ವಂದೇ ಭಾರತ್ ರೈಲಿನಲ್ಲಿ BJP ಶಾಸಕನ ಬೆಂಬಲಿಗರಿಂದ ಪ್ರಯಾಣಿಕನ ಮೇಲೆ ಹಲ್ಲೆ
ಬೆಂಗಳೂರು: ವಂದೇ ಭಾರತ್ ರೈಲಿನಲ್ಲಿ ಶಾಸಕನಿಗೆ ಆಸನ ಬಿಟ್ಟು ಕೊಡದಿದ್ದಕ್ಕೆ ಶಾಸಕನ ಬೆಂಬಲಿಗರು ಪ್ರಯಾಣಿಕನೊಬ್ಬನ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.
ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಕಳೆದ ಗುರುವಾರ ದೆಹಲಿ–ಭೋಪಾಲ್ ವಂದೇ ಭಾರತ್ ರೈಲಿನಲ್ಲಿ ಉತ್ತರ ಪ್ರದೇಶ ಝಾನ್ಸಿ ಕ್ಷೇತ್ರದ ಬಿಜೆಪಿ ಶಾಸಕ ರಾಜೀವ್ ಸಿಂಗ್ ತಮ್ಮ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ರಾಜೀವ್ ಸಿಂಗ್ ಪತ್ನಿ ಹಾಗೂ ಮಗಳ ಆಸನ ಒಂದು ಕಡೆ ಹಾಗೂ ಶಾಸಕನ ಆಸನ ಮತ್ತೊಂದು ಕಡೆ ಇತ್ತು. ಆಗ ಪತ್ನಿ ಮಗಳ ಬಳಿ ಕೂತಿದ್ದ ವ್ಯಕ್ತಿ ಶಾಸಕನಿಗೆ ಸೀಟು ಬಿಟ್ಟು ಕೊಡದಿದ್ದಕ್ಕೆ ರೈಲು ಝಾನ್ಸಿ ಬಳಿ ಬಂದಾಗ ಶಾಸಕನ ಬೆಂಬಲಿಗರು ಸಹ ಪ್ರಯಾಣಿಕನಿಗೆ ಮನಸೋಇಚ್ಚೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೈ ಹಾಗೂ ಚಪ್ಪಲಿಯಿಂದ ಥಳಿಸಿದ್ದಕ್ಕೆ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ವ್ಯಕ್ತಿ ದೂರು ದಾಖಲಿಸಿದ್ದಾನೆ. ಹಾಗೆಯೇ ಶಾಸಕ ರಾಜೀವ್ ಸಿಂಗ್ ಅವರೂ ಪ್ರತಿ ದೂರು ದಾಖಲಿಸಿದ್ದು, ಆತ ನನ್ನ ಪತ್ನಿ ಮತ್ತು ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕೆಲವರು ಥಳಿಸಿದ್ದಾರೆ. ಮುಂದಿನ ನಿಲ್ದಾಣದಲ್ಲೂ ಅದೇ ಕೃತ್ಯ ಎಸಗಿದ್ದಾನೆ ಎಂದು ದೂರು ನೀಡಿರುವುದಾಗಿ ಝಾನ್ಸಿ ವಿಭಾಗದ ರೈಲ್ವೆ ಎಸ್‌ಪಿ ವಿಪುಲ್ ಕುಮಾರ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಇನ್ನೊಂದೆಡೆ ಕೃತ್ಯದ ವಿಡಿಯೊ ಗಮನಕ್ಕೆ ಬಂದ ಮೇಲೆ ಉತ್ತರ ಪ್ರದೇಶ ಬಿಜೆಪಿ ಶಾಸಕ ರಾಜೀವ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.