ADVERTISEMENT

ಫೋನ್ ಪರದೆ ರಕ್ಷಕ: ಏನಿದು ಟೆಂಪರ್ಡ್ ಗ್ಲಾಸ್?

ಅವಿನಾಶ್ ಬಿ.
Published 8 ಜುಲೈ 2025, 23:30 IST
Last Updated 8 ಜುಲೈ 2025, 23:30 IST
ಮೊಬೈಲ್ ಸ್ಕ್ರೀನ್‌ಗೆ ಗೀರು ಆಗದಂತೆ ತಡೆಯುತ್ತದೆ ಸ್ಕ್ರೀನ್ ಗಾರ್ಡ್
ಮೊಬೈಲ್ ಸ್ಕ್ರೀನ್‌ಗೆ ಗೀರು ಆಗದಂತೆ ತಡೆಯುತ್ತದೆ ಸ್ಕ್ರೀನ್ ಗಾರ್ಡ್   
ಫೋನ್‌ಗೆ ಸ್ಕ್ರೀನ್ ಗಾರ್ಡ್‌ಗಳು ಅನಿವಾರ್ಯ ಎನಿಸಿವೆ. ಬಿದ್ದರೂ ಸ್ಕ್ರೀನ್ ಒಡೆಯದಂತೆ, ಗೀರುಗಳಾಗದಂತೆ ರಕ್ಷಿಸುವ ಈ ಪರದೆ ರಕ್ಷಕ ಹೆಸರಿನ ಗಾಜಿನ ಹಾಳೆಯು, ಫೋನ್‌ನಲ್ಲಿ ತೀರಾ ದುಬಾರಿ ಎನಿಸಿರುವ ಡಿಸ್‌ಪ್ಲೇಗೆ ಹಾನಿಯಾಗದಂತೆ ತಡೆಯುತ್ತದೆ.

ಈಗ ನಗರಗಳಲ್ಲಷ್ಟೇ ಅಲ್ಲ, ಗ್ರಾಮೀಣ ಪ್ರದೇಶಗಳಲ್ಲಿಯೂ ಮೊಬೈಲ್ ಫೋನ್‌ಗಳಿಗಾಗಿರುವ ಸ್ಕ್ರೀನ್ ಗಾರ್ಡ್ ಅಥವಾ ಸ್ಕ್ರೀನ್ ಪ್ರೊಟೆಕ್ಟರ್ ಎಂಬ 'ಪರದೆ ರಕ್ಷಕ ಗಾಜು' ಮಾರುವವರು ಅಲ್ಲಲ್ಲಿ ಕಾಣಿಸುತ್ತಾರೆ. ಅಕಸ್ಮಾತ್ ಸ್ಮಾರ್ಟ್‌ಫೋನ್ ನಮ್ಮ ಕೈಯಿಂದ ಜಾರಿ ಬಿದ್ದರೆ, ಇಲ್ಲವೇ ಜೇಬಿನಲ್ಲಿ, ಬ್ಯಾಗಿನಲ್ಲಿ ಇರಿಸಿದಾಗ ಸ್ಕ್ರೀನ್‌ಗೆ ಏನೂ ಆಗಬಾರದು ಅಥವಾ ಗೀರು ಆಗಬಾರದು ಎಂಬ ಕಾಳಜಿಯಿಂದಾಗಿ ಜನರೂ ಇದನ್ನು ಖರೀದಿಸಿ ಫೋನ್‌ಗಳಿಗೆ ಅಂಟಿಸಿಕೊಳ್ಳುತ್ತಿದ್ದಾರೆ. ಯಾಕೆಂದರೆ, ಸಣ್ಣ ಆಘಾತಕ್ಕೆ ಅಥವಾ ಲಘು ಏಟಿಗೆ, ಕೊಂಚ ಒತ್ತಿಹೋದರೆ ಈಗಿನ ಸ್ಮಾರ್ಟ್ ಫೋನ್‌ನೊಳಗಿರುವ ಅತ್ಯಂತ ಸೂಕ್ಷ್ಮ ಬಿಡಿಭಾಗಗಳ್ಳ 'ಡಿಸ್‌ಪ್ಲೇ' ಕೆಟ್ಟು ಹೋಗುತ್ತದೆ. ಅದನ್ನು ಬದಲಾಯಿಸಬೇಕಿದ್ದರೆ ಐದಾರು ಸಾವಿರ ರೂಪಾಯಿಗೂ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ 50ರಿಂದ 100, 200 ರೂ. ಒಳಗೆ ದೊರೆಯುವ ಹದಗೊಳಿಸಿದ ಅಥವಾ ಟೆಂಪರ್ಡ್ ಗ್ಲಾಸ್ (Tempered Glass) ಹೆಸರಿನ ಈ ಸ್ಕ್ರೀನ್‌ಗಾರ್ಡ್‌ಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ ಜನ.

