ಜಲ್ನಾ: ಕಚ್ಚೆ, ಜುಬ್ಬ, ತಲೆಗೊಂದು ಗಾಂಧಿ ಟೋಪಿ ಧರಿಸಿದ ಕೃಶವಾದ ದೇಹ ದುಬಾರಿ ಆಭರಣ ಮಳಿಗೆ ಪ್ರವೇಶಿಸುತ್ತಿದ್ದಂತೆ, ಅಲ್ಲಿದ್ದ ಸಿಬ್ಬಂದಿ ಅವರತ್ತ ಒಂದು ಅಸಡ್ಡೆಯ ನೋಟ ಬೀರಿದ್ದರು. ಅವರ ಬಾಗಿದ ಶರೀರ ಕಂಡು ಆರ್ಥಿಕ ಸಹಾಯ ಕೇಳಿ ಬಂದಿರಬಹುದು ಎಂದೂ ಕೆಲವರು ಅಂದುಕೊಂಡರು.
ಆದರೆ ಅಸಲಿ ವಿಷಯವೇ ಬೇರೆಯಾಗಿತ್ತು. ತನ್ನೊಂದಿಗೆ ತನ್ನ ಮಡದಿಯನ್ನೂ ಕರೆದುಕೊಂಡು ಬಂದಿದ್ದ ಆ ಹಿರಿಯ ಜೀವ, ಆಕೆಗಾಗಿ ಒಂದು ಮಂಗಳಸೂತ್ರ ಖರೀದಿಸುವ ಇಂಗಿತ ವ್ಯಕ್ತಪಡಿಸಿದರು. ಪ್ರೇಮದ ಕಾಣಿಕೆ ನೀಡುವ ಇವರ ಉದ್ದೇಶ ಅರಿತ ಆಭರಣ ಮಳಿಗೆ ಸಿಬ್ಬಂದಿ ಬೆರಗಾದರು. ಮಡದಿಗೊಂದು ಚಿನ್ನದ ಉಡುಗೊರೆ ಕೊಡಿಸಲು ಮಳಿಗೆವರೆಗೂ ಬಂದ ಆ ವ್ಯಕ್ತಿಯಿಂದ ₹ 20 ಪಡೆದು ಮಂಗಳಸೂತ್ರವನ್ನು ಮಳಿಗೆಯ ಮಾಲೀಕರು ನೀಡಿದರು.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 93 ವರ್ಷ ವಯಸ್ಸಿನ ಈ ವ್ಯಕ್ತಿಗೆ ತನ್ನ ಪತ್ನಿಯ ಮೇಲಿರುವ ಪ್ರೇಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ನಿವೃತ್ತಿ ಶಿಂದೆ ಮತ್ತು ಅವರ ಪತ್ನಿ ಶಾಂತಾಬಾಯಿ ಅವರು ಜಲನ್ ಜಿಲ್ಲೆಯ ಅಂಭೋರಾ ಜಹಗಿರ್ ಗ್ರಾಮದವರು. ಕೃಷಿ ಕುಟುಂಬಕ್ಕೆ ಸೇರಿದವರಾದ ಇವರು ಈ ಘಟನೆ ನಡೆಯುವ ಸಂದರ್ಭದಲ್ಲಿ ಪಂಢರಪುರಕ್ಕೆ ಆಷಾಢ ಏಕಾದಶಿಗಾಗಿ ಪಾದಯಾತ್ರೆ ಹೊರಟವರು. ಮಾರ್ಗ ಮಧ್ಯೆ ಛತ್ರಪತಿ ಸಾಂಭಾಜಿನಗರದಲ್ಲಿರುವ ಆಭರಣ ಮಳಿಗೆಗೆ ಇವರು ಭೇಟಿ ನೀಡಿದ್ದರು.
ಇವರ ಪ್ರವೇಶ ಆರಂಭದಲ್ಲಿ ದೇಣಿಗೆ ಅಥವಾ ಭಿಕ್ಷೆ ಕೇಳಲು ಬಂದವರು ಎಂದೇ ಮಳಿಗೆಯವರು ಅಂದುಕೊಂಡಿದ್ದರು. ಆದರೆ ಆ ವ್ಯಕ್ತಿ ತನ್ನ ಬಳಿ ಇದ್ದ ₹1,120 ಅನ್ನು ನೀಡಿ ಪತ್ನಿಗೊಂದು ಮಂಗಳಸೂತ್ರ ಕೊಡಿ ಎಂದಾಗ ಎಲ್ಲರ ಕಣ್ಣಾಲಿಗಳು ತೇವಗೊಂಡಿದ್ದವು.
ಈ ಹಿರಿಯ ವ್ಯಕ್ತಿಯ ಸರಳತೆ ಮತ್ತು ಪತ್ನಿ ಕುರಿತ ಪ್ರೇಮಕ್ಕೆ ಮನಸೋತ ಆ ಮಳಿಗೆಯ ಮಾಲೀಕರು, ಅವರಿಂದ ಆಶೀರ್ವಾದ ರೂಪದಲ್ಲಿ ₹20 ಪಡೆದು, ಮಂಗಳಸೂತ್ರವನ್ನು ನೀಡಿದರು. ‘ಇದನ್ನು ಪಡೆದು ನನ್ನನ್ನು ಹರಸಿ. ಆ ಪಾಂಡುರಂಗ ಎಲ್ಲರನ್ನೂ ಹರಸಲಿ’ ಎಂದು ಮಳಿಗೆ ಮಾಲೀಕ ಹೇಳಿದರು.
‘ಈ ಹಿರಿಯ ಜೋಡಿ ಸದಾ ಒಟ್ಟಿಗೇ ಓಡಾಡುತ್ತಾರೆ. ಕಳೆದ ಹಲವು ವರ್ಷಗಳಿಂದ ಒಬ್ಬರಿಗೊಬ್ಬರು ನೆರವಾಗುತ್ತಾ ಜೀವನ ಸಾಗಿಸುತ್ತಿರುವುದನ್ನು ನೋಡುತ್ತಿದ್ದೇವೆ. ಇವರಿಗೊಬ್ಬ ಮಗ ಇದ್ದಾನೆ. ಆದರೆ ಬಹುತೇಕ ಸಂದರ್ಭದಲ್ಲಿ ಇವರಿಬ್ಬರೇ ಓಡಾಡುತ್ತಾರೆ. ಬೇಕೆಂದರೆ ಮಾತ್ರ ಸಾರ್ವಜನಿಕರ ನೆರವು ಪಡೆಯುತ್ತಾರೆ’ ಎಂದು ಸ್ಥಳೀಯರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.