ADVERTISEMENT

ಭೂಮಿಕ | ಮಾವ ಮಾವ ದೂರ ನಿಲ್ಲು!

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 23:30 IST
Last Updated 30 ಜನವರಿ 2026, 23:30 IST
<div class="paragraphs"><p>ಮಾವ ಮಾವ ದೂರ ನಿಲ್ಲು!</p></div>

ಮಾವ ಮಾವ ದೂರ ನಿಲ್ಲು!

   

ಅತಿ ಹತ್ತಿರದ ರಕ್ತಸಂಬಂಧಿಗಳಿಗೆ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವುದು ನಮ್ಮಲ್ಲಿ ಸಾಮಾನ್ಯವಾದ ಸಂಗತಿ. ಆದರೆ ಇದು ಇಂತಹ ದಂಪತಿಗೆ ಹುಟ್ಟುವ ಮಕ್ಕಳ ಮೂಲಕ ಆನುವಂಶೀಯ ಕಾಯಿಲೆಗಳ ಮುಂದುವರಿಕೆಗೆ ದಾರಿ ಮಾಡುತ್ತದೆ, ಇದರಿಂದ ಭವಿಷ್ಯದ  ಪೀಳಿಗೆಗಳು ದುರ್ಬಲಗೊಳ್ಳುತ್ತವೆ; ಹೀಗಾಗಿ, ಇಂತಹ ಮದುವೆ ಸಲ್ಲದು ಎನ್ನುತ್ತವೆ ವೈಜ್ಞಾನಿಕ ದೃಷ್ಟಿಕೋನವನ್ನು ಆಧರಿಸಿದ ಆಳವಾದ ಸಂಶೋಧನೆಗಳು...

ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ, ಲಾಭದಾಯಕವಾದ ಸಾಮಾಜಿಕ ಮತ್ತು ಆರ್ಥಿಕ ಕಟ್ಟುಪಾಡುಗಳನ್ನು ವಿಧಿಸಿಕೊಳ್ಳುತ್ತಾನೆ. ಬಳಿಕ, ಅವು ತಂದೊಡ್ಡುವ ಸಂಕೋಲೆಗಳಲ್ಲಿ ಸಿಲುಕಿ ನರಳುತ್ತಾನೆ. ಇಂತಹ ಸಾಮಾಜಿಕ ಸಂಕೋಲೆಗಳಲ್ಲಿ ಸ್ವಗೋತ್ರ ವಿವಾಹ ಅಥವಾ ರಕ್ತಸಂಬಂಧಿಗಳ ನಡುವಿನ ವಿವಾಹವೂ ಒಂದು.

ADVERTISEMENT

ಮುಂದುವರಿದ ವರ್ಗಗಳು ಸ್ವಗೋತ್ರ ವಿವಾಹವನ್ನು ನಿರ್ಬಂಧಿಸಿವೆ. ಪುರಾಣಗಳಲ್ಲೂ ಇಂತಹ ವಿವಾಹಕ್ಕೆ ನಿರ್ಬಂಧ ಇದೆ. ಆದರೆ ಹಿಂದುಳಿದ ವರ್ಗದವರು ರಕ್ತಸಂಬಂಧಿಗಳ ನಡುವಿನ ವಿವಾಹವನ್ನು ಇಂದಿನವರೆಗೂ ನಡೆಸುತ್ತಲೇ ಬಂದಿದ್ದಾರೆ. ಇಂತಹ ವಿವಾಹವನ್ನು ಯಾಕೆ ನಿರ್ಬಂಧಿಸಬೇಕಾಗುತ್ತದೆ ಎಂಬುದರ ಹಿಂದಿನ ವೈಜ್ಞಾನಿಕ ಕಾರಣಗಳು ಹೆಚ್ಚಿನವರಿಗೆ ತಿಳಿದಿಲ್ಲ.