ಅನುಕ್ಷಣದ ಸಂಗಾತಿಯಾಗಿರುವ ಫೋನ್‌ಗೆ ಸ್ಕ್ರೀನ್ ಗಾರ್ಡ್‌ಗೆ ಹೀಗೆ ಬೇಡಿಕೆ ಹೆಚ್ಚಾಗಿರುವ ಕಾರಣದಿಂದಾಗಿ, ಒಳ್ಳೆಯ ಗುಣಮಟ್ಟದವುಗಳ ಜೊತೆ ಲಾಭಕೋರರು ಸಾಕಷ್ಟು ಕಳಪೆ ಸ್ಕ್ರೀನ್‌ಗಾರ್ಡ್‌ಗಳನ್ನೂ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಹೀಗಾಗಿ ಅವುಗಳ ಆಯ್ಕೆಯಲ್ಲಿ ಕಟ್ಟೆಚ್ಚರ ಬೇಕಾಗುತ್ತದೆ.

ಏನಿದು ಟೆಂಪರ್ಡ್ ಗ್ಲಾಸ್?
ನೀವು ವಾಹನಗಳ ಮುಂಭಾಗದ (ವಿಂಡ್ ಶೀಲ್ಡ್) ಗಾಜುಗಳನ್ನು ನೋಡಿರುತ್ತೀರಿ. ಅಪಘಾತವಾದಾಗಲೋ ಅಥವಾ ಅದಕ್ಕೆ ಕಲ್ಲೇಟು ಅಥವಾ ಬೇರಾವುದೇ ಏಟು ಬಿದ್ದಾಗ, ಆ ದೊಡ್ಡ ಗಾಜು ಚೂರುಚೂರಾಗಿ ಹರಳುಗಳಂತೆ ಉದುರಿ ಬೀಳುತ್ತದೆ. ಸಾಮಾನ್ಯ ಗಾಜು ಆಗಿದ್ದರೆ, ಗಾಜು ತುಂಡಾಗಿ ಚೂಪು ಚೂಪಾದ ಹಲವು ಚೂರುಗಳಾಗಿ, ಜೀವಕ್ಕೆ ಭಾರಿ ಹಾನಿ ಉಂಟು ಮಾಡುತ್ತವೆ. ಆದರೆ, ವಾಹನಗಳ ಗಾಜುಗಳಿಗೆ ಅಳವಡಿಸಿರುವುದು ಟೆಂಪರ್ಡ್ ಗ್ಲಾಸ್. ಅವುಗಳಿಗೆ ಏಟು ಬಿದ್ದಾಕ್ಷಣ ಪುಡಿಪುಡಿಯಾಗಿ ಉದುರುತ್ತವೆ ಮತ್ತು ಅವುಗಳ ಅಂಚುಗಳು ಚೂಪಾಗಿರುವುದಿಲ್ಲ. ಇದರಿಂದ ಜನರಿಗೆ, ಪ್ರಾಣಿಗಳಿಗೆ ದೈಹಿಕ ಹಾನಿಯಾಗದಂತೆ ತಡೆಯುತ್ತದೆ. ಅದೇ ರೀತಿ ಅತಿಯಾದ ಶಾಖವನ್ನೂ ಇದು ತಾಳಿಕೊಳ್ಳುತ್ತದೆ. ಇದುವೇ ಟೆಂಪರ್ಡ್ ಗಾಜು.

