ಕುನಾಲ್ ಕಾಮ್ರಾ ಅವರ ವಿಡಿಯೊ ಹಂಚಿಕೊಂಡಿರುವ ರೈಲ್ವೆ ಇಲಾಖೆ
ಎಕ್ಸ್ ಚಿತ್ರ
ನವದೆಹಲಿ: ರೈಲುಗಳ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಗೆ ಸಂಬಂಧಿಸಿದಂತೆ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರ ಇತ್ತೀಚಿನ ಹೇಳಿಕೆ ಮತ್ತು ಅದಕ್ಕೆ ರೈಲ್ವೆ ಇಲಾಖೆಯು ‘ಫ್ಯಾಕ್ಟ್‌ಚೆಕ್’ ವಿಭಾಗ ನೀಡಿದ ಉತ್ತರ ಈಗ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ರೈಲ್ವೆಯ ಫ್ಯಾಕ್ಟ್ ಚೆಕ್ ವಿಭಾಗವು ವಿಡಿಯೊ ಸಹಿತ ಕುನಾಲ್ ಅವರಿಗೆ ಪ್ರತಿಕ್ರಿಯೆ ನೀಡಿದೆ. ಇದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಜತೆಗೆ ರೈಲ್ವೆಯ ಹೇಳಿಕೆಗೆ ಹಲವರು ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ಕಾಮ್ರಾ ಅವರ ಹೇಳಿಕೆಯು ಅಪಾರ್ಥ ಕಲ್ಪಿಸುತ್ತಿದೆ ಮತ್ತು ರೈಲ್ವೆ ಇಲಾಖೆಯ ವರ್ಚಸ್ಸಿಗೆ ಮಸಿ ಬಳಿಯುವ ಯತ್ನವಾಗಿದೆ. ಇಂಥ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿ’ ಎಂದು ಹೇಳಿರುವ ರೈಲ್ವೆ ಇಲಾಖೆ, ತನ್ನ ಪೋಸ್ಟ್ ಜತೆಗೆ ಕಾಮ್ರಾ ಅವರ ಚಿತ್ರವನ್ನೂ ಹಂಚಿಕೊಂಡಿದೆ.
ಇದಕ್ಕೆ ಉತ್ತರವಾಗಿ, ‘ನನ್ನ ಹೇಳಿಕೆಯಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ವಿವರಿಸಿ’ ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ರೈಲ್ವೆ ಇಲಾಖೆ ನೀಡಿದ ಉತ್ತರ ನೆಟ್ಟಿಗರನ್ನು ಬೆರಗುಗೊಳಿಸಿದೆ.
2023ರಲ್ಲಿ ಸುಮಾರು 25 ಸಾವಿರ ರೈಲುಗಳ ಅಪಘಾತ ಸಂಭವಿಸಿದೆ ಎಂದು ಕಾಮ್ರಾ ಹೇಳಿದ್ದರು. ಇದಕ್ಕೆ ಉತ್ತರವಾಗಿ ರೈಲ್ವೆಯ ಫ್ಯಾಕ್ಟ್ ಚೆಕ್ ವಿಭಾಗವು ಉತ್ತರಿಸಿ, ನಿಮ್ಮ ಹೇಳಿಕೆ ಸುಳ್ಳು. ಒಟ್ಟು ಸಂಭವಿಸಿದ್ದು 24,678 ಎಂದಿದೆ.
ಇದೇ ವರ್ಷ ಸಂಭವಿಸಿದ ರೈಲುಗಳ ಅಪಘಾತದಲ್ಲಿ 22 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಕುನಾಲ್ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ 21,803 ಜನ ಮೃತಪಟ್ಟಿದ್ದಾರೆ ಎಂದು ಫ್ಯಾಕ್ಟ್ ಚೆಕ್ ತಂಡ ಹೇಳಿದೆ. ರೈಲ್ವೆಯ ಈ ಫ್ಯಾಕ್ಟ್ ಚೆಕ್ ಅನ್ನು ನೆಟ್ಟಿಗರು ತಮ್ಮದೇ ರೀತಿಯಲ್ಲಿ ಇಲಾಖೆಯ ಕಾಲೆಳೆಯುತ್ತಿದ್ದಾರೆ.
