ADVERTISEMENT

ಅಮೆರಿಕ: ವಾಟ್ಸ್‌ಆ್ಯಪ್‌ನಿಂದ 'ಸಿಗ್ನಲ್‌' ಕಡೆಗೆ ತಿರುಗಿದ ಜನರ ಆಸಕ್ತಿ

ಏಜೆನ್ಸೀಸ್
Published 10 ಫೆಬ್ರುವರಿ 2021, 7:09 IST
Last Updated 10 ಫೆಬ್ರುವರಿ 2021, 7:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಾಷಿಂಗ್ಟನ್‌: ಖಾಸಗಿ ಮಾಹಿತಿಯ ಸುರಕ್ಷತೆ ಮತ್ತು ಗೋಪ್ಯತೆಗೆ ಸಂಬಂಧಿಸಿದಂತೆ ಸೃಷ್ಟಿಯಾದ ಗೊಂದಲಗಳಿಂದ ಅಮೆರಿಕದ ವಾಟ್ಸ್‌ಆ್ಯಪ್‌ ಬಳಕೆದಾರರು ಬೇರೆ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳತ್ತ ಮುಖ ಮಾಡತೊಡಗಿದ್ದಾರೆ.

ವಾಟ್ಸ್‌ಆ್ಯಪ್‌ ಬಳಕೆದಾರರ ಖಾಸಗಿ ಮಾಹಿತಿಯನ್ನು ಫೇಸ್‌ಬುಕ್‌ ಜೊತೆಗೆ ಹಂಚಿಕೊಳ್ಳುವ ವಿಚಾರ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಆ ಕಾರಣ ಅಮೆರಿಕದಲ್ಲಿ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಾದ 'ಸಿಗ್ನಲ್‌' ಕಡೆಗೆ ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಸ್ತುತ ಫೇಸ್‌ಬುಕ್ ಒಡೆತನದಲ್ಲಿರುವ ವಾಟ್ಸ್ ಆ್ಯಪ್, 'ಹೊಸ ಪ್ರೈವೆಸಿ ಅಪ್‌ಡೇಟ್ ಅನ್ನು ಎಲ್ಲ ಬಳಕೆದಾರರು ಒಪ್ಪಲೇಬೇಕು' ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

ADVERTISEMENT

ಆ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಮೂಲಕ ಸ್ಪಷ್ಟನೆ ನೀಡಿದ್ದ ಫೇಸ್‌ಬುಕ್‌ ಸಂಸ್ಥೆಯು, 'ನಾವು ನಿಮ್ಮ ಖಾಸಗಿತನ ರಕ್ಷಿಸಲು ಬದ್ಧರಾಗಿದ್ದೇವೆ. ಬಳಕೆದಾರರ ವೈಯಕ್ತಿಕ ಮಾಹಿತಿ, ಸಂದೇಶಗಳನ್ನು ಓದಲು ಯಾರಿಂದಲೂ ಸಾಧ್ಯವಿಲ್ಲ. ಅಲ್ಲದೆ, ನೀವು ಹಂಚಿಕೊಂಡಿರುವ ಸ್ಥಳದ ಹೆಸರನ್ನು ವಾಟ್ಸ್‌ಆ್ಯಪ್‌ನಿಂದ ನೋಡಲು ಸಾಧ್ಯವಿಲ್ಲ. ಜತೆಗೆ ನಿಮ್ಮ ಬಗೆಗಿನ ಯಾವುದೇ ಮಾಹಿತಿಯನ್ನು ಫೇಸ್‌ಬುಕ್ ಜತೆ ಹಂಚಿಕೊಳ್ಳುವುದಿಲ್ಲ' ಎಂದು ತಿಳಿಸಿತ್ತು.

ಈ ಬಗ್ಗೆ ಮಾತನಾಡಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಟೆಕ್‌ ಪಾಲಿಸಿ ಲ್ಯಾಬ್‌ನ ಸಂಶೋಧಕ ರಿಯಾನ್ ಕಾಲೊ, 'ಅನೇಕ ಬಳಕೆದಾರರು ವಾಟ್ಸ್‌ಆ್ಯಪ್‌ನ ಹೊಸ ನೀತಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆ ಕಾರಣ ವಾಟ್ಸ್‌ಆ್ಯಪ್‌ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ಕಂಡುಬರುತ್ತಿದೆ' ಎಂದು ಹೇಳಿದ್ದಾರೆ.

