ಪಟ್ನಾ: ಅಧೀನ ಸಿಬ್ಬಂದಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಿಬ್ಬಂದಿಯನ್ನು ಲಾಕಪ್ನಲ್ಲಿ ಕೂಡಿ ಹಾಕಿರುವ ಘಟನೆ ಬಿಹಾರದ ನವಾಡದಲ್ಲಿ ನಡೆದಿದೆ.
ಪೊಲೀಸರು ಲಾಕಪ್ನಲ್ಲಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಗ್ಲಾ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆ ಸಂಬಂಧ ಗೌರವ್ ಮಂಗ್ಲಾ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಬಿಹಾರ ಪೊಲೀಸ್ ಒಕ್ಕೂಟ (ಬಿಪಿಎ) ಒತ್ತಾಯಿಸಿದೆ.
ಸಬ್ ಇನ್ಸ್ಪೆಕ್ಟರ್ಗಳಾದ ಶತ್ರುಘ್ನ ಪಾಸ್ವಾನ್ ಮತ್ತು ರಾಮ್ರೇಖಾ ಸಿಂಗ್, ಎಎಸ್ಐಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ್ ಉರೌನ್ ಅವರು ಲಾಕಪ್ನಲ್ಲಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಕೆಲವು ಪ್ರಕರಣಗಳನ್ನು ಪರಿಶೀಲಿಸುವ ಸಲುವಾಗಿ ಸೆ. 8ರಂದು ರಾತ್ರಿ 9 ಗಂಟೆ ಸುಮಾರಿಗೆ ಎಸ್ಪಿ ಗೌರವ್ ಮಂಗ್ಲಾ ಠಾಣೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಿರಿಯ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವುದು ಪತ್ತೆಯಾಗಿತ್ತು. ಇದರಿಂದ ಕೋಪಗೊಂಡಿದ್ದ ಗೌರವ್, ತಪ್ಪು ಮಾಡಿದವರನ್ನು ಲಾಕಪ್ನಲ್ಲಿ ಇರಿಸುವಂತೆ ಹೇಳಿದ್ದರು. ಆದರೆ, ಏನು ತಪ್ಪು ಮಾಡಿದ್ದರೂ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ಪೊಲೀಸರನ್ನು ಲಾಕಪ್ನಲ್ಲಿ ಕೂಡಿ ಹಾಕಿರುವ ಯಾವುದೇ ವಿಡಿಯೊ ಬಹಿರಂಗಗೊಂಡಿಲ್ಲ ಎಂದು ಗೌರವ್ ಹೇಳಿಕೊಂಡಿದ್ದರು. ಆದರೆ, ಅವರು ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ವಾಟ್ಸಾಆ್ಯಪ್ನಲ್ಲಿ ವಿಡಿಯೊ ವೈರಲ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.