ADVERTISEMENT

‘ಎಕ್ಸ್‌’ನಲ್ಲಿ ಕಾನೂನುಬಾಹಿರ ಪೋಸ್ಟ್‌ ಹಂಚಿಕೊಂಡರೆ ಖಾತೆ ಅಮಾನತು

ಪಿಟಿಐ
Published 4 ಜನವರಿ 2026, 9:17 IST
Last Updated 4 ಜನವರಿ 2026, 9:17 IST
   

ನವದೆಹಲಿ: ಮೈಕ್ರೋಬ್ಲಾಗಿಂಗ್ ಸೈಟ್‌ ‘ಎಕ್ಸ್‌’ನಲ್ಲಿ ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕಲು ಮತ್ತು ಅಂತಹ ವಿಷಯಗಳನ್ನು ಪೋಸ್ಟ್‌ ಮಾಡುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲು ಸರ್ಕಾರಗಳೊಂದಿಗೆ ಕೆಲಸ ಮಾಡುತ್ತೇವೆ ಎಂದು ಇಲಾನ್‌ ಮಸ್ಕ್‌ ಒಡೆತನದ ಸಾಮಾಜಿಕ ಮಾಧ್ಯಮ ಭಾನುವಾರ ತಿಳಿಸಿದೆ.

ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಗ್ರೋಕ್‌’ ಬಳಸುವವರು ಅಶ್ಲೀಲ, ಕಾನೂನು ಬಾಹಿರ ವಿಷಯಗಳನ್ನು ರಚಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮಕ್ಕಳ ಮೇಲಿನ ದೌರ್ಜನ್ಯದ ವಿಷಯ ಸೇರಿದಂತೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಕಾನೂನುಬಾಹಿರ ವಿಷಯಗಳನ್ನು ತೆಗೆದು ಹಾಕಿ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುತ್ತದೆ. ಜತೆಗೆ ಸರ್ಕಾರದ ಮೂಲಕ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದೆ.

ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸುವ ಅಸಭ್ಯ, ಅಶ್ಲೀಲ ಮತ್ತು ಇತರ ಕಾನೂನುಬಾಹಿರ ವಿಷಯವನ್ನು ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಭಾರತ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.

ADVERTISEMENT

ಜನವರಿ 2 ರಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಮಸ್ಕ್ ಮತ್ತು ಗ್ಲೋಬಲ್ ಗೌವರ್ನಮೆಂಟ್‌ ಅಫೇರ್ಸ್‌ಗೆ ಎಐ ಅಪ್ಲಿಕೇಶನ್ ಗ್ರೋಕ್‌ನಿಂದ ರಚಿಸಲಾಗುವ ಎಲ್ಲಾ ಅಶ್ಲೀಲ, ಮತ್ತು ಕಾನೂನುಬಾಹಿರ ವಿಷಯವನ್ನು ತಕ್ಷಣ ತೆಗೆದುಹಾಕುವಂತೆ, ಇಲ್ಲದಿದ್ದರೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿತ್ತು.

ಜತೆಗೆ ಈ ಕುರಿತು ಕ್ರಮ ಕೈಗೊಂಡ ಬಗ್ಗೆ ವಿವರಗಳನ್ನು 72 ಗಂಟೆಯೊಳಗೆ ಸಲ್ಲಿಸುವಂತೆ ಸಚಿವಾಲಯವು ಅಮೆರಿಕ ಮೂಲದ ಸಾಮಾಜಿಕ ಮಾಧ್ಯಮ ಸಂಸ್ಥೆಗೆ ತಿಳಿಸಿತ್ತು.

ಈ ಹಿಂದೆ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಪತ್ರದ ಮೂಲಕ ಮಹಿಳೆಯರ ಅಶ್ಲೀಲ ಫೋಟೋಗಳನ್ನು ರಚಿಸಲು ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಎಐ ಅಪ್ಲಿಕೇಶನ್ ಗ್ರೋಕ್ ಅನ್ನು ದುರುಪಯೋಗಪಡಿಸಿಕೊಳ್ಳುವ ಘಟನೆಗಳು ಹೆಚ್ಚುತ್ತಿರುವ ಕುರಿತು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.