ಬಹುತೇಕರು ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ರಕ್ತಸಂಬಂಧದ ವಿವಾಹಕ್ಕೆ ಒತ್ತು ನೀಡುತ್ತಾರೆ. ಉದಾಹರಣೆಗೆ, ಉತ್ತಮ ಸ್ಥಿತಿಯಲ್ಲಿರುವ ಸಹೋದರನಿಗೆ ಅಥವಾ ಆತನ ಮಗನಿಗೆ ಅಕ್ಕ ಅಥವಾ ತಂಗಿಯು ತಮ್ಮ ಮಗಳನ್ನು ಮದುವೆ ಮಾಡುವುದು ಅಥವಾ ತವರಿನ ಮೇಲಿನ ಮಮಕಾರದಿಂದ ಅಂತಹದ್ದೊಂದು ವೈವಾಹಿಕ ಸಂಬಂಧ ಬೆಳೆಸಲು ಇಚ್ಛಿಸುವುದು ಸಾಮಾನ್ಯ. ಹಾಗೆಯೇ ಕೆಲವರು ತಮ್ಮ ಶ್ರೀಮಂತಿಕೆ, ಪ್ರತಿಷ್ಠೆ ಕಾಪಾಡಿಕೊಳ್ಳಲು ರಕ್ತಸಂಬಂಧದ ವಿವಾಹಕ್ಕೆ ಆದ್ಯತೆ ನೀಡುತ್ತಾರೆ. ರಾಜಮನೆತನದವರು ತಮ್ಮ ಕ್ಷತ್ರಿಯ ರಕ್ತವು ಅಮೂಲ್ಯವಾದುದೆಂದು ತಿಳಿದು, ಅದು ಬೇರೆ ಯಾವ ವರ್ಗದ ಜನರೊಂದಿಗೂ ಮಿಶ್ರವಾಗಬಾರದೆಂಬ ಕಾರಣಕ್ಕೆ ರಕ್ತಸಂಬಂಧಿಗಳಲ್ಲೇ ವಿವಾಹ ನೆರವೇರಿಸುತ್ತಾ ಬಂದಿದ್ದಾರೆ.

ಭಾರತದಲ್ಲಿ ಮುಖ್ಯವಾಗಿ ದಕ್ಷಿಣ ಭಾರತದ ಗ್ರಾಮೀಣ ಪ್ರದೇಶದಲ್ಲಿ ರಕ್ತಸಂಬಂಧಿಗಳ ನಡುವಿನ ವಿವಾಹ ಹೆಚ್ಚು. ಇದರಿಂದ ಭವಿಷ್ಯದ ಪೀಳಿಗೆಗಳಲ್ಲಿ ಆನುವಂಶೀಯ ಕಾಯಿಲೆಗಳ ಮಟ್ಟವು ಏರಿಕೆಯಾಗುತ್ತದೆ. ಪ್ರಸಕ್ತ ತಲೆಮಾರಿಗೆ ರಕ್ತಸಂಬಂಧದ ವಿವಾಹವನ್ನು ನಿರ್ಬಂಧಿಸಿದರೆ, ಮುಂದಿನ ತಲೆಮಾರುಗಳಲ್ಲಿ ಆ ಕುಟುಂಬದಲ್ಲಿರುವ ಆನುವಂಶೀಯ ಕಾಯಿಲೆಗಳು ಕಡಿಮೆಯಾಗುತ್ತಾ ಬರುತ್ತವೆ. ಜೊತೆಗೆ ಜನಜಾಗೃತಿ ಮೂಡಿಸುವುದರಿಂದಲೂ ಈ ಕಾಯಿಲೆಗಳ ಮುಂದುವರಿಕೆಯನ್ನು ತಡೆಗಟ್ಟಬಹುದು.

ರಕ್ತಸಂಬಂಧದ ವಿವಾಹಗಳಲ್ಲಿ ಮೂರು ಬಗೆ. ಮೊದಲನೆಯದು, ಒಡಹುಟ್ಟಿದವರ ನಡುವೆ ನಡೆಯುವ ವಿವಾಹ. ಈ ರೀತಿಯ ವಿವಾಹವು ನಾಗರಿಕ ಸಮಾಜದಲ್ಲಿ ಕಂಡುಬಾರದಿದ್ದರೂ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಇದನ್ನು ನಾವು ಮೊದಲನೇ ವರ್ಗದ ರಕ್ತಸಂಬಂಧ ಎನ್ನುತ್ತೇವೆ. ಎರಡನೇ ವರ್ಗದ ರಕ್ತಸಂಬಂಧವು ಮುಖ್ಯವಾಗಿ ಹಿಂದೂಗಳು ಮತ್ತು ಮುಸ್ಲಿಮರಲ್ಲಿ ಕಂಡುಬರುತ್ತದೆ. ಹಿಂದೂಗಳಲ್ಲಿ ಸೋದರಮಾವ, ಅಂದರೆ ತಾಯಿಯ ತಮ್ಮನೊಂದಿಗೆ ಅಥವಾ ಅಣ್ಣನ ಮಕ್ಕಳ ಜೊತೆಗಿನ ವಿವಾಹವು ಸಾಮಾನ್ಯವಾದರೆ, ಮುಸ್ಲಿಮರಲ್ಲಿ ತಂದೆಯ ಅಣ್ಣ ಅಥವಾ ತಮ್ಮನ ಮಕ್ಕಳೊಂದಿಗಿನ ವಿವಾಹವು ಸಾಮಾನ್ಯವಾಗಿರುತ್ತದೆ. ಮೂರನೇ ವರ್ಗದ ರಕ್ತಸಂಬಂಧವು ಒಂದೇ ವಂಶಸ್ಥರಾದರೂ ದೂರದ ಸಂಬಂಧಿಗಳ ನಡುವೆ ನಡೆಯುತ್ತದೆ. ಇವುಗಳಲ್ಲಿ ಮೊದಲ ಹಾಗೂ ಎರಡನೇ ವರ್ಗದ ವಿವಾಹವು ಅಪಾಯಕಾರಿಯಾದುದು.

