
ಮಕ್ಕಳಾದ ಆದ್ಯವೀರ್ ಮತ್ತು ಯುಗಾಧ್ಯಕ್ಷ ಅವರೊಂದಿಗೆ ತ್ರಿಷಿಕಾ ಕುಮಾರಿ
ಮನೆಯಲ್ಲಿ ಹೆಣ್ಣುಮಕ್ಕಳು ಸ್ವಲ್ಪ ಸೋಮಾರಿತನ ತೋರಿದರೂ ‘ನೀನೇನು ಮಹಾರಾಣಿನಾ, ಏನೂ ಮಾಡದೆ ಸುಮ್ನೇ ಕೂತಿರಕ್ಕೆ’ ಅನ್ನುವ ಮಾತಿನ ಚಾಟಿಯೇಟು ಹಿರಿಯರಿಂದ ಆಗಾಗ್ಗೆ ಬೀಳುತ್ತಲೇ ಇರುತ್ತದೆ. ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಇಂತಹ ಮಾತಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಕ್ರಿಯಾಶೀಲರಾಗಿದ್ದಾರೆ ಮೈಸೂರು ರಾಜವಂಶಸ್ಥ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಧರ್ಮಪತ್ನಿ ತ್ರಿಷಿಕಾ ಕುಮಾರಿ ಒಡೆಯರ್. ಕುಟುಂಬದ ಕೆಲವು ಉದ್ದಿಮೆಗಳಲ್ಲಿ ತೊಡಗಿಕೊಂಡಿರುವುದರ ನಡುವೆಯೂ ಒಬ್ಬ ತಾಯಿಯಾಗಿ ಇಬ್ಬರು ಪುಟ್ಟ ಮಕ್ಕಳ ಪಾಲನೆಯ ಹೊಣೆಯನ್ನು ನಿರ್ವಹಿಸುತ್ತಿದ್ದಾರೆ. ಮಕ್ಕಳ ದಿನಾಚರಣೆಯ ಈ ಹೊತ್ತಿನಲ್ಲಿ, ಆಳರಸರ ಹಂಗಿಲ್ಲದ ‘ತಾಯ್ತನ’ದ ಅವರ ಅಭಿವ್ಯಕ್ತಿ ‘ಭೂಮಿಕಾ’ ಜೊತೆಗಿನ ವಿಶೇಷ ಸಂದರ್ಶನದಲ್ಲಿ.
ನೀವು ಒಬ್ಬ ತಾಯಿ, ಜೊತೆಗೆ ಕುಟುಂಬದ ಉದ್ದಿಮೆಯಲ್ಲೂ ತೊಡಗಿಕೊಂಡಿದ್ದೀರಿ. ಉದ್ದಿಮೆಗೆ ಸಂಬಂಧಿಸಿದ ಕೆಲಸ ಕಾರ್ಯಗಳ ನಡುವೆ ಮಕ್ಕಳನ್ನು ಬೆಳೆಸಲು ಹೇಗೆ ಸಮಯ ಹೊಂದಿಸಿಕೊಳ್ಳುವಿರಿ?
ಯಾವುದೇ ಮಹಿಳೆಗೆ ತಾಯಿಯಾಗುವುದು ಬದುಕಿನ ಅತ್ಯಂತ ಪ್ರಮುಖ ಸವಾಲುಗಳಲ್ಲಿ ಒಂದಾಗಿರುತ್ತದೆ. ಜೊತೆಗೆ, ಇದು ಬಹಳ ಶ್ರೇಷ್ಠವಾದ ಆಶೀರ್ವಾದವೂ ಹೌದು. ತಾಯಿಯಾಗುವುದು ಊಹಿಸಿಕೊಳ್ಳಲೂ ಆಗದ ರೀತಿಯಲ್ಲಿ ಮಹಿಳೆಗೆ ಒಂದೇ ಸಮಯದಲ್ಲಿ ಬಹು ಕಾರ್ಯಗಳನ್ನು ನಿರ್ವಹಿಸಬಲ್ಲ ಪಾಠವನ್ನು ಕಲಿಸುತ್ತದೆ. ತಾಯ್ತನವು ನನ್ನನ್ನು ಮೊದಲಿಗಿಂತಲೂ ಹೆಚ್ಚು ಗಟ್ಟಿಯಾಗಿಸಿದೆ ಮತ್ತು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದೆ.
ಪ್ರತಿದಿನ ಮುಂಜಾನೆ ಬೇಗನೇ ಏಳುತ್ತೇನೆ ಮತ್ತು ಮಾಡಬೇಕಾದ ಕೆಲಸಗಳ ಪಟ್ಟಿ ಸಿದ್ಧಪಡಿಸಿಕೊಳ್ಳುತ್ತೇನೆ. ಹೀಗೆ ಮಾಡುವುದರಿಂದ
ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಹಾಗೂ ಇಡೀ ದಿನದ ಕೆಲಸಗಳ ಬಗ್ಗೆ ಗಮನ ಹರಿಸಿ ದೃಢಸಂಕಲ್ಪದಿಂದ ತೊಡಗಿಕೊಳ್ಳಲು ನನಗೆ ಸಾಧ್ಯವಾಗುತ್ತದೆ.
