ರೈಲು ನಿಲ್ದಾಣದಲ್ಲಿ ಸಮೋಸ ಮಾರುವವನಿಂದ ಪ್ರಯಾಣಿಕನ ಮೇಲೆ ಅಟ್ಟಹಾಸ
ಬೆಂಗಳೂರು: ರೈಲು ನಿಲ್ದಾಣದಲ್ಲಿ ಸಮೋಸ ವ್ಯಾಪಾರಿಯೊಬ್ಬ ರೈಲು ಪ್ರಯಾಣಿಕನೊಡನೆ ಅನುಚಿತವಾಗಿ ನಡೆದುಕೊಂಡು ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ಈಚೆಗೆ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಸಮೋಸ ವ್ಯಾಪಾರಿ ವರ್ತನೆಯ ಬಗ್ಗೆ ಅನೇಕರು ಕಿಡಿಕಾರಿದ್ದಾರೆ.
ವ್ಯಕ್ತಿಯೊಬ್ಬರು ಜಬಲ್ಪುರ ರೈಲು ನಿಲ್ದಾಣದಲ್ಲಿ ಸಮೋಸ ವ್ಯಾಪಾರಿಯಿಂದ ಸಮೋಸ ಖರೀದಿಸಿದ್ದರು. ಆದರೆ, ಹಣ ಪಾವತಿಸುವುದರಲ್ಲಿ ಏನೋ ವ್ಯತ್ಯಾಸ ಆಗಿದೆ. ಅದೇ ವೇಳೆ ರೈಲು ಹೊರಡಲು ಅಣಿಯಾಗಿದೆ. ಅಷ್ಟರಲ್ಲಿ ಆ ಬೀದಿ ವ್ಯಾಪಾರಿ ಪ್ರಯಾಣಿಕನ ಅಂಗಿ ಹಿಡಿದು ಎಳೆದು ರೈಲಿನಿಂದ ಕೆಳಗೆ ತಂದು ಹಣ ಪಡೆಯಲು ಯತ್ನಿಸಿದ್ದಾನೆ. ಅದಾಗ್ಯೂ ಯುಪಿಐ ಪಾವತಿಯೂ ಆಗದ್ದಕ್ಕೆ ಯುವಕನ ಸ್ಮಾರ್ಟ್ ವಾಚ್ ಬಿಚ್ಚಿಸಿಕೊಂಡು ಕಳಿಸಿದ್ದಾನೆ.
ಅಷ್ಟರಲ್ಲಿ ರೈಲು ಹೊರಡುತ್ತಿತ್ತು. ಸಮೋಸ ವ್ಯಾಪಾರಿಯಿಂದ ತೀವ್ರ ತೊಂದರೆ ಅನುಭವಿಸಿದ ರೈಲು ಪ್ರಯಾಣಿಕ ನಂತರ ಅಲ್ಲಿಂದ ಓಡಿ ಹೋಗಿ ರೈಲು ಹತ್ತಿದ್ದಾನೆ. ಈ ಘಟನೆ ಅಲ್ಲಿಯೇ ಇದ್ದ ಅಪರಿಚಿತರು ವಿಡಿಯೊ ಮಾಡಿಕೊಂಡಿದ್ದಾರೆ.
ಈ ಕುರಿತು ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ವ್ಯಾಪಾರಿ ಬಗ್ಗೆ ರೈಲ್ವೆ ಇಲಾಖೆ ಹಾಗೂ ಸಚಿವರು ಸಾರ್ವಜನಿಕರ ತೀವ್ರ ಆಕ್ರೋಶವನ್ನು ಎದುರಿಸಿದ್ದಾರೆ. ಕುಡಲೇ ಎಚ್ಚೆತ್ತಿರುವ ಪಶ್ಚಿಮ ಮಧ್ಯ ರೈಲ್ವೆ ವಲಯದ ಜಬಲ್ಪುರ ವಲಯದ ಅಧಿಕಾರಿಗಳು ದುರ್ನಡತೆ ತೋರಿರುವ ವ್ಯಾಪಾರಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅಲ್ಲದೇ ಆತನ ವ್ಯಾಪಾರ ಪರವಾನಗಿಯನ್ನೂ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ರೈಲು ನಿಲ್ದಾಣದಲ್ಲಿ ಈ ರೀತಿ ದುರ್ನಡತೆ ತೋರುವ ಹೊರಗಿನ ವ್ಯಾಪಾರಿಗಳಿಗೆ ರೈಲ್ವೆ ಇಲಾಖೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ಸಾರ್ವಜನಿಕರು ಇಂಟರ್‌ನೆಟ್‌ನಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.