ADVERTISEMENT

ಧಾರಾವಾಹಿ ಪ್ರೇರಣೆಯಿಂದ RPF ಸೇರಿ, ಸಾವಿರಾರು ಮಕ್ಕಳ ರಕ್ಷಿಸಿದ ಚಂದನಾ ಸಿನ್ಹಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
   

2022ರಲ್ಲಿ, ನವದೆಹಲಿಯ ರೈಲು ನಿಲ್ದಾಣಕ್ಕೆ ಸಮೀಪ ಗಿಜಿಗುಡುತ್ತಿದ್ದ ಪ್ರದೇಶವೊಂದರ ಛತ್‌ ಪೂಜೆಯ ಗೌಜಿಯಲ್ಲಿ ಮಹಿಳೆಯೊಬ್ಬರು ಮಗುವಿನೊಂದಿಗೆ ತಪ್ಪಿಸಿಕೊಳ್ಳುತ್ತಾರೆ. ಅವರನ್ನು ಹುಡುಕುವ ಹೊಣೆ ಆರ್‌ಪಿಎಫ್‌ (ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌) ಅಧಿಕಾರಿ ಚಂದನಾ ಸಿನ್ಹಾ ಅವರ ಹೆಗಲೇರುತ್ತದೆ. ಛಲ ಬಿಡದ ತ್ರಿವಿಕ್ರಮನಂತೆ ಗಂಟೆಗಟ್ಟಲೆ ಆ ಜನದಟ್ಟಣೆಯ ಪ್ರದೇಶವನ್ನು ಜಾಲಾಡಿದ ಚಂದನಾ ಅವರಿಗೆ, ಕೊನೆಗೂ ರೈಲು ನಿಲ್ದಾಣದ ಯಾವುದೋ ಮೂಲೆಯಲ್ಲಿ ದಿಕ್ಕೆಟ್ಟು ಕುಳಿತಿದ್ದ ಆ ತಾಯಿ– ಮಗು ಕಾಣಸಿಗುತ್ತಾರೆ.

ಅದಾದ ಬಳಿಕ, ಉತ್ತರಪ್ರದೇಶದಲ್ಲಿ ರೈಲುಗಳ ಮೂಲಕ ಮಕ್ಕಳ ಕಳ್ಳಸಾಗಣೆಯನ್ನು ಪತ್ತೆ ಹಚ್ಚುವ ಭಾರತೀಯ ರೈಲ್ವೆಯ ‘ಆಪರೇಷನ್‌ ನನ್ಹೆ ಫರಿಷ್ತೆ’ ತಂಡಕ್ಕೆ ಚಂದನಾ ಅವರನ್ನು ನಿಯೋಜಿಸಲಾಗುತ್ತದೆ. ಅಲ್ಲಿ ಹೊಸದೊಂದು ಪಾತಕ ಲೋಕವೇ ಅವರೆದುರು ತೆರೆದುಕೊಳ್ಳುತ್ತದೆ. ಎಲ್ಲಿಂದಲೋ ತಪ್ಪಿಸಿಕೊಂಡು ಬರುವ, ಅನಾಥರಾಗಿ ಅಂಡಲೆಯುವ, ದುಷ್ಟರ ಆಮಿಷಕ್ಕೆ ಮರುಳಾಗಿ ಮನೆ ಬಿಟ್ಟು ಓಡಿ ಬರುವ ಒಂದೊಂದು ಮಗುವಿನಲ್ಲೂ ತಾಯಿ–ಮಗುವಿನ ಆ ಅಸಹಾಯಕ ನೋಟವನ್ನೇ ಕಾಣುವ ಚಂದನಾ, ಅಂತಹವರ ರಕ್ಷಣೆಗೆ ಪಣ ತೊಡುತ್ತಾರೆ. ಈ ಮೂರು ವರ್ಷಗಳಲ್ಲಿ ಸುಮಾರು ಒಂದೂವರೆ ಸಾವಿರ ಮಕ್ಕಳನ್ನು ಅವರು ರಕ್ಷಿಸಿದ್ದಾರೆ.

ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಚಾಣಾಕ್ಷತನದಿಂದ ಮಕ್ಕಳನ್ನು ಕರೆದೊಯ್ಯುವ ಕಿರಾತಕರ ಪತ್ತೆಗೆ ಎನ್‌ಜಿಒಗಳ ಸಹಯೋಗದಲ್ಲಿ ವಿಶೇಷ ತಂಡವನ್ನೇ ಚಂದನಾ ಸಜ್ಜುಗೊಳಿಸಿದ್ದಾರೆ. ಅಸಲಿಗೆ ಯಾವ ತಪಾಸಣೆಯನ್ನೂ ನಡೆಸದ ಈ ತಂಡದ ಸದಸ್ಯರು, ಪ್ರಯಾಣಿಕರಂತೆ ಸಂಚರಿಸುತ್ತಾರೆ. ಆದರೆ, ಮಕ್ಕಳ ಕಣ್ಣಿನಲ್ಲಿನ ಭಯ, ಅಸಹಾಯಕತೆ, ಅಪರಿಚಿತರೊಟ್ಟಿಗೆ ಕುಳಿತ ಭಂಗಿ, ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ. ಅನುಮಾನ ಬಂದ ಕೂಡಲೇ ಕಾರ್ಯಾಚರಣೆಗೆ ಇಳಿಯುತ್ತಾರೆ. ಹೀಗೆ ಕೊನೇ ಕ್ಷಣದಲ್ಲಿ ದುಷ್ಟರಿಂದ ಪಾರಾದ ಎಷ್ಟೋ ಮಕ್ಕಳು ಮರಳಿ ಅಪ್ಪ– ಅಮ್ಮನ ಮಡಿಲು ಸೇರಿದ್ದಾರೆ, ಹದಿಹರೆಯದ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯ ಜಾಲಕ್ಕೆ ಸಿಲುಕುವುದರಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದಾರೆ.

ADVERTISEMENT

ಚಂದನಾ ಅವರ ಈ ವಿಶಿಷ್ಟ ಕಾರ್ಯವನ್ನು ಗುರುತಿಸಿರುವ ರೈಲ್ವೆ ಇಲಾಖೆಯು ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ‘ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ’ವನ್ನು ನೀಡಿ ಗೌರವಿಸಿದೆ.

41 ವರ್ಷದ ಚಂದನಾ 11 ವರ್ಷದ ಹೆಣ್ಣುಮಗುವಿನ ತಾಯಿ. ಅಂದಹಾಗೆ, ಆರ್‌ಪಿಎಫ್‌ ಸೇರಲು ತಮಗೆ ಪ್ರೇರಣೆಯಾಗಿದ್ದು, ಬಾಲ್ಯದಲ್ಲಿದ್ದಾಗ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ, ಐಪಿಎಸ್‌ ಅಧಿಕಾರಿ ಕಂಚನ್‌ ಚೌಧರಿ ಅವರ ಜೀವನವನ್ನು ಆಧರಿಸಿದ ಧಾರಾವಾಹಿ ‘ಉಡಾನ್‌’ ಎಂದು ಚಂದನಾ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.