ನಿಮ್ಮ ಮಕ್ಕಳ ಪಾಲನೆ ಮತ್ತು ನಿಮ್ಮ ಉದ್ದಿಮೆ ಬಯಸುವ ಹೊಣೆಗಾರಿಕೆಯ ನಡುವೆ ಹೇಗೆ ಸಮತೋಲನ ಸಾಧಿಸುತ್ತೀರಿ?
ಆ ಸಮತೋಲನದ ಪ್ರಜ್ಞೆಯು ನನ್ನಲ್ಲಿ ಒಡಮೂಡಿರುವುದರ ಹಿಂದೆ ನನ್ನ ಪತಿ ಇದ್ದಾರೆ. ಅದಕ್ಕಾಗಿ ಅವರಿಗೆ ನಾನು ಕೃತಜ್ಞಳಾಗಿದ್ದೇನೆ. ಮಕ್ಕಳ ಬೇಕು-ಬೇಡಗಳ ಬಗ್ಗೆ ಅವರು ನಿರೀಕ್ಷೆಗಿಂತಲೂ ಹೆಚ್ಚು ಗಮನ ನೀಡುತ್ತಾರೆ. ಈ ಕಾರಣದಿಂದ, ನಾನು ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ, ನನಗೆ ತುಂಬಾ ಬೆಂಬಲವಾಗಿರುವ ನನ್ನ ಕುಟುಂಬ ಮತ್ತು ಪರಿವಾರದವರ ಬಗ್ಗೆಯೂ ಇದೇ ಭಾವನೆ ನನ್ನಲ್ಲಿದೆ.
ಇಷ್ಟೊಂದು ಬಲವಾಗಿ ನನ್ನನ್ನು ಬೆಂಬಲಿಸುವ ಬಳಗವನ್ನು ಹೊಂದಿರುವುದು ನನ್ನ ಅದೃಷ್ಟವೇ ಸರಿ. ಸ್ವಲ್ಪವೇ ಸಹಾಯ ಅಥವಾ ಯಾವ ಸಹಾಯವೂ ಇಲ್ಲದೆ ಬದುಕಿನ ಜವಾಬ್ದಾರಿಗಳನ್ನೆಲ್ಲಾ ನಿರ್ವಹಿಸುತ್ತಿರುವ ಎಲ್ಲ ತಾಯಂದಿರ ಬಗ್ಗೆ ನನಗೆ ಅಪಾರವಾದ ಮೆಚ್ಚುಗೆ ಇದೆ.
ಮನೆಯವರು ಮತ್ತು ಸಹಾಯಕರು ನೆರವಿಗೆ ಇದ್ದರೂ ಸ್ವತಃ ಮಕ್ಕಳನ್ನು ನೋಡಿಕೊಳ್ಳುವ ಸ್ವಾಭಾವಿಕ ತುಡಿತ ಎಲ್ಲ ತಾಯಂದಿರಿಗೂ ಇದ್ದೇ ಇರುತ್ತದೆ. ನಿಮ್ಮ ದಿನಚರಿಯಲ್ಲಿ ಈ ಕಾರ್ಯಕ್ಕಾಗಿ ಹೇಗೆ ಸಮಯ ಹೊಂದಿಸಿಕೊಳ್ಳುವಿರಿ?
ನನ್ನ ಮಕ್ಕಳನ್ನು ಶ್ರೇಷ್ಠರಾದ ನಮ್ಮ ಪೂರ್ವಿಕರು ನಡೆದ ಹಾದಿಯಲ್ಲಿ ನಡೆಯುವಂತೆ ಮಾಡುವುದು ನನ್ನ ಬಹುದೊಡ್ಡ ಜವಾಬ್ದಾರಿಯಾಗಿದೆ. ಅಂದರೆ, ಅವರಲ್ಲಿ ಸೇವಾಪ್ರಜ್ಞೆ, ಪ್ರಾಮಾಣಿಕತೆ ಹಾಗೂ ನಮ್ಮ ಕುಟುಂಬದ ಉನ್ನತ ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಮಾಡಬೇಕು ಎಂಬುದು ನನ್ನ ಹಂಬಲ. ನನ್ನ ಮಟ್ಟಿಗೆ ಇದು ನನ್ನ ಬದುಕಿನ ಅತ್ಯಂತ ಮಹತ್ವದ ಉದ್ದೇಶ ಹಾಗೂ ಅತಿ ದೊಡ್ಡ ಕರ್ತವ್ಯ. ನನ್ನ ಮಕ್ಕಳು ನನ್ನ ಪ್ರಪ್ರಥಮ ಆದ್ಯತೆ ಎಂಬುದರಲ್ಲಿ ಎರಡನೇ ಮಾತೇ ಇಲ್ಲ.
