ವಧುವಿಗೆ ವರ ಅಥವಾ ವರನಿಗೆ ವಧು ಹುಡುಕುವ ಕೆಲಸ ಅಷ್ಟು ಸುಲಭದ ಮಾತಲ್ಲ. ಹುಡುಗನಿಗೆ ಒಪ್ಪಿಗೆಯಾದರೆ, ಮನೆಯವರು ಒಪ್ಪುವುದಿಲ್ಲ, ಮನೆಯವರು ಒಪ್ಪಿದರೆ ಹುಡುಗಿಗೆ ಒಪ್ಪಿಗೆಯಾಗುವುದಿಲ್ಲ. ಹೀಗೆ ನಾನಾ ಕಾರಣಗಳಿಂದ ಸರಿ ಹೊಂದುವ ಜೋಡಿ ಹುಡುಕುವುದು ಕಷ್ಟದಾಯಕವಾಗಿದೆ.
ಹರಿಯಾಣ ಮೂಲದ 28 ವರ್ಷದ ಡೆಟಾ ಅನಾಲಿಸ್ಟ್ ವಿಕಾಸ್ ಎಂಬ ಯುವಕ ವಿಭಿನ್ನ ರೀತಿಯಲ್ಲಿ ವಧುವನ್ನು ಹುಡುಕುತ್ತಿದ್ದಾರೆ. ಪೋಷಕರು ವಧುವನ್ನು ತೋರಿಸಿದಾಗ, ವ್ಯವಸ್ಥಿತವಾಗಿ ವಧುವಿನ ಮಾಹಿತಿ ಹಾಗೂ ಮಾತುಕತೆ ಯಾವ ಹಂತದಲ್ಲಿದೆ ಎಂಬುದನ್ನು ಸ್ಪ್ರೆಡ್‌ಶೀಟ್‌ನಲ್ಲಿ ಒಂದೊಂದಾಗಿ ಪಟ್ಟಿ ಮಾಡಿದ್ದಾರೆ.
ಸ್ಪ್ರೆಡ್‌ಶೀಟ್‌ನಲ್ಲಿ ವಧುವಿನ ಹೆಸರು, ಕರೆಯ ವಿವರ, ವಧುವಿನ ಬಗ್ಗೆ ಕುಟುಂಬದ ಅಭಿಪ್ರಾಯ, ಪೋಷಕರು ಹಾಗೂ ವಧುವಿನ ಪ್ರತಿಕ್ರಿಯೆ ಸೇರಿದಂತೆ ಪ್ರಸ್ತುತ ಸಂಬಂಧ ಯಾವ ಹಂತದಲ್ಲಿದೆ ಎಂಬುದನ್ನು ಸ್ಪ್ರೆಡ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವನ್ನು ಹಂಚಿಕೊಂಡ ವಿಕಾಸ್ , ‘ಜೀವನವು ನಿಮಗೆ ಅರೇಂಜ್ಡ್ ಮ್ಯಾರೇಜ್ ಆಯ್ಕೆ ನೀಡಿದಾಗ, ಟ್ರ್ಯಾಕರ್ ಅನ್ನು ನಿರ್ಮಿಸಿ, ವಿಶೇಷವಾಗಿ ವಾರಾಂತ್ಯದಲ್ಲಿ ಟ್ರ್ಯಾಕರ್ ರೂಪಿಸಿಕೊಳ್ಳಿ’ ಎಂದು ಬರೆದಿದ್ದಾರೆ.
‘ಸುಮಾರು ಐದು ತಿಂಗಳ ಹಿಂದೆ ನಾನು ವಧುವನ್ನು ಹುಡುಕಲು ಪ್ರಾರಂಭಿಸಿದೆ. ನನ್ನ ಪೋಷಕರು ಪ್ರತಿ ಬಾರಿ ನನಗೆ ವಧುವಿನ ವಿವರಗಳನ್ನು ಕಳುಹಿಸಿದಾಗ, ಸಂಜೆಯೊಳಗೆ ಅವರಿಗೆ ನಾನು ನನ್ನ ಅಭಿಪ್ರಾಯವನ್ನು ಹೇಳಬೇಕಾಗುತ್ತದೆ. ಹಾಗಾಗಿ ಸ್ಪ್ರೆಡ್‌ಶೀಟ್‌ನಲ್ಲಿ ಆಯಾ ವಧುವಿನ ಮಾಹಿತಿಯನ್ನು ಪಟ್ಟಿ ಮಾಡಿದ್ದೇನೆ. ಜತೆಗೆ ಹುಡುಗಿಯರನ್ನು ಭೇಟಿಯಾದ ಬಗ್ಗೆ, ಕರೆ ಮಾಡಿ ಮಾತನಾಡಿದ ಬಗ್ಗೆ ನನ್ನ ಪೋಷಕರಿಗೆ ತಿಳಿಸಿದ ಅಭಿಪ್ರಾಯ, ಆಕೆ ಅವರ ಪೋಷಕರಿಗೆ ತಿಳಿಸಿದ ಅಭಿಪ್ರಾಯವನ್ನೂ ಪಟ್ಟಿಯಲ್ಲಿ ಸೇರಿಸಿದ್ದೇನೆ’ ಎಂದು ಹೇಳಿದ್ದಾರೆ.
‘ನಾವು ರಾತ್ರಿ 11 ಅಥವಾ 12 ಗಂಟೆಯ ಸುಮಾರಿಗೆ ಕಚೇರಿಯಿಂದ ಮನೆಗೆ ಹೋಗುತ್ತೇವೆ. ಕೆಲಸದ ನಡುವೆ ವಾರಾಂತ್ಯಗಳಲ್ಲಿ ಮಾತ್ರ ಬಿಡುವಾಗುತ್ತೇವೆ. ಯಾವಾಗ ವಧುವಿನ ಬಯೋಡೇಟಾ ನೋಡಬೇಕು, ಯಾವಾಗ ಮಾತನಾಡಬೇಕು?’ ಎಂದು ಅಲವತ್ತುಕೊಂಡಿದ್ದಾರೆ. ಸ್ನೇಹಿತರಿಗೂ ಸಹಾಯವಾಗಲೆಂದು ವಿಕಾಸ್ ಅವರು ಸ್ಪ್ರೆಡ್‌ಶೀಟ್‌ಅನ್ನು ಶೇರ್ ಮಾಡಿದ್ದೇನೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.