'ವಾಟ್ಸ್‌ಆ್ಯಪ್‌ನ ಮಾಲಿಕತ್ವ ಹೊಂದಿರುವ ಫೇಸ್‌ಬುಕ್‌ ಸಂಸ್ಥೆಯು ತನ್ನ ವ್ಯವಹಾರ ವೃದ್ಧಿಗಾಗಿ ಗೋಪ್ಯತೆ ನೀತಿಯನ್ನು ಬದಲಿಸಿದ್ದು ಪ್ರಮಾದವಾಗಿದೆ' ಎಂಬ ಅಭಿಪ್ರಾಯವನ್ನೂ ರಿಯಾನ್‌ ಕಾಲೊ ವ್ಯಕ್ತಪಡಿಸಿದ್ದಾರೆ.

ನೂತನ ಪ್ರೈವೆಸಿ ಅಪ್‌ಡೇಟ್ ವಿಚಾರ ವಿವಾದಕ್ಕೆ ಕಾರಣವಾಗುತ್ತಲೇ ವಾಟ್ಸ್ ಆ್ಯಪ್ ಹೊಸ ಅಪ್‌ಡೇಟ್ ಅನ್ನು ಮೇ ತಿಂಗಳಿಗೆ ಮುಂದೂಡಿದೆ. ಅಲ್ಲದೆ, ಫೆಬ್ರುವರಿ 8ರಂದು ಯಾರ ವಾಟ್ಸ್ ಆ್ಯಪ್ ಖಾತೆಯೂ ನಿಷ್ಕ್ರಿಯವಾಗುವುದಿಲ್ಲ ಎಂದು ತಿಳಿಸಿದೆ.

ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಪತ್ರಕರ್ತರು, ವಕೀಲರು, ಸಂಶೋಧಕರು, ಭದ್ರತಾ ತಜ್ಞರು ಸಿಗ್ನಲ್‌ ಆ್ಯಪ್‌ ಹೆಚ್ಚು ಬಳಕೆ ಮಾಡುತ್ತಿದ್ದು, ಟ್ವಿಟರ್ ಸಿಇಒ ಜ್ಯಾಕ್ ಡೋರ್ಸಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ಬಹಿರಂಗ ಪಡಿಸಿದ್ದ ಎಡ್ವರ್ಡ್‌ ಸ್ನೋಡೆನ್‌ ಈ ಆ್ಯಪ್‌ನ ಹಿಂದಿದ್ದಾರೆ.

ಸಿಗ್ನಲ್‌ ಫೌಂಡೇಷನ್‌ ಮತ್ತು ಸಿಗ್ನಲ್‌ ಮೆಸೆಂಜರ್‌ ಎಲ್‌ಎಲ್‌ಸಿ ಕಂಪನಿ ಈ ಆ್ಯಪ್‌ ಅಭಿವೃದ್ಧಿ ಪಡಿಸಿದೆ. ವಾಟ್ಸ್‌ಆ್ಯಪ್‌ನ ಸಹ–ಸಂಸ್ಥಾಪಕ ಬ್ರಿಯಾನ್‌ ಆಕ್ಟನ್‌ ಮತ್ತು ಸಿಗ್ನಲ್‌ ಮೆಸೆಂಜರ್‌ ಸಿಇಒ ಮಾಕ್ಸಿ ಮಾರ್ಲಿನ್‌ಸ್ಪೈಕ್‌ ಸಿಗ್ನಲ್‌ ಫೌಂಡೇಷನ್‌ ಸ್ಥಾಪಿಸಿದರು. 2017ರಲ್ಲಿ ವಾಟ್ಸ್‌ಆ್ಯಪ್‌ನಿಂದ ಹೊರಬಂದ ಆಕ್ಟನ್‌ 'ಸಿಗ್ನಲ್‌'ಗಾಗಿ 50 ಮಿಲಿಯನ್‌ ಡಾಲರ್‌ ದೇಣಿಗೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.