ಮಕ್ಕಳ ಪಾಲನೆಯ ವಿಷಯಕ್ಕೆ ಬಂದಾಗ ಸ್ವತಃ ನಾನೇ ಅದನ್ನು ನಿರ್ವಹಿಸುವುದರಲ್ಲಿ ಸಂಪೂರ್ಣ ಭಾಗಿಯಾಗುತ್ತೇನೆ. ಮಕ್ಕಳು ಆಟವಾಡುವಾಗ ಅಥವಾ ಮನೆಯ ಹೊರಗಿನ ಅವರ ಚಟುವಟಿಕೆಗಳಲ್ಲಿ ಸಹಾಯ ಮಾಡಲು ನಮ್ಮಲ್ಲಿ ಸಿಬ್ಬಂದಿ ಇದ್ದಾರೆ. ಆದರೆ, ಅವರ ಸ್ನಾನ, ಓದು–ಬರಹದಿಂದ ಹಿಡಿದು ಪ್ರತಿದಿನದ ಆಗುಹೋಗು ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಖುದ್ದು ನಿಗಾ ವಹಿಸುತ್ತೇನೆ. ಅವು ನನಗೆ ನಿಜವಾಗಿಯೂ ಅತ್ಯಮೂಲ್ಯ ಕ್ಷಣಗಳು.
ಅಪ್ಪ– ಅಮ್ಮನ ಜೊತೆ ಪುಟಾಣಿ ಆದ್ಯವೀರ್
ವೃತ್ತಿಗೆ ಸಂಬಂಧಿಸಿದಂತೆ ಮನೆಯಿಂದ ದೂರ ಹೋದಾಗ ನಿಮ್ಮ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಅಂತಹ ಸಮಯದಲ್ಲಿ ಯಾರನ್ನು ಹೆಚ್ಚಾಗಿ ಅವಲಂಬಿಸುತ್ತೀರಿ?
ನನ್ನ ಅತ್ತೆಯವರಾದ ಮಹಾರಾಣಿ ಡಾ. ಪ್ರಮೋದಾ ದೇವಿ ಒಡೆಯರ್ ತಮ್ಮ ಒತ್ತಡದ ಕೆಲಸಗಳ ನಡುವೆಯೂ ಮಕ್ಕಳಿಗಾಗಿ ಬಹಳಷ್ಟು ಸಮಯವನ್ನು ಮೀಸಲಿಡುತ್ತಾರೆ. ಅವರು ಮೊಮ್ಮಕ್ಕಳ ಪ್ರೀತಿಪಾತ್ರ ಅಜ್ಜಿ. ನನ್ನ ಮಕ್ಕಳಿಗೂ ಅವರೆಂದರೆ ತುಂಬಾ ಇಷ್ಟ. ಹಿರಿಯ ಮಗ ಆದ್ಯವೀರ್‌ಗಂತೂ ಅವರೊಂದಿಗೆ ಊಟ ಮಾಡುವುದು, ಹರಟೆ ಹೊಡೆಯುವುದು, ವಿಜ್ಞಾನದ ಪ್ರಯೋಗಗಳನ್ನು ಮಾಡುವುದು ಮತ್ತು ಇತರ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದೆಂದರೆ ಬಲು ಇಷ್ಟ. ಅವರಿಬ್ಬರ ಅನುಬಂಧ ವಿಶೇಷ ಎನ್ನಿಸುತ್ತದೆ. ಅತ್ತೆಯು ತಮ್ಮ ಅತ್ಯಾಪ್ತ ಪ್ರೀತಿ, ತಾಳ್ಮೆ ಮತ್ತು ಹಾಸ್ಯಪ್ರಜ್ಞೆಯ ಮೂಲಕ ಮಕ್ಕಳಲ್ಲಿ ಗಟ್ಟಿಯಾದ ಮೌಲ್ಯಗಳನ್ನು ಬೇರೂರಿಸಲು ಗಮನ ನೀಡುತ್ತಾರೆ.
