ಮಾತನಾಡುವ ಬೊಂಬೆಯೊಂದಿಗೆ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ ಜಾನು
-ಪ್ರಜಾವಾಣಿ ಚಿತ್ರ/ ರಂಜು ಪಿ.
ಲಿಂಗತ್ವ ಅಲ್ಪಸಂಖ್ಯಾತರಾದರೆ ಬದುಕಲು ಭಿಕ್ಷಾಟನೆ ಅನಿವಾರ್ಯ ಎಂಬ ಸಮುದಾಯದ ಸಲಹೆಯ ನಡುವೆಯೂ ಜಾನು ಅವರು ಆರಿಸಿಕೊಂಡಿದ್ದು ಗೊಂಬೆ ಕಲಾವಿದೆ ವೃತ್ತಿಯನ್ನು
ನಾ ನು ಹೆಣ್ಣಾಗಬೇಕೆಂದಿದ್ದು ಭಿಕ್ಷೆ ಬೇಡಲು ಅಲ್ಲ. ಘನತೆಯಿಂದ ಬದುಕಲು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದಲು, ಕಲೆಯನ್ನೇ ಆರಾಧಿಸುತ್ತಿದ್ದ ನನ್ನ ಮನದೊಳಗಿನ ಆಸೆಯನ್ನು ಪೂರೈಸಲು...
ಹೀಗೆಂದವರು ಮೆಹೆಂದಿ ಹಾಕುವ ವೃತ್ತಿಯ ಆಶ್ರಯದಲ್ಲಿದ್ದುಕೊಂಡು ಮಾತನಾಡುವ ಗೊಂಬೆ ಕಲೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ ಜಾನು.
ರಾಯಚೂರು ಜಿಲ್ಲೆಯ ಸಿರ್ವಾರ ತಾಲ್ಲೂಕಿನವರಾದ ಜಾನು ಜನಿಸಿದ್ದು ಬಡ ಕುಟುಂಬದಲ್ಲಿ. ತಂದೆ ಮಾರುಕಟ್ಟೆಯಲ್ಲಿ ಮೂಟೆ ಹೊರುವ ಕೆಲಸ, ಅಣ್ಣ ಪಂಚರ್ ಅಂಗಡಿ ಹೊಂದಿದ್ದರು. ಹುಡುಗನಾಗಿ ಜನಿಸಿದ್ದರೂ, ಬೆಳೆಯುತ್ತಾ ತಮ್ಮೊಳಗಿನ ಹೆಣ್ಣಿನ ಬೆಳವಣಿಗೆಯನ್ನು ಗ್ರಹಿಸಲು ಅವರು ಸೋಲಲಿಲ್ಲ. ಹಾಗೆಯೇ ಬಯಕೆಯನ್ನು ಹತ್ತಿಕ್ಕಲೂ ಯತ್ನಿಸಲಿಲ್ಲ. ಇದರ ಪರಿಣಾಮವೇ ಸಣ್ಣ ವಯಸ್ಸಿನಲ್ಲೇ ಕುಟುಂಬದಿಂದ ಹೊರಬೀಳಬೇಕಾದ ಅನಿವಾರ್ಯತೆ. ದುಡಿಮೆ ಇಲ್ಲದ ಒಂಟಿ ಜೀವನದಲ್ಲಿ ಎದುರಾದ ಸವಾಲುಗಳು ಜಾನು ಅವರನ್ನು ಹೆಚ್ಚು ಗಟ್ಟಿಗಿತ್ತಿಯನ್ನಾಗಿಸಿದವು.
ಲಿಂಗತ್ವ ಅಲ್ಪಸಂಖ್ಯಾತರಾದರೆ ಬದುಕಲು ಭಿಕ್ಷಾಟನೆ ಅನಿವಾರ್ಯ ಎಂಬ ತಮ್ಮ ಸಮುದಾಯದವರ ಸಲಹೆಯ ನಡುವೆಯೂ, ಜಾನು ಅವರನ್ನು ಸದಾ ಕೊರೆಯುತ್ತಿದ್ದದ್ದು ತಾನು ಬಾಲ್ಯದಿಂದಲೂ ಪ್ರೀತಿಸುತ್ತಿದ್ದ ಕಲೆ.