ಮದುವೆ

ಸಾಮಾನ್ಯವಾಗಿ ರಕ್ತಸಂಬಂಧದ ವಿವಾಹದಿಂದ ಹುಟ್ಟುವ ಮಕ್ಕಳು ಬಲಹೀನರಾಗಿದ್ದು, ಬುದ್ಧಿಮಾಂದ್ಯರಾಗಿರುತ್ತಾರೆ. ಕೆಲವು ಮಕ್ಕಳಲ್ಲಿ ಕುರುಡುತನ, ಕಿವುಡುತನ ಸಾಮಾನ್ಯವಾಗಿರುತ್ತದೆ. ಈ ವಿವಾಹದಿಂದ ಬಂಜೆತನ, ಮರುಕಳಿಸುವ ಗರ್ಭಪಾತ, ನವಜಾತ ಶಿಶುಗಳ ಮರಣ ಮತ್ತು ಅಂಗವೈಕಲ್ಯದ ಪ್ರಮಾಣವೂ ಹೆಚ್ಚಾಗಿರುತ್ತದೆ.

ರಕ್ತಸಂಬಂಧದಲ್ಲಿ ಮದುವೆಯಾದ ಹೆಚ್ಚಿನವರ ಮಕ್ಕಳು ಮೇಲ್ನೋಟಕ್ಕೆ ಆರೋಗ್ಯವಂತರಾಗಿಯೇ ಕಾಣುತ್ತಾರೆ. ಇದನ್ನು ನೋಡಿ, ಹೀಗೆ ಮದುವೆಯಾಗುವುದರಿಂದ ಹುಟ್ಟುವ ಮಕ್ಕಳಿಗೆ ತೊಂದರೆಯಾಗುತ್ತದೆ ಎನ್ನುವುದೆಲ್ಲಾ ತಪ್ಪುಕಲ್ಪನೆ ಎಂದು ತಿಳಿಯುವವರೇ ಹೆಚ್ಚು. ಆದರೆ ರಕ್ತಸಂಬಂಧದಲ್ಲಿ ಮದುವೆ ಸಲ್ಲದು ಎನ್ನುವ ಬಲವಾದ ಪ್ರತಿಪಾದನೆಯ ಹಿಂದೆ ಇರುವ ವೈಜ್ಞಾನಿಕ ಕಾರಣಗಳನ್ನು ಅರಿಯುವುದು ಬಹಳ ಮುಖ್ಯ. ಹತ್ತಿರದ ಸಂಬಂಧದಲ್ಲಿ ಮದುವೆಯಾಗುವ ದಂಪತಿಯು ಸಾಮಾನ್ಯರಂತೆ ಆರೋಗ್ಯವಾಗಿಯೇ ಇರುತ್ತಾರೆ. ಆದರೆ ಅವರಲ್ಲಿ ಒಬ್ಬರು ಅಥವಾ ಕೆಲವೊಮ್ಮೆ ಇಬ್ಬರೂ ಆನುವಂಶೀಯ ಕಾಯಿಲೆಗಳ ವಾಹಕರಾಗಿರಬಹುದು. ಅಂತಹವರಿಗೆ ಹುಟ್ಟುವ ಮಕ್ಕಳಲ್ಲಿ ಶೇಕಡ 25ರಷ್ಟು ಮಕ್ಕಳಿಗೆ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಇದನ್ನು ನಾವು 3:1 ಎಂದು ಕರೆಯುತ್ತೇವೆ. ಅಂದರೆ, ಹುಟ್ಟುವ ನಾಲ್ವರು ಮಕ್ಕಳಲ್ಲಿ ಒಂದು ಮಗು ಸಂಪೂರ್ಣ ಆರೋಗ್ಯವಂತವಾಗಿ ಇರುತ್ತದೆ. ಇಬ್ಬರು ಮಕ್ಕಳು ಕಾಯಿಲೆಗಳ ವಾಹಕರಾಗಿರುತ್ತಾರೆ ಮತ್ತು ಒಂದು ಮಗುವಿಗೆ ಅನಾರೋಗ್ಯ ಇರುತ್ತದೆ. ಉದಾಹರಣೆಗೆ, ದಂಪತಿಯು ಒಂದೇ ಮಗು ಅಥವಾ ಇಬ್ಬರು ಮಕ್ಕಳನ್ನು ಮಾಡಿಕೊಂಡರೆ, ಈ ಮೇಲಿನ ಯಾವುದಾದರೂ ವಿಧದ ಮಗು ಅವರಿಗೆ ಜನಿಸಬಹುದು. ಹೀಗಾಗಿ, ಕೆಲವು ದಂಪತಿಗಳು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡುವ ಸಾಧ್ಯತೆ ಇರುತ್ತದೆ. ಆದರೆ ಆ ಮಗು ರೋಗವಾಹಕವಾಗಿದ್ದರೆ ಮುಂದಿನ ತಲೆಮಾರುಗಳಲ್ಲಿ ಆನುವಂಶೀಯ ಕಾಯಿಲೆಗಳು ಕಾಣಿಸಿಕೊಳ್ಳದೇ ಇರಲಾರವು.