ನಾನು ಹೆಚ್ಚು ಸಮಯ ದೂರ ಇರಬೇಕಾಗಿ ಬಂದಾಗ, ನನ್ನ ಪ್ರೀತಿಯ ತಾಯಿ ಮಹಿಶ್ರೀ ಸಿಂಗ್ ಅವರೇ ನನ್ನ ಮಕ್ಕಳ ಪಾಲಿಗೆ ಅಮ್ಮನಾಗುತ್ತಾರೆ. ನನ್ನ ಮಕ್ಕಳು ಅವರೊಂದಿಗೆ ಇದ್ದಾಗ ನಾನು ಪೂರ್ತಿ ನೆಮ್ಮದಿಯಿಂದ ಇರುತ್ತೇನೆ. ಬೇರೆ ಯಾರೂ, ಅಷ್ಟೇ ಏಕೆ, ನಾನು ಕೂಡಾ ಅವರಂತೆ ನೋಡಿಕೊಳ್ಳಲು ಸಾಧ್ಯವೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಅವರು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಾರೆ. ನಿಜಕ್ಕೂ ಅಂತಹ ತಾಯಿಯನ್ನು ಪಡೆದಿರುವುದು ನನ್ನ ಸೌಭಾಗ್ಯವೇ ಸರಿ.
ಅಪ್ಪ– ಅಮ್ಮನ ಜೊತೆ ಪುಟಾಣಿ ಆದ್ಯವೀರ್
ನಾನು ಪ್ರೀತಿಯಿಂದ ಮಮ್ಮ ಎಂದೇ ಕರೆಯುವ, ಯದುವೀರ್ ಅವರ ಹೆತ್ತ ತಾಯಿಯವರಾದ ಲೀಲಾ ತ್ರಿಪುರಸುಂದರಿ ದೇವಿಯವರೂ ಅದ್ಭುತವಾದ ಅಜ್ಜಿಯೇ ಆಗಿದ್ದಾರೆ. ಆಟಿಕೆಗಳು ಮತ್ತು ಪುಸ್ತಕಗಳಿಂದ ಮಕ್ಕಳನ್ನು ರಂಜಿಸುವುದರಲ್ಲಿ ಅವರು ನಿಷ್ಣಾತರು. ನನ್ನ ಆಂಟಿ ದಿವ್ಯಾ ಅರಸ್ ಮಕ್ಕಳನ್ನು ಶಾಲೆಗೆ ಬಿಡುವುದು, ಶಾಲೆಯಿಂದ ಕರೆತರುವುದು ಹಾಗೂ ಹೋಮ್‌ವರ್ಕ್ ಮಾಡಿಸುವುದರಲ್ಲಿ ಸದಾ ನೆರವಿಗೆ ಇರುತ್ತಾರೆ. ಮಕ್ಕಳನ್ನು ಬೆಳೆಸುವುದು ಬರೀ ಒಬ್ಬ ವ್ಯಕ್ತಿಯ ಹೊಣೆಗಾರಿಕೆಯಲ್ಲ, ಅದು ಪರಿವಾರದ ಸಾಮೂಹಿಕ ಶ್ರಮವಾಗಿರುತ್ತದೆ.
ಮಕ್ಕಳೊಂದಿಗೆ ನೀವು ಬಯಸಿದಷ್ಟು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂಬುದೇನಾದರೂ ಆಗಾಗ್ಗೆ ಕಾಡುವುದುಂಟೇ?
ಇತರ ಎಲ್ಲ ತಾಯಂದಿರಂತೆ ಪ್ರತಿದಿನವೂ ನನ್ನ ಮಕ್ಕಳಿಗೆ ಕೈಲಾದಮಟ್ಟಿಗೆ ಅತ್ಯುತ್ತಮವಾದುದನ್ನು ಮಾಡಬೇಕೆಂದು ನಾನು ಬಯಸುತ್ತೇನೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗದೇ ಹೋಗಬಹುದು. ಹೌದು, ಅಂತಹ ಸಮಯದಲ್ಲಿ, ಇನ್ನಷ್ಟು ಉತ್ತಮ
ವಾದುದನ್ನು ಮಾಡಬೇಕು ಎಂಬ ನಿರಂತರವಾದ ಬಯಕೆಯೇ ತಾಯ್ತನದ ಮಹತ್ವವನ್ನು ಹೆಚ್ಚಿಸುತ್ತದೆ ಎಂಬುದನ್ನು ಅನುಭವದಿಂದ ಮನವರಿಕೆ ಮಾಡಿಕೊಂಡಿದ್ದೇನೆ.
ಒಬ್ಬ ತಾಯಿಯು ತಾನು ಏನಾಗಿರುವಳೋ ಅದಕ್ಕೆ, ಪ್ರತಿಕ್ಷಣವೂ ತನ್ನ ಮಕ್ಕಳಿಗಾಗಿ ಶ್ರಮಿಸುವ, ಹೊಸತನ್ನು ಕಲಿಯುವ ಹಾಗೂ ಆ ಕಾರ್ಯಗಳಲ್ಲಿ ತನ್ನನ್ನು ನಿಸ್ವಾರ್ಥದಿಂದ ತೊಡಗಿಸಿಕೊಳ್ಳ ಬಯಸುವ ಅವಳೊಳಗಿನ ಆ ತುಡಿತವೇ ಕಾರಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.