‘ನನ್ನನ್ನು ಬಾಲಕರ ಶಾಲೆಗೆ ಸೇರಿಸಿದ್ದರೂ, ಮನಸ್ಸು ಮಾತ್ರ ಸದಾ ಪಕ್ಕದ ಬಾಲಕಿಯರ ಶಾಲೆಯ ಗೆಳತಿಯರೊಂದಿಗೆ ಆಡುವುದನ್ನೇ ಬಯಸುತ್ತಿತ್ತು. 10ನೇ ತರಗತಿಗೆ ಬರುವ ಹೊತ್ತಿಗೆ ಹುಡುಗನೊಬ್ಬನನ್ನು ಪ್ರೀತಿಸಿದ್ದೆ. ಇದನ್ನು ಅರಿತ ಕುಟುಂಬದವರು ಜರಿದರು, ಥಳಿಸಿದರು. ನನ್ನ ಬಯಕೆ ಹೇಳಿಕೊಂಡಾಗ ಕುಟುಂಬದವರ ತಿರಸ್ಕಾರದ ನೋವು, ಚುಚ್ಚುಮಾತು ಅನುಭವಿಸಬೇಕಾಯಿತು. ಇದರ ನಡುವೆಯೇ ನನ್ನ ಬಾಲ್ಯದ ಕೆಲ ಗೆಳತಿಯರು ನೆರವಾದರು. ನನಗೆ ಮೆಹೆಂದಿ ಹಾಕುವುದನ್ನು ಕಲಿಸಿದ್ದರು. ಮುಂದಿನ ಒಂಟಿ ಜೀವನಕ್ಕೆ ಆಧಾರವಾಗಿದ್ದೇ ಈ ಕಲೆ’ ಎಂದು ಬದುಕಿನ ಬುತ್ತಿ ಬಿಚ್ಚಿಟ್ಟರು ಜಾನು.
‘ಸಿರ್ವಾರದಿಂದ ಬೆಂಗಳೂರಿನತ್ತ ಒಂಟಿ ಪಯಣ ಆರಂಭಿಸಿದೆ. ಕೆಲ ದಿನಗಳ ಕಾಲ ನನ್ನ ಸ್ನೇಹಿತೆಯೊಬ್ಬಳು ಆಶ್ರಯ ನೀಡಿ ನೆರವಾದಳು. ಮುಂದಿನ ಜೀವನ ನಾನೇ ನಡೆಸಬೇಕಿತ್ತು. ಮನಸ್ಸು ಹೆಣ್ಣೇ ಆಗಿದ್ದರೂ, ಪುರುಷನಾಗಿ ಬದುಕುವ ಹಿಂಸೆಯನ್ನು ಅನುಭವಿಸಿದೆ. ಮನೆಯಲ್ಲಿ ಹೆಣ್ಣು, ಹೊರಗೆ ಹೋಗುವಾಗ ಗಂಡಿನ ಉಡುಪು ತೊಟ್ಟು ಹೋಗುತ್ತಿದ್ದೆ. ಸಮುದಾಯದವರನ್ನು ಸಂಪರ್ಕಿಸಿ, ನೋಂದಾಯಿಸಿಕೊಂಡೆ. ಭಿಕ್ಷಾಟನೆಯ ಸಲಹೆ ಕೆಲವರಿಂದ ಸಿಕ್ಕಿತು. ನಂತರ ಹೆಣ್ಣಿನ ಉಡುಪು ತೊಟ್ಟು ಬೆಂಗಳೂರು, ಮಂಗಳೂರಿನಲ್ಲಿ ಸಿಗ್ನಲ್‌ಗಳಲ್ಲಿ ಒಲ್ಲದ ಮನಸ್ಸಿನಿಂದಲೇ ಭಿಕ್ಷೆಯನ್ನೂ ಬೇಡಿದೆ. ಆದರೆ ಓದು ಮುಂದುವರಿಸುವ ಹಾಗೂ ಕಲೆಯೊಂದನ್ನು ಕರಗತ ಮಾಡಿಕೊಳ್ಳುವ ತುಡಿತ ಮಾತ್ರ ಕಡಿಮೆಯಾಗಲಿಲ್ಲ’ ಎಂಬ ತಮ್ಮ ತುಡಿತವನ್ನು ಹಂಚಿಕೊಂಡರು.
