ADVERTISEMENT

ಟ್ವಿಟರ್‌ ಪ್ರಕಾರ ಲೇಹ್‌, ಜಮ್ಮು–ಕಾಶ್ಮೀರ ಚೀನಾದ ಭಾಗ!

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 11:58 IST
Last Updated 19 ಅಕ್ಟೋಬರ್ 2020, 11:58 IST
ಟ್ವಿಟರ್‌ ಜಿಯೊ ಟ್ಯಾಗ್‌ನಲ್ಲಿ ಹಾಲ್‌ ಆಫ್‌ ಫೇಮ್‌
ಟ್ವಿಟರ್‌ ಜಿಯೊ ಟ್ಯಾಗ್‌ನಲ್ಲಿ ಹಾಲ್‌ ಆಫ್‌ ಫೇಮ್‌    

ಬೆಂಗಳೂರು: ಟ್ವಿಟರ್‌ ಜಮ್ಮು ಮತ್ತು ಕಾಶ್ಮೀರ ಪ್ರದೇಶವನ್ನು ಚೀನಾದ ಭಾಗವೆಂದು ತೋರಿಸಿದ್ದು, ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರೊಬ್ಬರು ಲಡಾಖ್‌ನ ಲೇಹ್‌ನಲ್ಲಿರುವ ಯುದ್ಧ ಸ್ಮಾರಕದಿಂದ ಟ್ವಿಟರ್‌ ಲೈವ್‌ ಮಾಡುವ ಸಂದರ್ಭದಲ್ಲಿ ಆ ಪ್ರದೇಶವು 'ರಿಪಬ್ಲಿಕ್‌ ಆಫ್‌ ಚೀನಾ' ಎಂದು ಟ್ಯಾಗ್‌ ಆಗಿತ್ತು.

ರಾಷ್ಟ್ರೀಯ ಭದ್ರತಾ ವಿಶ್ಲೇಷಕ ಮತ್ತು ಲೇಖಕ ನಿತಿನ್‌ ಗೋಖಲೆ ಅವರು ಭಾನುವಾರ ಲೇಹ್‌ನ ಹಾಲ್‌ ಆಫ್‌ ಫೇಮ್‌ನಿಂದ ಟ್ವಿಟರ್‌ನಲ್ಲಿ ಲೈವ್‌ ಬ್ರಾಡ್‌ಕಾಸ್ಟ್‌ ನಡೆಸಿದ್ದಾರೆ. ದೇಶದ ರಕ್ಷಣೆಗಾಗಿ ಹೋರಾಡಿದ ಯೋಧರ ನೆನಪಿಗಾಗಿ ಅಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಆದರೆ, ಟ್ವಿಟರ್‌ ಲೈವ್‌ ವಿಡಿಯೊದ ಜಿಯೊ ಟ್ಯಾಗ್‌ನಲ್ಲಿ ಆ ಪ್ರದೇಶವು 'ಜಮ್ಮು ಮತ್ತು ಕಾಶ್ಮೀರ, ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ' ಎಂದು ಕಾಣಿಸಿದೆ. ತಕ್ಷಣವೇ ಗೋಖಲೆ ಅವರು ಟ್ವಿಟರ್‌ ಮತ್ತು ಟ್ವಿಟರ್‌ ಇಂಡಿಯಾ ಅಧಿಕೃತ ಖಾತೆಗಳನ್ನು ಟ್ಯಾಗ್‌ ಮಾಡಿ ತಪ್ಪು ಗಮನಿಸುವಂತೆ ತಿಳಿಸಿದ್ದಾರೆ.

'ಟ್ವಿಟಿಗರೇ, ನಾನು ಈಗ ತಾನೇ ಹಾಲ್‌ ಆಫ್‌ ಫೇಮ್‌ನಿಂದ ಲೈವ್‌ ಮಾಡಿದೆ. ಲೊಕೇಶ್‌ನಲ್ಲಿ ಹಾಲ್‌ ಆಫ್‌ ಫೇಮ್‌ ಎಂದು ಕೊಟ್ಟಿದ್ದೆ, ಅದನ್ನು ಟ್ವಿಟರ್‌ ಏನೆಂದು ತೋರಿಸಿದೆ ಊಹಿಸುವಿರಾ, ಜಮ್ಮು ಮತ್ತು ಕಾಶ್ಮೀರ, ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ!' ಎಂದು ಗೋಖಲೆ ಅವರು ಟ್ವಿಟಿಸಿದ್ದಾರೆ. ಇತರೆ ಟ್ವೀಟಿಗರೂ ಸಹ ಲೆಹ್‌ನ ಹಾಲ್‌ ಆಫ್‌ ಫೇಮ್‌ ಲೊಕೇಶ್‌ ಟ್ಯಾಗ್‌ ಮಾಡಿ ಲೈವ್‌ ಮಾಡಿ ಎಂದಿದ್ದಾರೆ.

ADVERTISEMENT

ನಿತಿನ್‌ ಗೋಖಲೆ ಅವರು ಸ್ಟ್ರಾಟ್‌ ನ್ಯೂಸ್‌ ಗ್ಲೋಬಲ್‌ನ ಪ್ರಧಾನ ಸಂಪಾದಕರಾಗಿದ್ದಾರೆ. ಅವರು ಇತ್ತೀಚೆಗಷ್ಟೇ ಲೇಹ್‌–ಮನಾಲಿ ಹೆದ್ದಾರಿಯಾದ ಅಟಲ್‌ ಟನಲ್‌ ಹಾಗೂ ಶಿಂಕುಲಾ ಪಾಸ್‌ಗೆ ಭೇಟಿ ನೀಡಿರುವುದಾಗಿ ಬರೆದುಕೊಂಡಿದ್ದಾರೆ.

ಇತರೆ ಟ್ವೀಟಿಗರೂ ಅದೇ ಲೊಕೇಶ್‌ ಟ್ಯಾಗ್‌ ಮಾಡಿ ಲೈವ್‌ ಬ್ರಾಡ್‌ಕಾಸ್ಟ್‌ ನಡೆಸಿದ್ದು, ಹಾಲ್‌ ಆಫ್‌ ಫೇಮ್‌ ಚೀನಾದ ಭಾಗವೆಂದೇ ತೋರಿಸಿದೆ. ಜಿಯೊ ಟ್ಯಾಗ್‌ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಟ್ವಿಟರ್‌ ವಕ್ತಾರರು ಹೇಳಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.