ADVERTISEMENT

‌ಹಲಸಿನ ಬೀಜದ ‘ಜಾಕೊಲೇಟ್‌, ಬಿಸ್ಕತ್‌’; ಐಐಎಚ್‌ಆರ್‌ ತಂತ್ರಜ್ಞಾನ

ಸಿ.ಎಸ್.ನಿರ್ವಾಣ ಸಿದ್ದಯ್ಯ
Published 9 ಮಾರ್ಚ್ 2021, 19:30 IST
Last Updated 9 ಮಾರ್ಚ್ 2021, 19:30 IST
ಚಿತ್ರಗಳು: ಐಐಎಚ್‌ಆರ್‌
ಚಿತ್ರಗಳು: ಐಐಎಚ್‌ಆರ್‌   

ಹಲಸಿನ ಹಣ್ಣಿನಿಂದ ಚಿಪ್ಸ್, ಹಣ್ಣಿನ ತೊಳೆ(ಸೊಳೆ)ಗಳ ನಿರ್ಜಲೀಕರಣ, ಹಲಸಿನ ಹಣ್ಣಿನ ಮಿಲ್ಕ್ ಶೇಕ್‌, ಹಲಸಿನ ಕಾಯಿಯಿಂದ ಪುಡಿ – ಹೀಗೆ ಹಲವು ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗಿ ಮಾರುಕಟ್ಟೆಗೂ ಬಂದಿವೆ. ಆದರೆ ಹಲಸಿನ ಬೀಜಗಳನ್ನು ಉಪಯೋಗಿಸಿ ತಯಾರಿಸಿದ ಆಹಾರ ಉತ್ಪನ್ನಗಳ ಬಳಕೆ ಇರಲಿಲ್ಲ.

ಈಗ ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌) ಹಲಸಿನ ಬೀಜವನ್ನೂ ಮೌಲ್ಯವರ್ಧಿಸಿ, ಅದರಿಂದ ಬಿಸ್ಕತ್ತು ಮತ್ತು ಚಾಕೊಲೇಟ್‌ ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ತಂತ್ರಜ್ಞಾನ ನಮ್ಮ ಆಹಾರಪದ್ಧತಿಗೂ ಹೊಸ ಆಯಾಮಗಳನ್ನು ನೀಡಬಲ್ಲದು; ಮಾತ್ರವಲ್ಲ, ಸಮಾಜದಲ್ಲಿ ಹೊಸ ಬಗೆಯ ಉದ್ಯೋಗಾವಕಾಶಗಳನ್ನೂ ಹೆಚ್ಚಿಸುತ್ತದೆ ಎಂಬುದನ್ನು ಇಂಥ ಸಂಶೋಧನೆಗಳು ನಿರೂಪಿಸುತ್ತಲೇ ಇವೆ.

ಹಲಸಿನ ಬೀಜದಿಂದ ತಯಾರಿಸಿದ ಚಾಕೊಲೇಟ್‌ಗೆ – ಜಾಕೊಲೇಟ್ ಎಂದು ಹೆಸರಿಸಲಾಗಿದೆ. ಈ ಎರಡೂ ತಿನಿಸುಗಳ ಸಿದ್ಧಪಡಿಸುವ ತಂತ್ರಜ್ಞಾನವನ್ನು ಸಂಶೋಧನಾ ಕೇಂದ್ರದ ವಿಜ್ಞಾನಿ ಕೆ.ಸಿ. ನಾರಾಯಣ್‌ ಅಭಿವೃದ್ಧಿಪಡಿಸಿದ್ದಾರೆ.

ADVERTISEMENT

ಹಲಸಿನ ಹಣ್ಣಿನ ತೊಳೆಗಳಿಗಿಂತ, ಬೀಜದಲ್ಲಿ ಪ್ರೋಟಿನ್ ಪ್ರಮಾಣ ಹೆಚ್ಚು. ಅಷ್ಟೇ ಅಲ್ಲ, ಬೀಜದಲ್ಲಿರುವ ಪೌಷ್ಟಿಕಾಂಶಗಳು ವ್ಯಕ್ತಿಯ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ‘ಇಂಥ ಪೌಷ್ಟಿಕಾಂಶದ ಆಗರವಾದ ಹಲಸಿನ ಬೀಜಗಳನ್ನು ನಮ್ಮಲ್ಲಿ ಸಮರ್ಪಕವಾಗಿ ಬಳಸುತ್ತಿಲ್ಲ. ಈ ಕಾರಣಕ್ಕಾಗಿ ಹಲಸಿನ ಬೀಜಗಳಿಂದ ಬಿಸ್ಕತ್‌ ಮತ್ತು ಚಾಕೊಲೇಟ್ ತಯಾರಿಸುವ ತಂತ್ರಜ್ಞಾನವನ್ನು ಆವಿಷ್ಕರಿಸಲಾಗಿದೆ’ ಎನ್ನುತ್ತಾರೆ ವಿಜ್ಞಾನಿ ನಾರಾಯಣ್‌.‌