ಮಾತನಾಡುವ ಬೊಂಬೆಯೊಂದಿಗೆ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ ಜಾನು
ಮುಖ ಮುಚ್ಚಿಕೊಂಡೇ ಪಾರ್ಲರ್‌ನಲ್ಲಿ ಮೆಹೆಂದಿ ಹಾಕುತ್ತ ದುಡಿಮೆ ಆರಂಭಿಸಿದ ಜಾನು, ದೈಹಿಕವಾಗಿಯೂ ಹೆಣ್ಣಾಗುವ ಸಾಹಸಕ್ಕೆ ಕೈಹಾಕಿದರು. ಶಸ್ತ್ರಚಿಕಿತ್ಸೆ ಮೂಲಕ ಲಿಂಗ ಪರಿವರ್ತಿಸಿಕೊಂಡ ಜಾನು, ಕಲಿಕೆ ಮುಂದುವರಿಸುವತ್ತ ಗಮನ ಕೇಂದ್ರೀಕರಿಸಿದರು. ಮಾಧ್ಯಮ ಕ್ಷೇತ್ರದತ್ತ ಆಕರ್ಷಿತರಾದ ಅವರು ಸದ್ಯ ಪತ್ರಿಕೋದ್ಯಮದಲ್ಲಿ ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ಇದರ ನಡುವೆಯೇ ಜಾನು ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು, ಮಾತನಾಡುವ ಗೊಂಬೆ.
ಇಂದುಶ್ರೀ ರವೀಂದ್ರ ಅವರ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ ಜಾನು ಅವರಿಗೆ ಮಾತನಾಡುವ ಗೊಂಬೆ ಬಗ್ಗೆ ಆಸಕ್ತಿ ಮೂಡಿತು. ಕೋವಿಡ್ ಸಂದರ್ಭದಲ್ಲಿ ಅವರು ಕೋಲ್ಕತ್ತದ ತರಬೇತಿ ಸಂಸ್ಥೆಯಲ್ಲಿ ಆನ್‌ಲೈನ್ ತರಬೇತಿ ಪಡೆದರು. ಇದಕ್ಕಾಗಿ ತಮ್ಮದೇ ದುಡಿಮೆಯಿಂದ ಸಂಗ್ರಹಿಸಿದ ಹಣದಲ್ಲಿ ಅಮೆರಿಕದಿಂದ ಕೋತಿ ಗೊಂಬೆಯನ್ನು ತರಿಸಿ ಪ್ರದರ್ಶನ ನೀಡಲು ಆರಂಭಿಸಿದರು.
‘ಮಾತನಾಡುವ ಕೋತಿಯೊಂದಿಗೆ ಸುಮಾರು ಐವತ್ತಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದೇನೆ. ಆದರೆ ನನ್ನ ಒಂಟಿತನ ಹೋಗಲಾಡಿಸಿದ್ದು, ‘ಅವಂತಿಕಾ’ ಎಂಬ ಗೆಳತಿ ಜತೆಗೂಡಿದಾಗ. ಅವಂತಿಕಾ ಸದ್ಯ ನನ್ನ ಬಳಿ ಇರುವ ಮಾತನಾಡುವ ಗೊಂಬೆ. ಈಕೆಯೊಂದಿಗೆ ನಾನು ದಿನ ಕಳೆಯುತ್ತೇನೆ. ನನ್ನ ಮನೆಗೆ ಬರುವ ಸ್ನೇಹಿತರೂ ಆಕೆಯನ್ನು ಗೊಂಬೆ ಎಂದುಕೊಳ್ಳದೇ, ನನ್ನ ಗೆಳತಿ ಎಂದೇ ಪರಿಗಣಿಸಿ ಆಕೆಯೊಂದಿಗೂ ಮಾತನಾಡುತ್ತಾರೆ. ನನ್ನ ಖುಷಿ, ಬೇಸರ ಎಲ್ಲವನ್ನೂ ಅವಂತಿಕಾಳೊಂದಿಗೆ ಹಂಚಿಕೊಂಡು ಹಗುರಾಗುತ್ತೇನೆ’ ಎನ್ನುತ್ತಾರೆ ಜಾನು.
