ADVERTISEMENT

ಕೋವಿಡ್‌–19 ಆತಂಕ: ವಾಟ್ಸ್‌ಆ್ಯಪ್‌ ಬಳಕೆ ಶೇ 40ರಷ್ಟು ಏರಿಕೆ

ಏಜೆನ್ಸೀಸ್
Published 27 ಮಾರ್ಚ್ 2020, 10:48 IST
Last Updated 27 ಮಾರ್ಚ್ 2020, 10:48 IST
ಮೊಬೈಲ್‌ ಅಪ್ಲಿಕೇಷನ್‌ಗಳ ಸಂಗ್ರಹ
ಮೊಬೈಲ್‌ ಅಪ್ಲಿಕೇಷನ್‌ಗಳ ಸಂಗ್ರಹ    

ದೇಶದಾದ್ಯಂತ ಲಾಕ್‌ಡೌನ್‌, ಕೆಲಸವೂ ಮನೆಯಿಂದಲೇ...ಇಡೀ ದಿನ ಮನೆಯಲ್ಲಿಯೇ ಇರುವುದರಿಂದ ಹೊರ ಜಗತ್ತಿನೊಂದಿಗೆ ಸಂಪರ್ಕ, ಬೇಸರ ಕಳೆಯಲು ಸ್ಮಾರ್ಟ್‌ಫೋನ್‌ ಮತ್ತು ಅಂತರ್ಜಾಲದ ಬಳಕ್ಕೆ ಹೆಚ್ಚಿದೆ. ಕೆಲವು ಮೊಬೈಲ್‌ ಅಪ್ಲಿಕೇಷನ್‌ಗಳಂತೂ ಅತಿ ಹೆಚ್ಚು ಬಳಕೆಯಾಗುತ್ತಿವೆ. ಇದರಲ್ಲಿ ವಾಟ್ಸ್‌ಆ್ಯಪ್‌ ಬಳಸುವವರ ಪ್ರಮಾಣ ಶೇ 40ರಷ್ಟು ಹೆಚ್ಚಿದೆ.

ಮನೆಯಿಂದಲೇ ಕಾರ್ಯನಿರ್ವಹಣೆ ಸಹಕಾರಿಯಾಗುವ ಆ್ಯಪ್‌ಗಳು, ವಿಡಿಯೊ ಕಾಲಿಂಗ್‌ ಹಾಗೂ ಸಾಮಾಜಿಕ ಸಂಪರ್ಕ ಮಾಧ್ಯಮ ಆ್ಯಪ್‌ಗಳ ಬಳಕೆಯಲ್ಲಿ ಏರಿಕೆಯಾಗಿದೆ. ಕೋವಿಡ್‌–19 ಪ್ರಭಾವ ಹೆಚ್ಚುತ್ತಿದ್ದಂತೆ ಮನೆಯಿಂದ ಮೊಬೈಲ್‌ ಮೊರೆ ಹೋಗುತ್ತಿರುವವರ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ. ಕೊರೊನಾ ವೈರಸ್‌ ಸೋಂಕು ವ್ಯಾಪಿಸುವ ಆತಂಕ ಎದುರಾದ ಆರಂಭದಲ್ಲಿ ವಾಟ್ಸ್‌ಆ್ಯಪ್‌ ಬಳಕೆ ಶೇ 27ರಷ್ಟು ಹೆಚ್ಚಿತ್ತು. ಅನಂತರದಲ್ಲಿ ಶೇ 41 ಹಾಗೂ ಶೇ 51ರಷ್ಟು ಏರಿಕೆ ಕಂಡಿತು.