ಹೀಗಾಗಿ, ರಕ್ತಸಂಬಂಧಿಗಳ ನಡುವಿನ ವಿವಾಹವನ್ನು ಉತ್ತೇಜಿಸುವುದು ಸರಿಯಲ್ಲ. ಈಗಾಗಲೇ ಕಾರಣಾಂತರಗಳಿಂದ ವಿವಾಹ ನಡೆದಿದ್ದರೆ, ಮಗುವನ್ನು ಪಡೆಯುವ ಸಂದರ್ಭ ಬಂದಾಗ ಅಂತಹ ದಂಪತಿ ತಜ್ಞ ವೈದ್ಯರಿಂದ ವಾಹಕ ಪರೀಕ್ಷೆಗೆ (carrier screening) ಒಳಗಾಗಬೇಕಾಗುತ್ತದೆ. ಆಗ, ಬೆಳೆಯುತ್ತಿರುವ ಭ್ರೂಣವು ಆರೋಗ್ಯವಾಗಿದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಒಂದುವೇಳೆ ಭ್ರೂಣದ ವರ್ಣತಂತುಗಳು ಹಾಗೂ ಡಿಎನ್‍ಎಯಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡ ಪಕ್ಷದಲ್ಲಿ ಆ ಭ್ರೂಣವನ್ನು ಉಳಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಇದರಿಂದ ಸುಲಭವಾಗುತ್ತದೆ. ಇದಕ್ಕಿಂತ ಸುರಕ್ಷಿತವಾದ ವಿಧಾನವೆಂದರೆ, ವಿವಾಹಕ್ಕೆ ಮೊದಲೇ ವಾಹಕ ಪರೀಕ್ಷೆಗೆ ಒಳಪಟ್ಟು, ತಾವು ಆರೋಗ್ಯವಂತ ಮಕ್ಕಳನ್ನು ಪಡೆಯುವ ಸಾಧ್ಯತೆ ಎಷ್ಟಿದೆ ಎಂಬುದನ್ನು ಅರಿಯುವುದು. ನಂತರ ಆ ವ್ಯಕ್ತಿಯೊಂದಿಗೆ ವಿವಾಹ ಆಗಬೇಕೇ ಬೇಡವೇ ಎಂದು ನಿರ್ಧರಿಸಬಹುದು.

ಒಟ್ಟಿನಲ್ಲಿ, ರಕ್ತಸಂಬಂಧಿಗಳ ನಡುವಿನ ವಿವಾಹವನ್ನು ವಿಶಾಲವಾದ ದೃಷ್ಟಿಕೋನದಿಂದ ನೋಡಿ, ಅಧಿಕೃತವಾಗಿಯೇ ನಿಷೇಧಿಸುವುದು ಒಳ್ಳೆಯದು. ಇದರಿಂದ ಆನುವಂಶೀಯ ಕಾಯಿಲೆಗಳನ್ನು ತಡೆಗಟ್ಟಿ ಸಮಾಜದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸಂಬಂಧ ‘ಕಾಯ್ದುಕೊಳ್ಳಬೇಡಿ’!

