ADVERTISEMENT

WhatsApp: ಭದ್ರತೆ, ಗೌಪ್ಯತೆಗೆ ಸಂಬಂಧಿಸಿದ ನೂತನ ಅಪ್‌ಡೇಟ್ ಮುಂದೂಡಲು ನಿರ್ಧಾರ

ಏಜೆನ್ಸೀಸ್
Published 16 ಜನವರಿ 2021, 1:56 IST
Last Updated 16 ಜನವರಿ 2021, 1:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್‌ನ ನೂತನ 'ಪ್ರೈವೆಸಿ ಅಪ್‌ಡೇಟ್' ಕುರಿತು ಬಳಕೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬಳಕೆದಾರರ ಭದ್ರತೆ ಮತ್ತು ಖಾಸಗಿತನಕ್ಕೆ ಸಂಬಂಧಿಸಿದ ಅಪ್‌ಡೇಟ್‌ ಅನ್ನು ಮುಂದೂಡಲು ವಾಟ್ಸ್ಆ್ಯಪ್‌ ಮಾಡಲಿದೆ.

ವಾಟ್ಸ್ಆ್ಯಪ್ ಹೊಸ ಅಪ್‌ಡೇಟ್‌ನಲ್ಲಿ ಫೇಸ್‌ಬುಕ್ ಜತೆಗೆ ಬಳಕೆದಾರರ ದತ್ತಾಂಶವನ್ನು ಹಂಚಿಕೊಳ್ಳುತ್ತದೆ ಎನ್ನಲಾಗಿತ್ತು. ಅದರ ಮಧ್ಯೆಯೇ ಜನರು ವಾಟ್ಸ್ಆ್ಯಪ್ ಹೊಸ ನೀತಿ ಕುರಿತು ಅಸಮಾಧಾನ ವ್ಯಕ್ತಪಡಿಸಿ, ವಾಟ್ಸ್ ಆ್ಯಪ್‌ಗೆ ಪರ್ಯಾಯವಾಗಿ ಟೆಲಿಗ್ರಾಂ ಮತ್ತು ಸಿಗ್ನಲ್ ಅ್ಯಪ್ ಬಳಸಲು ಮುಂದಾದರು.

ವಾಟ್ಸ್ಆ್ಯಪ್ ಹೊಸ ನೀತಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ, ಹೇಳಿಕೆ ಬಿಡುಗಡೆ ಮಾಡಿದ್ದ ಫೇಸ್‌ಬುಕ್, 'ಹೊಸ ಅಪ್‌ಡೇಟ್‌ನಿಂದಾಗಿ ಖಾಸಗಿ ಮಾಹಿತಿಯ ಶೇರಿಂಗ್ ಕುರಿತಾಗಿ ಯಾವುದೇ ಬದಲಾವಣೆ ಮಾಡಿಲ್ಲ. ಖಾಸಗಿ ಚಾಟ್‌ಗಳ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಮುಂದುವರಿಯುತ್ತದೆ ಮತ್ತು ಅದನ್ನು ಫೇಸ್‌ಬುಕ್ ಮೂಲಕ ಓದಲಾಗದು' ಎಂದು ಸ್ಪಷ್ಟನೆ ನೀಡಿತ್ತು.

ADVERTISEMENT

ಫೆಬ್ರವರಿಯಿಂದ ಹೊಸ ಅಪ್‌ಡೇಟ್‌ ಬಗ್ಗೆ ಘೋಷಿಸಿದ್ದ ವಾಟ್ಸ್ಆ್ಯಪ್, ಈಗ ಮೇ ತಿಂಗಳವರೆಗೆ ಅಪ್‌ಡೇಟ್‌ ಪ್ರಕ್ರಿಯೆಯನ್ನು ಮುಂದೂಡುವುದಾಗಿ ಶುಕ್ರವಾರ ಹೇಳಿದೆ. 'ಬಳಕೆದಾರರ ವ್ಯವಹಾರಗಳಿಗೆ ಸಂಬಂಧಿಸಿದ ಸಂದೇಶ ಕಳುಹಿಸಲು ಹೊಸ ಅಪ್‌ಡೇಟ್‌ ಅವಕಾಶ ನೀಡಲಿದೆ. ಇದು ವೈಯಕ್ತಿಕ ಸಂವಹನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಮುಂದುವರಿಯುತ್ತದೆ. ಹೊಸ ಅಪ್‌ಡೇಟ್‌ ಮೂಲಕ ದತ್ತಾಂಶಗಳನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವುದಿಲ್ಲ' ಎಂದು ವಾಟ್ಸ್ಆ್ಯಪ್ ಮತ್ತೊಮ್ಮೆ ಹೇಳಿಕೆ ನೀಡಿದೆ.

'ಪ್ರತಿಯೊಬ್ಬರೂ ಇಂದು ವಾಟ್ಸ್ಆ್ಯಪ್‌ನಲ್ಲಿ ವ್ಯವಹಾರವನ್ನು ಹೊಂದಿಲ್ಲ. ಆದರೆ, ಭವಿಷ್ಯದಲ್ಲಿ ಹೆಚ್ಚಿನ ಜನರು ವಾಟ್ಸ್ಆ್ಯಪ್‌ ಮೂಲಕ ವ್ಯವಹರಿಸಲು ಮುಂದಾಗಲಿದ್ದಾರೆ ಎಂಬುದಾಗಿ ನಾವು ಭಾವಿಸುತ್ತೇವೆ' ಎಂದು ವಾಟ್ಸ್ಆ್ಯಪ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಎಂಡ್ ಟು ಎಂಡ್ ಎನ್‌ಕ್ರಿಪ್ಷನ್- ಸಂದೇಶ ರವಾನಿಸುವ ವ್ಯಕ್ತಿಯಿಂದ ಅದನ್ನು ಸ್ವೀಕರಿಸುವ ವ್ಯಕ್ತಿಯವರೆಗೆ ಅಂದರೆ ನಡುವೆ ಎಲ್ಲಿಯೂ ಮೂರನೆಯ ವ್ಯಕ್ತಿಗೆ ದತ್ತಾಂಶ ಸೋರಿಕೆಯಾಗದಂತೆ ತಡೆಯುವ ತಂತ್ರಜ್ಞಾನ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.