ಪ್ರಾಂತ್ಯವಾರು ಬಳಕೆದಾರರ ಲೆಕ್ಕಾಚಾರ ವರದಿಯಾಗಿಲ್ಲ. ಆದರೆ, ಸ್ಪೇನ್‌ನಲ್ಲಿ ಅತ್ಯಧಿಕ ಶೇ 76ರಷ್ಟು ವಾಟ್ಸ್‌ಆ್ಯಪ್‌ ಬಳಕೆ ಏರಿಕೆಯಾಗಿರುವುದಾಗಿ ಕಾಂಟರ್‌ ವರದಿ ಮಾಡಿದೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಅಪ್ಲಿಕೇಷನ್‌ಗಳನ್ನು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೆಚ್ಚು ಬಳಸುತ್ತಿದ್ದು, ಶೇ 40ರಷ್ಟು ಬಳಕೆ ಹೆಚ್ಚಿಸಿಕೊಂಡಿವೆ. ಇನ್ನೂ 18–34 ವರ್ಷ ವಯಸ್ಸಿನವರು ಮೆಸೇಜಿಂಗ್‌ ಅಪ್ಲಿಕೇಷನ್‌ಗಳ ಬಳಕೆ ಹೆಚ್ಚಿಸಿಕೊಂಡಿದ್ದಾರೆ.

ADVERTISEMENT

ಜಾಗತಿಕವಾಗಿ ಮೆಸೇಜ್‌ ರವಾನೆ ಶೇ 50ರಷ್ಟು ಏರಿಕೆಯಾಗಿರುವುದಾಗಿ ಕಳೆದ ವಾರ ಫೇಸ್‌ಬುಕ್‌ ಹೇಳಿತ್ತು. ಕೋವಿಡ್‌–19 ಸಾಂಕ್ರಾಮಿಕ ಹೆಚ್ಚು ಪರಿಣಾಮ ಬೀರಿರುವ ಪ್ರದೇಶಗಳಲ್ಲಿ ಮೆಸೆಂಜರ್‌ ಹಾಗೂವಾಟ್ಸ್‌ಆ್ಯಪ್‌ಮೂಲಕ ವಿಡಿಯೊ ಮತ್ತು ವಾಯ್ಸ್‌ ಕಾಲಿಂಗ್‌ ಮಾಡುವ ಪ್ರಮಾಣ ದುಪ್ಪಟ್ಟಾಗಿದೆ. ಇಟಲಿಯಲ್ಲಿ ಫೇಸ್‌ಬುಕ್‌ ಆ್ಯ‍ಪ್‌ನಲ್ಲಿ ಸಮಯ ಕಳೆಯುವ ಪ್ರಮಾಣ ಶೇ 70ರಷ್ಟು ಹೆಚ್ಚಿದ್ದು, ಗ್ರೂಪ್‌ ಕಾಲಿಂಗ್‌ ಶೇ 1,000ದಷ್ಟು ಏರಿಕೆಯಾಗಿದೆ.

ಸಂಪರ್ಕಗಳಿಗಾಗಿ ಈ ಅಪ್ಲಿಕೇಷನ್‌ಗಳು ಉತ್ತಮ ಮಾಧ್ಯಮಗಳಾಗಿವೆ. ಆದರೆ, ಇವುಗಳ ಮೂಲಕ ಹರಡುತ್ತಿರುವ ಸುದ್ದಿಗಳು ನಂಬಲರ್ಹವಾಗಿಲ್ಲ. ಸುದ್ದಿಗಳು, ಮಾಹಿತಿಗಳಿಗೆ ಶೇ 11ರಷ್ಟು ಬಳಕೆದಾರರು ಮಾತ್ರ ಸಾಮಾಜಿಕ ಸಂಪರ್ಕ ಮಾಧ್ಯಮಗಳ ಮೇಲೆ ಅವಲಂಬಿತರಾಗಿದ್ದಾರೆ. ನಂಬಲು ಅರ್ಹವಾದ ಸುದ್ದಿಗಳಿಗಾಗಿ ಶೇ 52ರಷ್ಟು ಜನರು ಮಾಧ್ಯಮಗಳು, ಪತ್ರಿಕೆಗಳನ್ನು ಅವಲಂಬಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಸುಳ್ಳು ಸುದ್ದಿಗಳು ಹರಿದಾಡಿದ ಕಾರಣ, ಬಹುತೇಕ ಬಳಕೆದಾರರು ಇಂಥ ಮಾಧ್ಯಮಗಳಲ್ಲಿ ಸಿಗುವ ಮಾಹಿತಿಗಳ ಮೇಲೆ ವಿಶ್ವಾಸ ಕಳೆದು ಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.