ADVERTISEMENT

Microsoft: ವಿಂಡೋಸ್ 8.1 ಓಎಸ್ ಕಂಪ್ಯೂಟರ್‌ಗಳಿಗೆ ಬೆಂಬಲ ಸ್ಥಗಿತ

ವಿಂಡೋಸ್ 8.1 ಕಾರ್ಯಾಚರಣೆ ವ್ಯವಸ್ಥೆ ಇರುವ ಕಂಪ್ಯೂಟರ್‌ಗಳಿಗೆ ಅಧಿಕೃತ ಬೆಂಬಲ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2023, 9:52 IST
Last Updated 10 ಜನವರಿ 2023, 9:52 IST
   

ಬೆಂಗಳೂರು: ಕಂಪ್ಯೂಟರ್‌ಗಳಿಗೆ ವಿಂಡೋಸ್ ಕಾರ್ಯಾಚರಣೆ ವ್ಯವಸ್ಥೆ ಒದಗಿಸುವ ಮೈಕ್ರೋಸಾಫ್ಟ್, ಈ ಹಿಂದಿನ ಆವೃತ್ತಿ ವಿಂಡೋಸ್ 8.1 ಓಎಸ್ ಬಳಸುತ್ತಿರುವ ಮಾದರಿಗಳಿಗೆ ಅಧಿಕೃತ ಬೆಂಬಲವನ್ನು ಜನವರಿ 10ರಂದು ಸ್ಥಗಿತಗೊಳಿಸಿದೆ.

ಇದರೊಂದಿಗೆ, ವಿಂಡೋಸ್ 8.1 ಓಎಸ್ ಬಳಸುತ್ತಿರುವ ಕಂಪ್ಯೂಟರ್‌ಗಳಿಗೆ ತಾಂತ್ರಿಕ ದೋಷ ಕಂಡುಬಂದರೆ, ಸಾಫ್ಟ್‌ವೇರ್ ಸಮಸ್ಯೆ ಉಂಟಾದರೆ ಮೈಕ್ರೋಸಾಫ್ಟ್‌ನಿಂದ ಬೆಂಬಲ ದೊರೆಯುವುದಿಲ್ಲ. ಅಲ್ಲದೆ, ಯಾವುದೇ ರೀತಿಯ ಸೆಕ್ಯುರಿಟಿ ಮತ್ತು ಭದ್ರತಾ ಅಪ್‌ಡೇಟ್ ದೊರೆಯುವುದಿಲ್ಲ.

ಜತೆಗೆ, ವಿಂಡೋಸ್ 8.1 ಓಎಸ್ ಇರುವ ಕಂಪ್ಯೂಟರ್‌ಗಳಿಗೆ ವಿಂಡೋಸ್ ಸ್ಟೋರ್‌ನಲ್ಲಿರುವ ಅಪ್ಲಿಕೇಶನ್‌ನ ನವೀನ ಆವೃತ್ತಿಗಳ ಅಪ್‌ಡೇಟ್ ಲಭ್ಯವಾಗುವುದಿಲ್ಲ. ಉಳಿದಂತೆ, ಮೈಕ್ರೋಸಾಫ್ಟ್ 365 ಅಪ್ಲಿಕೇಶನ್ ಕಾರ್ಯಾಚರಣೆ ನಡೆಸುತ್ತದೆಯಾದರೂ., ಹೊಸ ಆವೃತ್ತಿ ಬೆಂಬಲಿಸುವುದಿಲ್ಲ.

ADVERTISEMENT

ಅಲ್ಲದೆ, ಗೂಗಲ್ ಕ್ರೋಮ್‌ನಂತಹ ಹೆಚ್ಚುವರಿ ಅಪ್ಲಿಕೇಶನ್‌ಗಳಿಗೂ ಹೊಸ ಅಪ್‌ಡೇಟ್ ದೊರೆಯುವುದಿಲ್ಲ.

ವಿಂಡೋಸ್ 8.1 ಓಎಸ್ ಮುಂದೇನು?
ಮೈಕ್ರೋಸಾಫ್ಟ್, ಈ ಮೊದಲೇ ವಿಂಡೋಸ್ 8.1 ಬಳಕೆದಾರರಿಗೆ 2016ರ ಜುಲೈ 29ರೊಳಗಾಗಿ ವಿಂಡೋಸ್ 10 ಇಲ್ಲವೇ ವಿಂಡೋಸ್ 11ಗೆ ಉಚಿತವಾಗಿ ಓಎಸ್ ಅಪ್‌ಗ್ರೇಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿತ್ತು. ಈ ಅವಧಿಯಲ್ಲಿ ಅಪ್‌ಗ್ರೇಡ್ ಮಾಡಿಕೊಳ್ಳದ ವಿಂಡೋಸ್ 8.1 ಬಳಕೆದಾರರು, ಮೈಕ್ರೋಸಾಫ್ಟ್‌ ವಿಂಡೋಸ್ 10 ಅಥವಾ 11 ಬಳಕೆ ಮಾಡಲು ಹೊಸ ಸಾಫ್ಟ್‌ವೇರ್ ಅನ್ನು ನಿಗದಿತ ದರ ಪಾವತಿಸಿ ಖರೀದಿಸಬೇಕಿದೆ.

ಜತೆಗೆ, ಈಗ ಬಳಸುತ್ತಿರುವ ವಿಂಡೋಸ್ 8.1 ಕಂಪ್ಯೂಟರ್‌ ಇಲ್ಲವೇ ಲ್ಯಾಪ್‌ಟಾಪ್‌ನ ಹಾರ್ಡ್‌ವೇರ್, ಹೊಸ ವಿಂಡೋಸ್ 10 ಮತ್ತು ವಿಂಡೋಸ್ 11ಗೆ ಬೆಂಬಲಿಸುವುದೇ ಎಂದು ಪರಿಶೀಲಿಸಿ ಖರೀದಿಸುವುದು ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.