ADVERTISEMENT

ಚೀನಾದ ಟೆನ್ಸೆಂಟ್‌ನಿಂದ ‘ಪಬ್‌ಜಿ ಮೊಬೈಲ್‘ ಹಕ್ಕು ಹಿಂಪಡೆದ ದಕ್ಷಿಣ ಕೊರಿಯಾ ಕಂಪನಿ

ಏಜೆನ್ಸೀಸ್
Published 8 ಸೆಪ್ಟೆಂಬರ್ 2020, 10:12 IST
Last Updated 8 ಸೆಪ್ಟೆಂಬರ್ 2020, 10:12 IST
ಪಬ್‌ಜಿ ಗೇಮ್‌–ಪ್ರಾತಿನಿಧಿಕ ಚಿತ್ರ
ಪಬ್‌ಜಿ ಗೇಮ್‌–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಪಬ್‌ಜಿ (PUBG)ಮೊಬೈಲ್‌ ಗೇಮ್‌ ಮತ್ತೆ ದೇಶದಲ್ಲಿ ಕಾರ್ಯಾಚರಣೆ ಪುನರಾರಂಭಿಸುವ ಸೂಚನೆ ದೊರೆತಿದೆ. ಚೀನಾದ ಟೆನ್ಸೆಂಟ್‌ನಿಂದ ಭಾರತದಲ್ಲಿ ಪಬ್‌ಜಿ ಪ್ರಕಟಿಸುವ ಹಕ್ಕನ್ನು ಪಬ್‌ಜಿ ಕಾರ್ಪೊರೇಷನ್‌ ಹಿಂಪಡೆಯುತ್ತಿರುವುದಾಗಿ ಬ್ಲಾಗ್‌ನಲ್ಲಿ ತಿಳಿಸಿದೆ.

ದಕ್ಷಿಣ ಕೊರಿಯಾದ ಪಬ್‌ಜಿ ಕಾರ್ಪೊರೇಷನ್‌ ಪ್ಲೇಯರ್‌ಅನ್‌ನೌನ್ಸ್‌ ಬ್ಯಾಟಲ್‌ಗ್ರೌಂಡ್ಸ್‌ (ಪಬ್‌ಜಿ) ಗೇಮ್‌ನ ಮಾಲೀಕತ್ವ ಹೊಂದಿದೆ. ಪಬ್‌ಜಿ ಸೇರಿದಂತೆ ಚೀನಾ ಮೂಲದ 118 ಆ್ಯಪ್‌ಗಳನ್ನು ಭಾರತ ಸರ್ಕಾರ ಕಳೆದ ವಾರವಷ್ಟೇ ನಿಷೇಧಿಸಿದೆ. ಭಾರತ ಮತ್ತು ಚೀನಾದ ಗಡಿ ಪ್ರದೇಶಗಳಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವ ಸಮಯದಲ್ಲೇ ಚೀನಾ ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ.

'ಪಬ್‌ಜಿ ಕಾರ್ಪೊರೇಷನ್‌ ಭಾರತದಲ್ಲಿ ಗೇಮ್‌ ಪ್ರಕಟಿಸುವ ಎಲ್ಲ ಹೊಣೆಯನ್ನು ವಹಿಸಲಿದೆ. ಭಾರತದ ಬಳಕೆದಾರರಿಗೆ ಮುಂದಿನ ದಿನಗಳಲ್ಲಿ ಗೇಮಿಂಗ್‌ ಅನುಭವ ನೀಡುವ ಮಾರ್ಗಗಳನ್ನು ಅನ್ವೇಷಿಸಲಾಗುತ್ತಿದೆ' ಕಂಪನಿ ಹೇಳಿದೆ.

ADVERTISEMENT

ಪಬ್ ಜಿ ಕಾರ್ಪೊರೇಷನ್ ನಲ್ಲಿ ಚೀನಾದ ಟೆನ್ಸೆಂಟ್ ಗೇಮ್ಸ್ ಶೇ 10ರಷ್ಟು ಪಾಲುದಾರಿಕೆ ಹೊಂದಿದ್ದು, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪಬ್‌ಜಿ ಮೊಬೈಲ್‌ ಗೇಮ್‌ ಪ್ರಕಟಿಸುವ, ನಿರ್ವಹಿಸಲು ಪರವಾನಗಿ ಪಡೆದಿತ್ತು.

ಟೆನ್ಸೆಂಟ್‌ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತದಲ್ಲಿ ಪಬ್‌ಜಿ ನಿಷೇಧವಾಗುತ್ತಿದ್ದಂತೆ ಟೆನ್ಸೆಂಟ್‌ ಷೇರು ಬೆಲೆ ಶೇ 2ರಷ್ಟು ಕುಸಿದು, ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 340 ಕೋಟಿ ಡಾಲರ್‌ ನಷ್ಟ ಆಗಿದೆ.

ಇತ್ತೀಚಿನ ಬೆಳವಣಿಗೆಗಳ ಸಂಬಂಧ ಭಾರತ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ. ಪ್ರಸ್ತುತ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಆ್ಯಪಲ್‌ ಸ್ಟೋರ್‌ಗಳಲ್ಲಿ ಪಬ್‌ಜಿ ಮೊಬೈಲ್‌ ಅಪ್ಲಿಕೇಷನ್‌ ಲಭ್ಯವಿಲ್ಲ. ಈಗಾಗಲೇ ಇನ್‌ಸ್ಟಾಲ್‌ ಮಾಡಿಕೊಂಡಿರುವವರು ಗೇಮ್‌ ಆಡಬಹುದಾಗಿದೆ. ಆದರೆ, ಹೊಸ ಅಪ್‌ಡೇಟ್‌ ಲಭ್ಯವಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.