ರಕ್ತಸಂಬಂಧದಲ್ಲಿ ಮದುವೆಯಾಗುವ ದಂಪತಿಗಳಿಗೆ ಹುಟ್ಟುವ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಆನುವಂಶೀಯ ಕಾಯಿಲೆಗಳು ಸಮುದಾಯದಿಂದ ಸಮುದಾಯಕ್ಕೆ ಭಿನ್ನವಾಗಿದ್ದು, ಕುತೂಹಲ ಹುಟ್ಟಿಸುತ್ತವೆ.

ತಲಸ್ಸೇಮಿಯ ಕಾಯಿಲೆಯು ಸಿಂಧಿ, ಪಂಜಾಬಿ, ಗುಜರಾತಿ, ಬೆಂಗಾಲಿ ಮತ್ತು ಮಹಾರಾಷ್ಟ್ರದ ಜನರಲ್ಲಿ ಹೆಚ್ಚು. ಕುಡುಗೋಲು ಕಣ ರಕ್ತಹೀನತೆ (ಸಿಕಲ್‌ ಸೆಲ್‌ ಅನೀಮಿಯಾ) ಆದಿವಾಸಿ ಜನಾಂಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಜಿ6ಪಿ.ಡಿ. (ಗ್ಲೂಕೋಸ್‌– 6 ಫಾಸ್ಫೇಟ್‌ ಡಿಹೈಡ್ರೋಜಿನೇಸ್‌) ಕಿಣ್ವ ಕೊರತೆಯು ಪಾರ್ಸಿಗಳು, ಸಿಂಧಿ, ಪಂಜಾಬಿ ಮತ್ತು ಕೆಲವು ಆದಿವಾಸಿಗಳಲ್ಲಿ ಇರುತ್ತದೆ. ಬ್ಯುಟಿರಿಲ್‌ಕೋಲಿನೆಸ್ಟಿರೇಸ್‌ ಎನ್ನುವ ಕಿಣ್ವದ ಕೊರತೆಯು ದಕ್ಷಿಣ ಭಾರತದ ಕುಮಟಿ ಅಥವಾ ವೈಶ್ಯರುಗಳಲ್ಲಿ ಕಂಡುಬರುತ್ತದೆ.

ಇದರಿಂದಾಗಿ, ಶಸ್ತ್ರಚಿಕಿತ್ಸೆಗೆ ಕೊಡುವ ಅನಸ್ತೇಶಿಯಾದಿಂದ ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಹೆಚ್ಚು. ಹಾಗೆಯೇ ಸ್ತನಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್‌ ಪಾರ್ಸಿ ಜನಾಂಗದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಮೇಪಲ್‌ ಸಿರಪ್‌ ಯೂರಿನ್‌ ಕಾಯಿಲೆಯು ಕಾಶ್ಮೀರಿಗರು ಮತ್ತು ಕೆಲವು ಮುಸ್ಲಿಂ ಜನಾಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಹುಟ್ಟಿನಿಂದಲೇ ಬರುವ ಕಿವುಡುತನವು ದಕ್ಷಿಣ ಭಾರತದ, ಮುಖ್ಯವಾಗಿ ಕೇರಳ ರಾಜ್ಯದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಯಹೂದಿ ಜನಾಂಗವು ವಿಶ್ವದ ಬುದ್ಧಿವಂತ ಜನಾಂಗಗಳಲ್ಲಿ ಒಂದು ಎನಿಸಿಕೊಂಡಿದೆ. ಆದರೆ ಈ ಜನಾಂಗದಲ್ಲಿ ರಕ್ತಸಂಬಂಧಿಗಳ ನಡುವಿನ ವಿವಾಹವು ಸಾಮಾನ್ಯವಾಗಿದ್ದು, ಇವರಲ್ಲಿ ಹಲವಾರು ರೀತಿಯ ಆನುವಂಶೀಯ ಕಾಯಿಲೆಗಳು ಸರ್ವೇಸಾಮಾನ್ಯವಾಗಿವೆ. ಈ ಜನಾಂಗದಲ್ಲಿ ರೋಗವಾಹಕ ವರ್ಣತಂತುಗಳನ್ನು ಹೊಂದಿದವರ ಪ್ರಮಾಣ ಸರಿಸುಮಾರು 1:5 ಅನುಪಾತದಲ್ಲಿ ಇರುವುದರಿಂದ, ಇಂತಹ ಹೆಣ್ಣು ಮತ್ತು ಗಂಡಿಗೆ ಹುಟ್ಟುವ ಮಕ್ಕಳು ನಾನಾ ರೀತಿಯ ಕಾಯಿಲೆಗಳಿಂದ ಬಳಲುತ್ತಾರೆ.

ಲೇಖಕಿ: ಮುಖ್ಯಸ್ಥೆ, ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.