
ತಂದೆ ಬಳಿ ಪ್ರೀತಿ ವಿಚಾರ ಹೇಳಿದ ಯುವತಿ
ಚಿತ್ರ: ಇನ್‌ಸ್ಟಾಗ್ರಾಂ
ಪ್ರೀತಿ, ಪ್ರೇಮ ಎಂದಾಕ್ಷಣ ಪೋಷಕರು ವಿರೋಧಿಸುವುದು ಸಾಮಾನ್ಯ. ಮಕ್ಕಳೂ ಕೂಡ ತಮ್ಮ ಪ್ರೀತಿಯ ವಿಷಯವನ್ನು ತಂದೆ ತಾಯಿಗೆ ಹೇಳಲೂ ಭಯಪಡುತ್ತಾರೆ. ಆದರೆ, ಇಲ್ಲೋರ್ವ ಯುವತಿ ತಾನು ಪ್ರೀತಿಸುತ್ತಿರುವ ಯುವಕನ ಬಗ್ಗೆ ತಂದೆಯ ಬಳಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾಳೆ. ಅದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಮಗಳು ಬೆಡ್ ಮೇಲೆ ಕುಳಿತ ತನ್ನ ತಂದೆಯ ಕೈ ಹಿಡಿದುಕೊಂಡು ಭಾವುಕಳಾಗಿರುವುದನ್ನು ಕಾಣಬಹುದು. ತಾನು ಬಯಸಿದ್ದನ್ನು ಹೇಳಲಾಗದೆ ತಡವರಿಸುತ್ತಾಳೆ. ಮಗಳ ಆತಂಕವನ್ನು ಗ್ರಹಿಸಿದ ತಂದೆ, ಅವಳು ಏನು ಹೇಳುತ್ತಾಳೆ ಎಂದು ಯೋಚಿಸುತ್ತಾ ಶಾಂತವಾಗಿ ಕಾಯುತ್ತಾರೆ.
ಕೈ ಹಿಡಿದುಕೊಂಡು ಸ್ವಲ್ಪ ಸಮಯದ ಬಳಿಕ, ಮಾತು ಆರಂಭಿಸುತ್ತಾಳೆ. ‘ಅಪ್ಪಾ, ನಾನು ಈ ವಿಷಯವನ್ನು ನಿಮಗೆ ಹೇಳಬೇಕೆಂದು ಹಲವು ವರ್ಷಗಳಿಂದ ಬಯಸಿದ್ದೆ. ಆದರೆ, ಸಾಧ್ಯವಾಗಿರಲಿಲ್ಲ. ಈಗ ಹೇಳುತ್ತಿದ್ದೇನೆ. ನನಗೆ 11 ವರ್ಷಗಳಿಂದ ಒಬ್ಬ ಗೆಳೆಯನಿದ್ದಾನೆ’ ಎಂದು ತಿಳಿಸುತ್ತಾಳೆ.
ಮಗಳ ಮಾತಿನಿಂದ ಕೋಪಗಳ್ಳದ ತಂದೆ, ಸಮಾಧಾನದಿಂದ ಭಾವುಕರಾಗಿ ‘ಮಗಳೇ ಎಲ್ಲರ ಜೀವನದಲ್ಲಿ ಪ್ರೀತಿಯಾಗುತ್ತದೆ. ಅದರಿಂದ ಭಯಪಡುವಂತಹದ್ದು ಏನಿದೆ?’ ಎಂದು ಹೇಳುತ್ತಾರೆ. ಈ ಉತ್ತರ ಕೇಳುತ್ತಿದ್ದಂತೆ ಮಗಳು ಭಾವುಕಳಾಗಿ ಒಂದು ಕ್ಷಣ ಕುಸಿದು ಬೀಳುತ್ತಾಳೆ.
ಸಂಭಾಷಣೆ ಮುಂದುವರೆದಂತೆ, ಅವಳು ತನ್ನ ಗೆಳೆಯನ ಹೆಸರನ್ನು ತಂದೆಗೆ ತಿಳಿಸುತ್ತಾಳೆ. ಆಗ, ತಂದೆ ‘ನಾನು ಆತನನ್ನು ನೋಡಿದ್ದೇನೆ’ ಎನ್ನುತ್ತಾರೆ. ಸದ್ಯ, ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಅನೇಕರು, ತಂದೆ ಮಗಳ ಬಾಂಧವ್ಯ ಹೀಗೆ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವು ಮದುವೆ ವಯಸ್ಸಿಗೆ ಬಂದಾಗ ಯುವಕ ಯುವತಿಯರು ತಮ್ಮ ಪ್ರೀತಿಯ ವಿಷಯವನ್ನು ತಂದೆ ತಾಯಿಯ ಬಳಿ ಧೈರ್ಯವಾಗಿ ಹೇಳಿಕೊಳ್ಳಬೇಕು ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.