ರೈಲಿನಲ್ಲಿ ಕೇಟಲ್ ಬಳಸುತ್ತಿರುವುದು
ಚಿತ್ರ ಕೃಪೆ; Woke Eminent@WokePandemic
ಜನಸಾಮಾನ್ಯರು ಪ್ರಯಾಣಕ್ಕಾಗಿ ಅತೀ ಹೆಚ್ಚು ಅವಲಂಬನೆಯಾಗಿರುವ ಪ್ರಮುಖ ಸಾರಿಗೆ ಅಂದರೆ ಅದು ರೈಲು. ರೈಲಿನಲ್ಲಿ ಬಡವರು, ಮಧ್ಯಮ ವರ್ಗದವರು ಮಾತ್ರವಲ್ಲ ಶ್ರೀಮಂತರು ಕೂಡ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇತರೆ ಗ್ಯಾಜೆಟ್ಸ್‌ಗಳನ್ನು ಚಾರ್ಜ್ ಮಾಡಲು ಅವಕಾಶವಿರುತ್ತದೆ. ಆದರೆ, ಚಲಿಸುತ್ತಿರುವ ರೈಲಿನಲ್ಲಿ ವಿದ್ಯುತ್ ಕೆಟಲ್ ಬಳಸಿ ಅಡುಗೆ ಮಾಡಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಮಹಿಳೆಯೊಬ್ಬರು ರೈಲು ಪ್ರಯಾಣದ ವೇಳೆ ವಿದ್ಯುತ್ ಕೆಟಲ್ ಬಳಸುತ್ತಿದ್ದಾರೆ. ಈ ವಿಡಿಯೊವನ್ನು ಸಹ ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ. ರೈಲಿನಲ್ಲಿ ವಿದ್ಯುತ್ ಕೆಟಲ್ ಬಳಸಲು ಅವಕಾಶವಿಲ್ಲ. ಹೀಗೆ ಬಳಕೆ ಮಾಡುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗುವ ಅಪಾಯವಿರುತ್ತದೆ. ಒಬ್ಬರು ಮಾಡುವ ಸಣ್ಣ ತಪ್ಪು ನೂರಾರು ಪ್ರಯಾಣಿಕರನ್ನು ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಇದೆ. ರೈಲ್ವೆ ಅಧಿಕಾರಿಗಳು ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರೈಲ್ವೆ ಇಲಾಖೆಯು, ವಿಡಿಯೊ ಹಂಚಿಕೊಂಡ ವ್ಯಕ್ತಿಗೆ ಪಿಎನ್‌ಆರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಲು ಇಲಾಖೆ ತಿಳಿಸಿದೆ. ಇಂತಹ ಘಟನೆಗಳು ನಡೆದಾಗ ನೇರವಾಗಿ railmadad.indianrailways.gov.in ಗೆ ಸಲ್ಲಿಸಬಹುದಾಗಿದೆ. ತ್ವರಿತ ಪರಿಹಾರಕ್ಕಾಗಿ 139 ಕರೆ ಮಾಡಬಹುದು ಎಂದು ತಿಳಿಸಿದೆ.
ಈ ರೀತಿಯ ಘಟನೆಗಳು ರೈಲಿನಲ್ಲಿ ನಡೆದಿರುವುದು ಇದೇ ಮೊದಲಲ್ಲ, ಈ ಹಿಂದೆ 2025ರ ನವೆಂಬರ್‌ನಲ್ಲಿ ಮಹಾರಾಷ್ಟ್ರದ ಮಹಿಳೆಯೊಬ್ಬರು ರೈಲಿನ ಎಸಿ ಕೋಚ್‌ನಲ್ಲಿ ವಿದ್ಯುತ್ ಕೆಟಲ್ ಬಳಸಿ ಮ್ಯಾಗಿ ಬೇಯಿಸುತ್ತಿದ್ದ ವಿಡಿಯೊ ಹರಿದಾಡಿತ್ತು.
ಇದಾದ ಬಳಿಕ ಮಹಿಳೆ ವಿರುದ್ಧ ರೈಲ್ವೆ ಇಲಾಖೆ ಕ್ರಮ ಕೈಗೊಂಡಿರುವುದಾಗಿ ಹೇಳಿತ್ತು. ಈ ರೀತಿಯ ಘಟನೆಗಳು ರೈಲು ಪ್ರಯಾಣದ ಸುರಕ್ಷತೆಯ ಬಗ್ಗೆ ಕಳವಳ ಉಂಟು ಮಾಡುತ್ತವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.