ADVERTISEMENT

ಗಾಜನ್ನು ಸುಮಾರು 500ರಿಂದ 600 ಡಿಗ್ರಿ ಸೆಲ್ಷಿಯಸ್ ತಾಪಮಾನಕ್ಕೆ ಒಳಪಡಿಸಿ, ತಕ್ಷಣವೇ ಅದನ್ನು ಶೈತ್ಯಗೊಳಿಸಲಾಗುತ್ತದೆ. ಈ ರೀತಿಯ ಗರಿಷ್ಠ ಹಾಗೂ ಕನಿಷ್ಠ ಉಷ್ಣಪ್ರಕ್ರಿಯೆಗೊಳಪಡಿಸಿದ ಗಾಜನ್ನು ಸಂಸ್ಕರಿಸಿ, ಅದರ ಪಾರದರ್ಶಕತೆಯನ್ನು, ಸ್ಪರ್ಶದ ಸಂವೇದನೆಯನ್ನು ಕಾಯ್ದುಕೊಂಡು, ಈ ರೀತಿಯ ಟೆಂಪರ್ಡ್ ಅಂದರೆ ಹದಗೊಳಿಸಿದ ಗಾಜನ್ನು ರೂಪಿಸಲಾಗುತ್ತದೆ. ಈ ತಂತ್ರಜ್ಞಾನವನ್ನು ಆಧರಿಸಿ ಸ್ಮಾರ್ಟ್‌ಫೋನ್‌ಗಳಿಗೂ ಸ್ಕ್ರೀನ್ ರಕ್ಷಕ ಗಾಜಿನ ಹಾಳೆಗಳನ್ನು ತಯಾರಿಸಲಾಗಿದೆ.

ಪ್ರಮುಖ ಉಪಯೋಗ
ಪ್ರತಿ ಕ್ಷಣದ ಸಂಗಾತಿಯೇ ಆಗಿಬಿಟ್ಟಿರುವ ಸ್ಮಾರ್ಟ್‌ಫೋನ್‌ನ ಪರದೆಗೆ ಏಟು ಬೀಳುವುದು, ಗೀರು ಆಗುವುದು ಅಥವಾ ಕೈಯಿಂದ ಬೀಳುವುದು, ಜೇಬು ಅಥವಾ ಬ್ಯಾಗಿನೊಳಗೆ ಕೀಲಿಕೈ, ನಾಣ್ಯ ಮುಂತಾದವುಗಳೊಂದಿಗೆ ಇಟ್ಟರೆ ಗಾಜಿಗೆ ಹಾನಿಯಾಗುವುದು - ಇವೆಲ್ಲ ಸರ್ವೇಸಾಮಾನ್ಯ. ಸ್ಕ್ರೀನ್ ಗಾರ್ಡ್ ಇವೆಲ್ಲದರಿಂದ ಬಹುತೇಕ ರಕ್ಷಣೆ ನೀಡುತ್ತದೆ. ಕೆಳಗೆ ಬಿದ್ದಾಗ ಅಂಚಿಗೆ ಏಟಾದರೆ ಅದರಿಂದಲೂ ಫೋನ್‌ನ ಮೂಲ ಸ್ಕ್ರೀನ್ ಗಾಜನ್ನು ಅದು ರಕ್ಷಿಸುತ್ತದೆ. ಆಕಸ್ಮಿಕ ಸಂಭವಿಸಿದಾಗ ಡಿಸ್‌ಪ್ಲೇ ಸ್ಕ್ರೀನ್ ಬದಲಾಗಿ ಈ ಗಾಜುವಿಗಷ್ಟೇ ಹಾನಿಯಾಗುತ್ತದೆ. ಇದರಲ್ಲಿಯೂ 2ಡಿ, 2.5ಡಿ, 3ಡಿ ಅಂತೆಲ್ಲ ಮಾದರಿಗಳು ಬಂದಿವೆ. 2ಡಿ ಗಾಜುಗಳು ಸಾಮಾನ್ಯ ಸ್ಕ್ರೀನ್‌ಗಳನ್ನು ಗೀರುಗಳಾಗದಂತೆ, ಒಡೆಯದಂತೆ ರಕ್ಷಿಸಿದರೆ, ಉಳಿದವು ಅತ್ಯಾಧುನಿಕವಾದ ಮತ್ತು ಬಾಗಿದ ಅಂಚುಳ್ಳ ಸ್ಕ್ರೀನ್‌ಗಳಿಗಾಗಿ ತಯಾರಿಸಲ್ಪಟ್ಟವು. ಉಳಿದಂತೆ 9ಡಿ, 11ಡಿ ಅಂತೆಲ್ಲ ವೈವಿಧ್ಯಮಯ ಬ್ರ್ಯಾಂಡುಗಳ ಹೆಸರಲ್ಲಿ ಸ್ಕ್ರೀನ್‌ಗಾರ್ಡ್‌ಗಳು ಮಾರಾಟವಾಗುತ್ತಿವೆ. ಇವೆಲ್ಲ 3ಡಿಗಿಂತ ಹೆಚ್ಚೇನೂ ವ್ಯತ್ಯಾಸ ಹೊಂದಿರುವುದಿಲ್ಲ.

