ADVERTISEMENT

ಆಗಸ್ಟ್‌ನಿಂದ ಸ್ಥಗಿತಗೊಳ್ಳಲಿದೆ ‘ಯೂಟ್ಯೂಬ್ ಗೋ’

ಐಎಎನ್ಎಸ್
Published 4 ಮೇ 2022, 11:16 IST
Last Updated 4 ಮೇ 2022, 11:16 IST
ಯೂಟ್ಯೂಬ್ – ಸಾಂದರ್ಭಿಕ ಚಿತ್ರ
ಯೂಟ್ಯೂಬ್ – ಸಾಂದರ್ಭಿಕ ಚಿತ್ರ   

ಸ್ಯಾನ್ ಫ್ರಾನ್ಸಿಸ್ಕೊ: ಆಫ್‌ಲೈನ್ ವಿಡಿಯೊ ವೀಕ್ಷಣೆಗಾಗಿ ಇರುವ ‘ಯೂಟ್ಯೂಬ್ ಗೋ’ ಆ್ಯಪ್ ಆಗಸ್ಟ್‌ನಿಂದ ಸ್ಥಗಿತಗೊಳ್ಳಲಿದೆ ಎಂದು ಗೂಗಲ್ ಒಡೆತನದ ವಿಡಿಯೊ ಸ್ಟ್ರೀಮಿಂಗ್ ವೇದಿಕೆ ಯೂಟ್ಯೂಬ್ ಘೋಷಿಸಿದೆ.

‘ಯೂಟ್ಯೂಬ್ ಗೋ’ ಆ್ಯಪ್ ಬಳಕೆದಾರರಿಗೆ ಆಫ್‌ಲೈನ್‌ನಲ್ಲಿ ವಿಡಿಯೊ ವೀಕ್ಷಣೆಗೆ ಅವಕಾಶ ನೀಡುತ್ತಿದೆ. ಗುಣಮಟ್ಟ ಹಾಗೂ ಫೈಲ್ ಗಾತ್ರದಲ್ಲಿ ಆಯ್ಕೆಗಳನ್ನು ನೀಡುವುದರ ಜತೆಗೆ ವಿಡಿಯೊ ಡೌನ್ಲೋಡ್ ಮಾಡಿಕೊಳ್ಳಲು ಎಷ್ಟು ಡೇಟಾ ಬೇಕಾಗಲಿದೆ ಎಂಬ ನಿಖರ ಮಾಹಿತಿ ದೊರೆಯುವಂತೆ ಮಾಡುತ್ತಿದೆ. ಡೇಟಾ ಬಳಸದೇ ‘ಲೋಕಲ್ ಶೇರಿಂಗ್’ ಆಯ್ಕೆಯೂ ಇದರಲ್ಲಿದೆ.

‘ಯೂಟ್ಯೂಬ್ ಗೋ’ ಆಗಸ್ಟ್‌ನಿಂದ ಕಾರ್ಯಾಚರಣೆ ನಿಲ್ಲಿಸಲಿದೆ. ಈಗ ಆ ಆ್ಯಪ್ ಬಳಸುತ್ತಿರುವವರು ವಿಡಿಯೊಗಳನ್ನು ನೋಡುವುದಕ್ಕಾಗಿ ‘ಯೂಟ್ಯೂಬ್‌’ ಆ್ಯಪ್‌ ಅನ್ನು ಬಳಸಿ ಅಥವಾ ಯೂಟ್ಯೂಬ್ ಡಾಟ್ ಕಾಂಗೆ ಭೇಟಿ ನೀಡಬಹುದು ಎಂದು ಕಂಪನಿ ತಿಳಿಸಿದೆ.

‘ಯೂಟ್ಯೂಬ್ ಗೋ’ ಜತೆಗೆ ಹೋಲಿಕೆ ಮಾಡಿದರೆ ‘ಯೂಟ್ಯೂಬ್’ ಆ್ಯಪ್‌ ಬಳಕೆದಾರರಿಗೆ ಒಟ್ಟಾರೆಯಾಗಿ ಉತ್ತಮ ಅನುಭವ ನೀಡುತ್ತಿದೆ. ಕಾಮೆಂಟ್, ಪೋಸ್ಟ್, ಕ್ರಿಯೇಟ್ ಕಂಟೆಂಟ್ ಸೇರಿದಂತೆ ‘ಯೂಟ್ಯೂಬ್’ ಆ್ಯಪ್‌ನಲ್ಲಿರುವ ಎಲ್ಲ ಆಯ್ಕೆಗಳು ‘ಯೂಟ್ಯೂಬ್ ಗೋ’ದಲ್ಲಿ ಲಭ್ಯವಿಲ್ಲ. ಅನೇಕರು ಈ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ಕಂಪನಿ ಹೇಳಿದೆ.

2016ರ ಡಿಸೆಂಬರ್‌ನಲ್ಲಿ ‘ಯೂಟ್ಯೂಬ್ ಗೋ’ ಕಾರ್ಯಾರಂಭ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.