ತರಬೇತಿ ಮತ್ತು ತಂತ್ರಜ್ಞಾನ
ಹಲಸಿನ ಬೀಜದ ಚಾಕೊಲೇಟ್‌ ಮತ್ತು ಬಿಸ್ಕತ್‌ ತಯಾರಿಕೆಗೆ ತರಬೇತಿ ಬೇಕಾಗುತ್ತದೆ. ಐಐಎಚ್‌ಆರ್ ಸಂಸ್ಥೆಯು ತಂತ್ರಜ್ಞಾನದ ಜೊತೆಗೆ ಮತ್ತು ಅದನ್ನು ಬಳಸಿ ಉತ್ಪನ್ನಗಳನ್ನು ತಯಾರಿಸುವ ತರಬೇತಿಯನ್ನೂ ನೀಡುತ್ತದೆ. ಆದರೆ, ತರಬೇತಿ ಪಡೆಯವವರು ಮೊದಲು ಈ ತಂತ್ರಜ್ಞಾನದ ಪರವಾನಗಿ ಪಡೆಯುವುದು ಕಡ್ಡಾಯ.

ಸಿ.ಕೆ. ನಾರಾಯಣ

ತರಬೇತಿ ಹೇಗೆ? ಏನು?
ಬಿಸ್ಕತ್ ತಯಾರಿಸಲು ಎರಡು ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಮೊದಲನೆಯ ದಿನ ಹಲಸಿನ ಬೀಜವನ್ನು ಹಿಟ್ಟು ಮಾಡುವ ವಿಧಾನಗಳನ್ನು ಹೇಳಿಕೊಡುತ್ತಾರೆ. ಎರಡನೆಯ ದಿನ ಹಲಸಿನ ಬೀಜದ ಜೊತೆ ಮಿಶ್ರಣ ಮಾಡುವ ಇತರೆ ಪದಾರ್ಥಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.‌ ಒಂದು ದಿನದಲ್ಲಿ ಚಾಕೊಲೇಟ್ ತಯಾರಿಸುವ ವಿಧಾನವನ್ನು ತಿಳಿಸಿಕೊಡುತ್ತಾರೆ.

ಬೆಸ್ಟ್ ಹಾರ್ಟ್‌ ಇನ್‍ಕ್ಯೂಬೇಟರ್ಸ್
ತರಬೇತಿ ಪಡೆದು ಸ್ವಯಂ ಉದ್ಯಮ ಆರಂಭಿಸುವ ಆಸಕ್ತರಿಗೆ ಬೆಸ್ಟ್ ಹಾರ್ಟ್ ಇನ್‍ಕ್ಯೂಬೇಟರ್ ಸಂಸ್ಥೆ ಐಐಎಚ್‌ಆರ್‌ ಆವರಣದಲ್ಲೇ ಜಾಗ (ಕೊಠಡಿ) ನೀಡಿ, ಅಲ್ಲೇ ಇರುವ ಯಂತ್ರಗಳನ್ನು ಬಳಸಿಕೊಂಡು ಪ್ರಾಯೋಗಿಕವಾಗಿ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಬಹುದು. ಹೀಗೆ ತರಬೇತಿಯಲ್ಲಿರುವ ನವೋದ್ಯಮಿಗೆ ‘ಇನ್‌ಕ್ಯುಬೇಟಿ’ ಎನ್ನುತ್ತಾರೆ.

ಕೊರೊನಾ ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡು ಹಳ್ಳಿಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಯುವಸಮೂಹಕ್ಕೆ ಚಾಕೊಲೇಟ್‌ ಮತ್ತು ಹಲಸಿನ ಬಿಸ್ಕತ್ ತಯಾರಿಕೆ ತಂತ್ರಜ್ಞಾನ ಸ್ವಂತ ಉದ್ಯಮಕ್ಕೆ ದಾರಿ ಮಾಡಿಕೊಡಬಲ್ಲದು. ಬದುಕನ್ನು ಕಟ್ಟಿಕೊಡುವಂಥ ಹಲವು ದಾರಿಗಳು ನಮ್ಮ ಮುಂದೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಯುವಸಮೂಹ ಇಂಥ ಹೊಸ ಉದ್ದಿಮೆಗಳಲ್ಲಿ ತೊಡಗುವುದರಿಂದ ಉದ್ಯೋಗದ ಅವಕಾಶಗಳು ಹೆಚ್ಚಿ, ಆರ್ಥಿಕ ಸಬಲತೆಯೂ ದೃಢವಾಗುತ್ತದೆ; ತಂತ್ರಜ್ಞಾನ ಮತ್ತು ಸಮಾಜದ ಆರ್ಥಿಕತೆ–ಆರೋಗ್ಯಗಳ ಹೊಂದಾಣಿಕೆಯೂ ಬಲವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಐಐಎಚ್‌ಆರ್ ಸಂಪರ್ಕ ಸಂಖ್ಯೆ 080-23086100/372/514 (ಭಾನುವಾರ ಮತ್ತು ಸರ್ಕಾರಿ ರಜೆ ದಿನ ಹೊರತುಪಡಿಸಿ ಸಂಪರ್ಕಿಸಬಹುದು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.