ತಂಬಾಕು ಪದಾರ್ಥಗಳನ್ನು ನೀಡುತ್ತಿರುವುದು
ಮದುವೆಗೆ ಬರುವ ಅತಿಥಿಗಳಿಗೆ ಸಾಮಾನ್ಯವಾಗಿ ಸಿಹಿ ತಿನಿಸುಗಳು, ಫಲಾಹಾರ ಅಥವಾ ಉಡುಗೊರೆಗಳನ್ನು ನೀಡಲಾಗುತ್ತದೆ. ಆದರೆ ಇಲ್ಲೊಂದು ಮದುವೆಯಲ್ಲಿ ಬೀಡಿ, ಸಿಗರೇಟ್ ಹಾಗೂ ಗುಟ್ಕಾ ನೀಡಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಈ ವಿಡಿಯೊವನ್ನು ವಂಶಿಕಾ ಎಂಬುವವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಒಂದು ಟ್ರೇನಲ್ಲಿ ಸಿಹಿ ತಿನಿಸುಗಳನ್ನು ತೆಗೆದುಕೊಂಡು ಹೋಗುವಂತೆ ಬೀಡಿ, ಸಿಗರೇಟ್ ಹಾಗೂ ಗುಟ್ಕಾ ಪ್ಯಾಕೆಟ್‌ಗಳನ್ನು ತೆಗೆದುಕೊಂಡು ಬರುತ್ತಾರೆ. ಮದುವೆಗೆ ಬಂದಿದ್ದವರು ತಮಗೆ ಬೇಕಾದ ವಸ್ತುವನ್ನು ಆರಿಸಿ ತೆಗದುಕೊಳ್ಳುವುದನ್ನು ಕಾಣಬಹುದು.
ವಿಡಿಯೊ ನೋಡಿದವರು ಕಮೆಂಟ್‌ನಲ್ಲಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. ‘ಉತ್ತರ ಪ್ರದೇಶ, ಹರಿಯಾಣ ಮತ್ತು ಗರ್ವಾಲ್ ಪ್ರದೇಶದ ಕೆಲವು ಭಾಗಗಳಲ್ಲಿ ಇಂತಹ ಪದ್ಧತಿಗಳು ಸಾಮಾನ್ಯ ಸಂಗತಿಯಾಗಿವೆ. ಅಲ್ಲಿ ಅತಿಥಿಗಳಿಗೆ ತಂಬಾಕು ಉತ್ಪನ್ನಗಳನ್ನು ನೀಡುವುದನ್ನು ಆತಿಥ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ‘ ಎಂದು ಬರೆದಿದ್ದಾರೆ.
ಮತ್ತೊಬ್ಬರು ‘ಬಜೆಟ್ ನಂತರ ಸಿಗರೇಟ್ ಬೆಲೆ ಏರಿಕೆ ಕಂಡಿರುವುದರಿಂದ ಮದುವೆಯಲ್ಲಿ ಅತಿಥಿಗಳಿಗೆ ‘ಪ್ರೀಮಿಯಂ ಟ್ರೀಟ್’ ನೀಡುತ್ತಿರಬಹುದು’ ಎಂದು ಹಾಸ್ಯ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.