ಗಂಡು ಮತ್ತು ಹೆಣ್ಣು ಸಿಂಹದ ಕಾಳಗ
ಚಿತ್ರ ಕೃಪೆ: Gujarat Tourism
ಏಷ್ಯಾಟಿಕ್ ಸಿಂಹಗಳಿಗೆ ಹೆಸರುವಾಸಿಯಾಗಿರುವ ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರಿಗೆ ಅಪರೂಪದ ದೃಶ್ಯವೊಂದು ಕಂಡಿದೆ. ನಡು ರಸ್ತೆಯಲ್ಲಿ ಎರಡು ಸಿಂಹಗಳು ಕಾಳಗಕ್ಕೆ ಇಳಿದಿರುವ ಅಪರೂಪದ ದೃಶ್ಯವನ್ನು ಗುಜರಾತ್ ಪ್ರವಾಸೋದ್ಯಮ ಇಲಾಖೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.
ಉದ್ಯಾನವನದಲ್ಲಿ ಗಂಡು ಹಾಗೂ ಹೆಣ್ಣು ಸಿಂಹಗಳು ಕಾಳಗ ನಡೆಸಿವೆ. ಸಫಾರಿಗೆ ಆಗಮಿಸಿದ್ದ ಪ್ರವಾಸಿಗರು ಈ ದೃಶ್ಯವನ್ನು ಕಣ್ಣು ತುಂಬಿಕೊಂಡಿದ್ದಾರೆ. ಹೆಣ್ಣು ಸಿಂಹವು ಗಂಡು ಸಿಂಹವನ್ನು ಯಾವುದೇ ಹಿಂಜರಿಕೆ, ಭಯ ಇಲ್ಲದೇ ಘರ್ಜಿಸುತ್ತ ಎದುರಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಗುಜರಾತ್ ಪ್ರವಾಸೋದ್ಯಮ ಇಲಾಖೆ ‘ರಾಣಿ ಕೋಪಗೊಂಡಾಗ ಮೌನವಾಗಿರುವುದು ಅತ್ಯಂತ ಬುದ್ಧಿವಂತಿಕೆ ಎಂಬುದು ರಾಜನಿಗೂ ತಿಳಿದಿದೆ’ ಎಂಬ ಹಾಸ್ಯಮಯ ಶೀರ್ಷಿಕೆ ನೀಡಿ ವಿಡಿಯೊ ಹಂಚಿಕೊಂಡಿದೆ. ಈ ದೃಶ್ಯವನ್ನು ಸೆರೆಹಿಡಿದ ವನ್ಯಜೀವಿ ಛಾಯಾಗ್ರಾಹಕ ಉರ್ಮಿಲ್ ಝವೇರಿ ಎಂಬುವವರು ‘ತೀವ್ರ ಘರ್ಷಣೆ’ ಎಂದು ಬಣ್ಣಿಸಿದ್ದಾರೆ.
ಗಂಡು ಮತ್ತು ಹೆಣ್ಣು ಸಿಂಹಗಳು ಸಂಭೋಗ ಹೊಂದುವ ಸಂದರ್ಭದಲ್ಲಿ ಕಾಳಗಕ್ಕೆ ಇಳಿಯುತ್ತವೆ. ಸಿಂಹಿಣಿಗಳು ಗಂಡು ಸಿಂಹದ ಶಕ್ತಿ ಮತ್ತು ಸೂಕ್ಮತೆಯನ್ನು ತಿಳಿಯಲು ಕಾಳಗ ನಡೆಸುತ್ತವೆ. ಗಂಡು ಸಿಂಹ ಪ್ರಾಬಲ್ಯ ಸಾಧಿಸಿದ ನಂತರವೇ ಹೆಣ್ಣು ಸಿಂಹದಿಂದ ಸಂಭೋಗಕ್ಕೆ ಒಪ್ಪಿಗೆ ಸಿಗುತ್ತದೆ. ಇದು ಭವಿಷ್ಯದಲ್ಲಿ ಜನಿಸುವ ಮರಿಗಳ ರಕ್ಷಣೆಗೆ ತಂದೆ ಸಿಂಹ ಶಕ್ತಿಶಾಲಿಯಾಗಿದೆಯೇ? ಎಂಬುದರ ಪರೀಕ್ಷೆಯಾಗಿದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.