ಚಿತ್ರ: ವಿಡಿಯೊದ ಸ್ಕ್ರೀನ್ ಗ್ರಾಬ್
ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿರುವ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳ ಬಳಗವೇ ಇದೆ. ಕಂಟೆಂಟ್ ಕ್ರಿಯೆಟರ್ ಒಬ್ಬರು ಆರ್‌ಸಿಬಿ ಹೆಸರಿನಲ್ಲಿ ಕ್ಯೂರ್‌ಆರ್ ಕೋಡ್ ಸ್ಕ್ಯಾನ್ ಮಾಡಿ ಆರ್‌ಸಿಬಿಗೆ ₹10 ಪಾವತಿಸಿ ಎಂದು ತಮಾಷೆಗಾಗಿ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಸಾರ್ಥಕ್ ಸಚ್‌ದೇವ ಎನ್ನುವವರು ಬೆಂಗಳೂರು ನಗರದ ಕೆಲವೆಡೆ ತನ್ನದೇ ಬ್ಯಾಂಕ್ ಖಾತೆಯ ಕ್ಯೂಆರ್ ಟಿಕೆಟ್ ಅಂಟಿಸಿ, ‘ಆರ್‌ಸಿಬಿಯ ಗುಡ್‌ಲಕ್‌ಗಾಗಿ ₹10 ಪಾವತಿಸಿ’ ಎಂದು ಬರೆದಿದ್ದ. ಇದನ್ನು ನೋಡಿದ ಅನೇಕರು ಹಣ ಪಾವತಿಸಿದ್ದಾರೆ. ದಿನದ ಅಂತ್ಯಕ್ಕೆ ₹1200 ಸಂಗ್ರಹವಾಗಿದೆ ಎಂದು ಸಚ್‌ದೇವ್ ವಿಡಿಯೊದಲ್ಲಿ ಹೇಳಿದ್ದಾರೆ.
‘ಜನ ಇದನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದುಕೊಂಡಿರಲಿಲ್ಲ. ಇದು ಸಾಮಾಜಿಕ ಜಾಲತಾಣಗಳಿಗಾಗಿ ಮಾಡಿದ ತಮಾಷೆಯ ಪ್ರಯೋಗವಾಗಿತ್ತು. ಆದರೆ ದಿನದ ಅಂತ್ಯದಲ್ಲಿ ನನ್ನ ಖಾತೆಯಲ್ಲಿ ₹1,200 ಸಂಗ್ರಹವಾಗಿದೆ. ಇದು ಆರ್‌ಸಿಬಿಯ ಅಪರಿಚಿತ ಅಭಿಮಾನಿಗಳು ಪಾವತಿಸಿದ ಹಣವಾಗಿದೆ’ ಎಂದು ಹೇಳಿದ್ದಾರೆ.
ಸದ್ಯ ಈ ವಿಡಿಯೊ 2 ಕೋಟಿ 40 ಲಕ್ಷ ವೀಕ್ಷಣೆಯಾಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಬಳಕೆದಾರರೊಬ್ಬರು ಇದು ಅದ್ಭುತವಾದ ಹೊಸ ವ್ಯವಹಾರ ಮಾದರಿ ಎಂದು ತಮಾಷೆ ಮಾಡಿದರೆ, ಇತರರು ಭಾರತದಲ್ಲಿ ಜನರನ್ನು ವಂಚಿಸುವುದು ಎಷ್ಟು ಸುಲಭ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಇನ್ನೊಬ್ಬರು, ‘ಜನರು ಕೆಲವು ಹುಚ್ಚುತನದ ಕೆಲಸಗಳಿಗೆ ಹಣವನ್ನು ಖರ್ಚು ಮಾಡುತ್ತಾರೆ, ಆ ಹಣದಿಂದ ಅವರು ಎಂದಿಗೂ ಬಡವರಿಗೆ ಊಟ ಹಾಕುವುದಿಲ್ಲ’ ಎಂದಿದ್ದಾರೆ.
ಮತ್ತೊಬ್ಬರು, ಕ್ಯೂಆರ್ ಕೋಡ್ ನಕಲಿಯೋ ಅಸಲಿಯೋ ಎಂಬುದನ್ನೂ ಪರೀಕ್ಷಿಸದೆ ಸ್ಕ್ಯಾನ್ ಮಾಡುವ ಜನರು ಇರುವ ಈ ದೇಶದಲ್ಲಿ ವಾಸಿಸುವುದು ಮೂರ್ಖತನ ಎನಿಸುತ್ತಿದೆ. ಈ ರೀತಿಯ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವುದರಿಂದ ಬ್ಯಾಂಕ್ ಖಾತೆಗಳು ಹ್ಯಾಕ್ ಆಗುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.