ಈಗಿನ ಸುಧಾರಿತ ತಂತ್ರಜ್ಞಾನದ ಸ್ಕ್ರೀನ್‌ಗಾರ್ಡ್‌ಗಳು, ಸ್ಕ್ರೀನ್ ಮೇಲೆ ನಮ್ಮ ಬೆರಳಚ್ಚು ಉಳಿಯದಂತೆಯೂ ರಕ್ಷಿಸುತ್ತವೆ. ಅಲ್ಲದೆ, ಇನ್ನೂ ಅತ್ಯಾಧುನಿಕ ಸ್ಕ್ರೀನ್‌ಗಾರ್ಡ್‌ಗಳು ನಮ್ಮ ಕಣ್ಣಿಗೆ ಅತ್ಯಂತ ಹಾನಿಯುಂಟು ಮಾಡುವ ನೀಲ ಕಿರಣಗಳನ್ನು (ಬ್ಲೂ ರೇ) ಸ್ವಲ್ಪಮಟ್ಟಿಗೆ ತಡೆಯುತ್ತವೆ. ಒಟ್ಟಿನಲ್ಲಿ ತಿಂಡಿ ತಿನ್ನುತ್ತಾ, ಅಂತರ್ಜಾಲದಲ್ಲಿ ವಿಹರಿಸುತ್ತಾ ಇದ್ದರೂ, ಗಾಜಿನ ಮೇಲೆ ದೂಳು, ಬೆವರು, ಎಣ್ಣೆ ಗುರುತುಗಳಿರದಂತೆ, ಬಿದ್ದರೂ ಹಾನಿಯಾಗದಂತೆ, ಗಾಜು ಒಡೆದರೂ ಚೂಪಾದ ಚೂರುಗಳಾಗದಂತೆ ಮತ್ತು ಕಣ್ಣುಗಳಿಗೂ ಹೆಚ್ಚು ಆಯಾಸವಾಗದಂತೆ ರಕ್ಷಣೆ ನೀಡುವಲ್ಲಿ ಸ್ಕ್ರೀನ್‌ಗಾರ್ಡ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ.

ರಸ್ತೆ ಬದಿಳಲ್ಲೆಲ್ಲ ಲಭ್ಯವಾಗುತ್ತಿರುವ ಸ್ಕ್ರೀನ್ ಗಾರ್ಡ್‌ಗಳಲ್ಲಿ ಎಲ್ಲವೂ ಚೆನ್ನಾಗಿ ಕೆಲಸ ಮಾಡುತ್ತವೆ ಎಂದು ಹೇಳಲಾಗದು. ಹೇಳಹೆಸರಿಲ್ಲದ ಕಂಪನಿಗಳ ಮುದ್ರೆಯೊಂದಿಗೆ ದೊರೆಯುತ್ತಿವುದರಿಂದ ಆಯ್ಕೆಯಲ್ಲಿ ನಾವೇ ಎಚ್ಚರವಹಿಸಬೇಕಾಗುತ್ತದೆ. ಗೀರುಗಳಾಗುತ್ತವೆಯೇ, ಕೈಬೆರಳಚ್ಚು ಉಳಿಯುತ್ತದೆಯೇ, ಸ್ಪರ್ಶದ ಸಂವೇದನೆ ಸರಿಯಾಗಿರುತ್ತದೆಯೇ ಮತ್ತು ಚಿತ್ರ, ಪಠ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವಷ್ಟು ಪಾರದರ್ಶಕತೆ ಖಚಿತವೇ ಎಂದು ನೋಡಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ, ಸ್ಕ್ರೀನ್ ಗಾರ್ಡ್ ಅಳವಡಿಸುವಾಗ, ಫೋನ್ ಸ್ಕ್ರೀನ್ ಮತ್ತು ಗಾರ್ಡ್ ನಡುವೆ ಗಾಳಿ ಗುಳ್ಳೆಗಳಿಲ್ಲದಂತೆ, ಅಂಚುಗಳೆಲ್ಲವೂ ಸರಿಯಾಗಿ ಅಂಟಿಕೊಂಡಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.