'ಇದು ಖಂಡಿತವಾಗಿಯೂ ಫ್ಯಾಕ್ಟ್ ಚೆಕ್ ಅಲ್ಲ, ಡಬ್ಬಲ್ ಪರಿಶೀಲನೆ’ ಎಂದು ಒಬ್ಬರು ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. ‘ಏನಿದು ಫ್ಯಾಕ್ಟ್ ಚೆಕ್, ಅಂದಾಜು ಎಂಬುದು ನಿಮಗೆ ಅರ್ಥವಾಗುತ್ತದೆಯೇ?‘ ಎಂದು ಕೇಳಿದ್ದಾರೆ.
‘ಲೊಕೊ ಪೈಲೆಟ್‌ಗಳ ಕಾರ್ಯ ಒತ್ತಡ ಹೆಚ್ಚಾಗಿದೆ. ಅವರು ಹಲವು ರಾತ್ರಿಪಾಳಿಯನ್ನು ನಿರ್ವಹಿಸಬೇಕಾಗಿದೆ. ಲೊಕೊ ಪೈಲೆಟ್‌ಗಳಿಗೆ ಕರ್ತವ್ಯ ಮತ್ತು ವಿಶ್ರಾಂತಿ ನೀಡಲು ಇಲಾಖೆ ನಿರ್ದಿಷ್ಟ ಕಾನೂನು ಪಾಲಿಸುತ್ತಿದೆ. ಪ್ರತಿ ವರ್ಷ 400 ಹಳಿ ನಿರ್ವಹಣೆ ಮಾಡುವವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಸುಳ್ಳು ಆಪಾದನೆಯಾಗಿದೆ. ಇಂದು ಒಂದು ವರ್ಷದಲ್ಲಿ ಅಲ್ಲ, ಬದಲಿಗೆ ಎರಡು ವರ್ಷದಲ್ಲಿ’ ಎಂದು ಇಲಾಖೆ ಹೇಳಿದೆ.
ಸಿಗ್ನಲ್ ದೋಷದಿಂದಾಗಿ ಹಲವು ಅಪಘಾತಗಳು ಸಂಭವಿಸಿದೆ ಎಂದು ಕುನಾಲ್ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ, ‘2004ರಿಂದ 2014ರವರೆಗೆ ಅಂಥ 1,711 ಅಪಘಾತಗಳು ಸಂಭವಿಸಿವೆ. ಕಳೆದ 10 ವರ್ಷಗಳಲ್ಲಿ ಅದು 34ಕ್ಕೆ ಇಳಿದಿದೆ. ಸಿಗ್ನಲ್ ದೋಷಗಳ ಕುರಿತ ಮಾಹಿತಿ ಸಾರ್ವಜನಿಕ ವೇದಿಕೆಗಳಲ್ಲಿ ಲಭ್ಯ’ ಎಂದಿದೆ.
ಹೊಸ ಹಳಿ ನಿರ್ಮಾಣಕ್ಕೆ ವ್ಯಾಪಕ ಹಣ ಕಡಿತಗೊಳಿಸಲಾಗಿದೆ ಎಂದು ಕುನಾಲ್ ಕಾಮ್ರಾ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಇಲಾಖೆ, ‘ಬಜೆಟ್ ದ್ವಿಗುಣಗೊಳಿಸಲಾಗಿದೆ. 2017–18ರಲ್ಲಿ ₹8,884 ಕೋಟಿ ಇದ್ದ ಅನುದಾನ, 2022ರಲ್ಲಿ ₹16,558 ಕೋಟಿಗೆ ಏರಿಸಲಾಗಿದೆ. 5,950 ಕಿ.ಮೀ.ಯಷ್ಟು ಹೊಸ ಹಳಿಗಳ ಅಳವಡಿಕೆಗೆ 2023–24ರಲ್ಲಿ ಚಾಲನೆ ನೀಡಲಾಗಿದೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.