ಡ್ರೋನ್ ಪ್ರತಾಪ್
ಡ್ರೋನ್, ವಿವಾದ, ಸಾಧನೆ, ಸುಳ್ಳು, ಆರೋಪದಿಂದಲೇ ಸುದ್ದಿಯಾಗಿ ಕೊನೆಗೆ ಕನ್ನಡ ಬಿಗ್‌ಬಾಸ್ ಕಾರ್ಯಕ್ರಮದಲ್ಲೂ ಭಾಗಿಯಾಗಿ ಜನಪ್ರಿಯತೆ ಪಡೆದುಕೊಂಡಿರುವ ಪ್ರತಾಪ್, ಈಗ ಮತ್ತೆ ಡ್ರೋನ್‌ನಿಂದಲೇ ಸುದ್ದಿಯಾಗಿದ್ದಾರೆ. ಆದರೆ ಭಾರತದಲ್ಲಲ್ಲ, ಚೀನಾದಲ್ಲಿ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನೆಟ್ಕಲ್ ಗ್ರಾಮದ ಎನ್.ಎಂ. ಪ್ರತಾಪ್ ತಮ್ಮ ಡ್ರೋನ್ ಬಳಸಿ ಚೀನಾ ಕಂಪನಿಯೊಂದರ ಜತೆ ಡ್ರೋನ್‌ಗಳಲ್ಲಿ ಹೊಸ ಪ್ರಯೋಗ ಮಾಡುತ್ತಿದ್ದಾರೆ.
ತಮ್ಮ ಚೀನಾ ಪ್ರಯಾಣದ ಬಗ್ಗೆ ಪ್ರತಾಪ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಕೃಷಿ ಹೊಂಡದಲ್ಲಿ ಸೋಡಿಯಂ ಉಪಯೋಗಿಸಿ ಸ್ಫೋಟಿಸಿ ಜೈಲಿಗೆ ಹೋಗಿ ಬಂದಿದ್ದ ಪ್ರತಾಪ್, ಹೊಸ ಪ್ರಯೋಗಗಳನ್ನೇನೂ ಕಡಿಮೆ ಮಾಡಿಲ್ಲ.
ಚೀನಾದಲ್ಲಿ ಡ್ರೋನ್ ಮೂಲಕ 100 ಕೆ.ಜಿ ತೂಕದ ವಸ್ತುವನ್ನು ಎತ್ತುವ ಪ್ರಯೋಗ ಮಾಡಿದ್ದು, ಅದರ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಚೀನಾ ಭೇಟಿ ವೇಳೆ, ಹೈಸ್ಪೀಡ್ ರೈಲಿನಲ್ಲಿ ಬ್ಯುಸಿನೆಸ್ ಕ್ಲಾಸ್ ಪ್ರಯಾಣ ಹೇಗಿರುತ್ತದೆ, ಏನೆಲ್ಲಾ ಸೌಕರ್ಯಗಳು ಲಭ್ಯ ಎಂಬುದನ್ನು ವಿಡಿಯೊ ಮಾಡಿ ಹಂಚಿಕೊಂಡಿದ್ದರು.
ಡ್ರೋನಾರ್ಕ್ ಏರೋಸ್ಪೇಸ್ ಎನ್ನುವ ತನ್ನದೇ ಕಂಪನಿ ಮೂಲಕ ಪ್ರತಾಪ್, ವಿದೇಶಗಳಲ್ಲೂ ತಮ್ಮ ಡ್ರೋನ್‌ಗಳನ್ನು ಬಳಸಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.
2020ರಲ್ಲಿ ಸುದ್ದಿಯಾಗಿದ್ದ ಪ್ರತಾಪ್
‘ಡ್ರೋನ್ ವಿಜ್ಞಾನಿ’ ಎಂದು ಹೇಳಿಕೊಂಡು ವಂಚಿಸಿದ್ದಾರೆ ಎಂದು ಪ್ರತಾಪ್ ಅವರ ವಿರುದ್ಧ ಸುದ್ದಿ ಹರಡಿತ್ತು.
ಪ್ರತಾಪ್, ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಡ್ರೋನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಗೆದ್ದಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಈ ಸ್ಪರ್ಧೆಗಳಲ್ಲಿ ಪ್ರತಾಪ್ ಭಾಗವಹಿಸುವ ಮಾತು ಹಾಗಿರಲಿ, ಭಾರತದ ಯಾವುದೇ ಪ್ರತಿನಿಧಿಯೂ ಭಾಗವಹಿಸಿರುವುದಕ್ಕೆ ದಾಖಲೆಗಳಿಲ್ಲ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದರು.
ಆ ಸಂದರ್ಭದಲ್ಲಿ ವಿವಾದಕ್ಕೆ ಪ್ರತಿಕ್ರಿಯಿಸಿದ್ದ ಪ್ರತಾಪ್, 'ದೊಡ್ಡ ದೊಡ್ಡ ವಿಜ್ಞಾನಿಗಳೂ ಇಂತಹ ವಿರೋಧ ಎದುರಿಸಿದ್ದಾರೆ. ಎಲ್ಲಾ ವಿರೋಧಗಳನ್ನು ನಾನು ವಿಶ್ವಾಸದಿಂದ ಎದುರಿಸುತ್ತೇನೆ. ವಿಜ್ಞಾನ ವಸ್ತುಪ್ರದರ್ಶನ ಒಲಿಂಪಿಕ್ಸ್ ಅಲ್ಲ, ಅದೊಂದು ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನವಾಗಿದ್ದು ದಾಖಲಾಗಿ ಉಳಿಯುವುದು ಕಡಿಮೆ. ಆದರೂ ನನ್ನ ಬಳಿ ಇರುವ ಪ್ರಮಾಣ ಪತ್ರಗಳು, ಮೆಡಲ್‌ಗಳು, ನಾನು ವಿದೇಶಕ್ಕೆ ಹೋಗಿಬಂದಿರುವ ದಾಖಲಾತಿಗಳೊಂದಿಗೆ ಮಾಧ್ಯಮಗಳ ಮುಂದೆ ಬರುತ್ತೇನೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.