ಮೆಕ್ಸಿಕೋ ಮೇಯರ್
ಚಿತ್ರ ಕೃಪೆ: @IndianGems
ಪಶ್ಚಿಮ ಮೆಕ್ಸಿಕೊದಲ್ಲಿ ಹೊಸ ರೈಲು ಮಾರ್ಗದ ಉದ್ಘಾಟನೆಗೆ ಅತಿಥಿಯಾಗಿದ್ದ ಟ್ಲಾಜೊಮುಲ್ಕೊ ಡಿ ಜುನಿಗಾದ ಮೇಯರ್ ಬರುವಷ್ಟರಲ್ಲಿ ರೈಲು ಹೊರಟು ಹೋದ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಗ್ವಾಡಲಜರಾ ಮೆಟ್ರೋಪಾಲಿಟನ್ ಪ್ರದೇಶದ ಭಾಗವಾದ ಟ್ಲಾಜೊಮುಲ್ಕೊ ಡಿ ಜುನಿಗಾದಲ್ಲಿ 4 ಹೊಸ ರೈಲು ಮಾರ್ಗಗಳ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೊದಲ ರೈಲಿಗೆ ಚಾಲನೆ ನೀಡಲು ಮೇಯರ್ ಗೆರಾರ್ಡೊ ಕ್ವಿರಿನೊ ವೆಲಾಜ್ಕ್ವೆಜ್ ಚಾವೆಜ್ ಸಹಾಯಕರೊಂದಿಗೆ ಜಾಗಿಂಗ್ ಮಾಡುತ್ತ ರೈಲು ನಿಲ್ದಾಣಕ್ಕೆ ಆಗಮಿಸುವ ವೇಳೆಗೆ ರೈಲು ಹೊರಟು ಹೋಗಿತ್ತು.
ಎಲ್ ಹೆರಾಲ್ಡೊ ಡಿ ಮೆಕ್ಸಿಕೊ ವರದಿ ಪ್ರಕಾರ, ಈ ಹೊಸ ರೈಲು ಮಾರ್ಗ 21 ಕಿ.ಮೀ ವ್ಯಾಪಿಸಿದೆ. ಈ ಮಾರ್ಗದಲ್ಲಿ 8 ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಪ್ರತಿನಿತ್ಯ 1 ಲಕ್ಕಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ.
ಭಾರತದಲ್ಲೂ ಹರಿದಾಡಿದ ವಿಡಿಯೊ
ಸದ್ಯ ಈ ವಿಡಿಯೋ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ‘ಭಾರತದಲ್ಲಿ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ವಿವಿಧ ಕಾರ್ಯಕ್ರಮಗಳಿಗೆ ಬರುವುದಕ್ಕೆ ಗಂಟೆಗಟ್ಟಲೇ ತಡ ಮಾಡುತ್ತಾರೆ. ಒಂದು ವೇಳೆ ಭಾರತದಲ್ಲಿ ಇಂತಹ ಘಟನೆ ನಡೆದಿದ್ದರೆ, ರೈಲು ಚಾಲಕನನ್ನು ಬಂಧಿಸಲಾಗುತ್ತಿತ್ತು’ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನೂ ಕೆಲವರು ‘ಭಾರತ ಹಾಗೂ ವಿದೇಶಗಳ ನಡುವೆ ಹೋಲಿಕೆ ಮಾಡಿದ್ದಾರೆ. ಭಾರತದಲ್ಲಿ ಸಚಿವರಿಗಾಗಿಯೇ ರೈಲು ಗಂಟೆಗಟ್ಟಲೇ ಕಾಯುತ್ತದೆ’ ಎಂದು ಕಮೆಂಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.