದರೆ ಖುಷಿಯಾಗುತ್ತದೆ' ಎಂಬುದಾಗಿ ಒಬ್ಬರು ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು, 'ಭಾರತದ ಕುರಿತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿದ್ದಕ್ಕಾಗಿ ಧನ್ಯವಾದಗಳು' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.