ADVERTISEMENT

ಗುಂಗುರು ಕೂದಲಿಗೆ ಪೈನಾಪಲ್‌ ಕೇಶ ವಿನ್ಯಾಸ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 19:30 IST
Last Updated 29 ನವೆಂಬರ್ 2019, 19:30 IST
ಪೈನಾಪಲ್‌ ಕೇಶ ವಿನ್ಯಾಸ
ಪೈನಾಪಲ್‌ ಕೇಶ ವಿನ್ಯಾಸ   

ನೀವು ಗುಂಗುರು ಕೂದಲಿನ ಒಡತಿಯೇ? ಅದು ಉಂಗುರ ಉಂಗುರವಾಗಿ ಸುತ್ತಿಕೊಂಡು ಕೂದಲಿನ ನಿರ್ವಹಣೆ ಕಷ್ಟವಾಗುತ್ತಿದೆಯೇ? ಯಾವ ಕೇಶ ಶೈಲಿ ಮಾಡಿದರೂ ಹೊಂದಿಕೊಳ್ಳುತ್ತಿಲ್ಲ ಎಂಬ ಬೇಸರವೇ? ಹಾಗಾದರೆ ‘ಪೈನಾಪಲ್‌ ಕೇಶ ವಿನ್ಯಾಸ’ದ ರೂಪದಲ್ಲಿದೆ ಪರಿಹಾರ. ಸಿಕ್ಕುಸಿಕ್ಕಾಗಿ ಕಿರಿಕಿರಿ ಉಂಟು ಮಾಡುವ ಗುಂಗುರು ಕೂದಲಿಗೆ ಆಧುನಿಕ ಶೈಲಿಯ ಮೆರಗು ನೀಡಿ ಮೆರೆಯಬಹುದು.

ಇದಕ್ಕೆ ಹಿಂದಿನ ದಿನವೇ ಒಂದಿಷ್ಟು ಆರೈಕೆ ಮಾಡಬೇಕಾಗುತ್ತದೆ. ಚೆನ್ನಾಗಿ ಕೂದಲು ಬಾಚಿ ಅದಕ್ಕೆ ಒಂದಿಷ್ಟು ಲೀವ್‌ ಆನ್‌ ಸೊಲ್ಯೂಷನ್‌ ಸವರಿಕೊಳ್ಳಿ. ಬೇರೆ ಬೇರೆ ಬ್ರ್ಯಾಂಡ್‌ನಲ್ಲಿ ಇದು ಲಭ್ಯ. ಸೊಲ್ಯೂಷನ್‌ ಬಹು ಬೇಗ ಆರಿ ಹೋಗುತ್ತದೆ.

ಎಲ್ಲಾ ಕೂದಲನ್ನು ನೆತ್ತಿಯ ಮೇಲಕ್ಕೆತ್ತಿ ಒಂದು ಬಟ್ಟೆಯ ಬ್ಯಾಂಡ್‌ನಿಂದ ಸಡಿಲವಾಗಿ ಕಟ್ಟಿ. ಇದು ಗುಂಗುರು ಕೂದಲಿಗೆ ಯಾವುದೇ ರೀತಿಯ ಧಕ್ಕೆ ಮಾಡದಂತೆ ಕಾಪಾಡುತ್ತದೆ. ಕೂದಲು ಸಿಕ್ಕಾಗದಂತೆ ಎಚ್ಚರಿಕೆ ವಹಿಸಿ. ಮೃದುವಾದ ಬಟ್ಟೆಯ ಕವರ್‌ ಇರುವ ದಿಂಬಿನ ಮೇಲೆ ತಲೆಯಿಟ್ಟು ಮಲಗಿದರೆ ಸಿಕ್ಕಾಗುವುದಿಲ್ಲ.

ADVERTISEMENT

ಮರುದಿನ ಬ್ಯಾಂಡ್‌ ತೆಗೆದು ಅಗಲ ಹಲ್ಲಿರುವ ಬಾಚಣಿಕೆಯಿಂದ ಮೃದುವಾಗಿ ಬಾಚಿ ಮೇಲಕ್ಕೆತ್ತಿ ಗಟ್ಟಿಯಾಗಿ ಬ್ಯಾಂಡ್‌ ಹಾಕಿ. ಗಿಡ್ಡ ಅಥವಾ ಮಧ್ಯಮ ಉದ್ದದ ಕೂದಲಾಗಿದ್ದರೆ ನೆತ್ತಿಯ ಮೇಲೇ ನಿಲ್ಲುತ್ತದೆ. ಉದ್ದವಾದ ಗುಂಗುರು ಕೂದಲನ್ನು ನೆತ್ತಿಯ ಮೇಲೆ ಬ್ಯಾಂಡ್‌ ಹಾಕಿದ ನಂತರ ಸರಿಯಾಗಿ ಇಬ್ಭಾಗ ಮಾಡಿ. ಒಂದೊಂದೇ ಭಾಗವನ್ನು ಸಡಿಲವಾಗಿ ಗಂಟಿ(ಬನ್‌) ನ ರೀತಿಯಲ್ಲಿ ಸುತ್ತಿ ಪಿನ್‌ ಹಾಕಿ. ಗಂಟು ಹಾಕುವಾಗ ಮುಂಭಾಗದ ಒಂದೆರಡು ಕೂದಲಿನ ಎಳೆಗಳನ್ನು ಹಾಗೆಯೇ ಬಿಡಿ. ಇದು ಹಣೆಯ ಮೇಲೆ ಸುರುಳಿಯಾಗಿ ಅಂದವನ್ನು ಹೆಚ್ಚಿಸುತ್ತದೆ.

ಕೂದಲಿಗೆ ಬ್ಯಾಂಡ್‌ ಬದಲು ಬಟ್ಟೆಯ ಸ್ಕಾರ್ಫ್‌ ಸುತ್ತಿದರೆ ಇನ್ನಷ್ಟು ಚೆನ್ನಾಗಿ ಕಾಣುತ್ತದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.