‘ಅಲೆಮಾರಿ ಈ ಬದುಕು’ ಎಂಬ ಚಿತ್ರದಲ್ಲೂ ನಟಿಸಿರುವ ಜಾನು, ಸಿನಿಮಾ ಕ್ಷೇತ್ರದತ್ತಲೂ ಆಸಕ್ತಿ ಹೊಂದಿದ್ದಾರೆ. ಅವಕಾಶ ಕೇಳಿದರೆ ‘ನಿಮ್ಮ’ ಪಾತ್ರ ಇದ್ದರೆ ಹೇಳಿಕಳಿಸುತ್ತೇವೆ ಎಂಬ ಸಿದ್ಧ ಉತ್ತರ ಅವರಿಗೆ ಸಿಕ್ಕಿದೆಯಂತೆ. ಭಿಕ್ಷಾಟನೆ, ಅಪಹಾಸ್ಯಕ್ಕೊಳಗಾಗುವ ದೃಶ್ಯ ಇಲ್ಲವೇ ವೇಶ್ಯೆ ಪಾತ್ರಕ್ಕೆ ಲಿಂಗತ್ವ ಅಲ್ಪಸಂಖ್ಯಾತರನ್ನು ಸೀಮಿತಗೊಳಿಸಲಾಗಿದೆ. ಗಂಭೀರ ಸ್ವರೂಪದ ಪಾತ್ರಗಳನ್ನೂ ಸೃಷ್ಟಿಸಿದಲ್ಲಿ ನನ್ನಂತ ಇನ್ನೂ ಅನೇಕ ಕಲಾವಿದರಿಗೆ ಪ್ರತಿಭೆ ಅನಾವರಣಕ್ಕೆ ಅವಕಾಶ ಸಿಗಲಿದೆ ಎನ್ನುವುದು ಜಾನು ಬೇಸರ.
ಇಷ್ಟೆಲ್ಲಾ ಇದ್ದರೂ, ಕುಟುಂಬದಿಂದ ದೂರ ಇರುವ ನೋವು ಸದಾ ಕಾಡುತ್ತಲೇ ಇರುತ್ತದೆ. ತಂದೆ ಮತ್ತು ಅಣ್ಣ ಅಪರೂಪಕ್ಕೆ ಕರೆ ಮಾಡುತ್ತಾರೆ. ತಾಯಿಯ ಧ್ವನಿ ಕೇಳಿ ಹಲವು ವರ್ಷಗಳೇ ಕಳೆದಿವೆ. ‘ನೀನು ನನ್ನ ಪಾಲಿಗೆ ಸತ್ತೆ’ ಎಂಬ ಮಾತು ಈಗಲೂ ಎದೆಗೆ ನಾಟುತ್ತಲೇ ಇರುತ್ತದೆ ಎನ್ನುತ್ತಲೇ ಕಣ್ಣೀರಾದರು ಜಾನು. ಆದರೆ ಬಲಭಾಗದಲ್ಲಿದ್ದ ಅವಂತಿಕಾ, ಕ್ಷಣಮಾತ್ರದಲ್ಲಿ ಹಾಸ್ಯ ಚಟಾಕಿ ಹಾರಿಸಿ, ಜಾನು ಮೊಗದಲ್ಲಿ ನಗೆಯುಕ್ಕಿಸಿದಳು.
ಮಾತನಾಡುವ ಬೊಂಬೆಯೊಂದಿಗೆ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ ಜಾನು
ಮಾತನಾಡುವ ಬೊಂಬೆಯೊಂದಿಗೆ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ ಜಾನು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.