
ಅದು ಅದ್ಧೂರಿಯಾಗಿ ಅಲಂಕೃತವಾದ ವೇದಿಕೆ. ಅದರ ಎದುರು ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ಬದುಕಿನ ಹೊಸ ದಾರಿಗೆ ಸಾಗಲು ಪದವಿ ಪಡೆಯುವ ಉತ್ಸಾಹದಲ್ಲಿ ಕುಳಿತ ನೂರಾರು ವಿದ್ಯಾರ್ಥಿಗಳು. ಅವರ ನಡುವೆ ತಲೆಯ ತುಂಬಾ ಬಿಳಿಕೊದಲು, ಸುಕ್ಕುಗಟ್ಟಿದ ಮುಖ, ದೊಡ್ಡ ಚೌಕಟ್ಟಿನ ಕನ್ನಡಕ ಹಾಕಿಕೊಂಡು ಕುಳಿತಿರುವ ಮಹಿಳೆ. ಯಾರೋ ವಿದ್ಯಾರ್ಥಿಯ ಅಮ್ಮನೋ, ಅಜ್ಜಿಯೋ ಆಗಿರಬೇಕು ಎಂಬುದು ಅಲ್ಲಿದ್ದವರ ಭಾವನೆ.
ಮಂಗಳವಾರ (ಜ.17) ಮಧ್ಯಪ್ರದೇಶದ ದೇವಿ ಅಹಲ್ಯಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿವಿಧ ಪದವಿ ಪಡೆದವರಿಗೆ ಪ್ರಮಾಣ ಪತ್ರ, ಪದಕ ವಿತರಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಯುವ ಮನಸ್ಸುಗಳು ಪದವಿ ಪಡೆದ ಖುಷಿಯಲ್ಲಿ ಪ್ರಮಾಣ ಪತ್ರ ಪಡೆದು ಹಿರಿ ಹಿರಿ ಹಿಗ್ಗುತ್ತಿದ್ದರು. ಇವೆಲ್ಲರ ಮಧ್ಯೆ ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿದವರು ‘ಸುಷ್ಮಾ ಮೋಘೆ’ ಎನ್ನುವ ಹೆಸರನ್ನು ಕೂಗಿದ್ದರು. ಆಗ ಅದೇ ವೃದ್ಧೆ ಎದ್ದು ವೇದಿಕೆಯತ್ತ ಸಾಗಿದ್ದರು. ಇದನ್ನು ಕಂಡು ಕುಳಿತದ್ದವರ ಕಣ್ಣುಗಳು ಅರಳಿದ್ದವು. ಪದವಿ ನೀಡಲು ಬಂದಿದ್ದ ರಾಜ್ಯಪಾಲರೇ ಒಂದು ಕ್ಷಣ ದಿಗ್ಬ್ರಮೆಗೊಂಡಿದ್ದರು. ಏಕೆಂದರೆ ಸುಷ್ಮಾ ಅವರು ಇಳಿ ವಯಸ್ಸಿನಲ್ಲಿ ಮರಾಠಿ ಸಾಹಿತ್ಯದಲ್ಲಿ ಎಂಎ ಪದವಿಯಲ್ಲಿ ಚಿನ್ನದ ಪದಕ ಗೆದ್ದು ಇಡೀ ವಿಶ್ವವಿದ್ಯಾಲಯಕ್ಕೇ ಅಗ್ರಸ್ಥಾನ ಪಡೆದುಕೊಂಡಿದ್ದರು.
78 ವರ್ಷದ ಸುಷ್ಮಾ ಅವರ ಸಾಧನೆ ಕಂಡು ನೆರೆದಿದ್ದವರು ಮೂಗಿನ ಮೇಲೆ ಬೆರಳಿಟ್ಟಿದ್ದರು. ಸುಷ್ಮಾ ಅವರಿಗೆ ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯಿ ಪಟೇಲ್ ಅವರು ಪದವಿ ನೀಡುತ್ತಿದ್ದಂತೆ ಇಡೀ ಪ್ರಾಂಗಣದಲ್ಲಿ ಚಪ್ಪಾಳೆ ಮೊಳಗಿತ್ತು.
ನಿವೃತ್ತಿಯ ನಂತರ ಆವರಿಸಿದ್ದ ಶೂನ್ಯತೆ ನಿವಾರಿಸಲು ಹೊಸ ಪ್ರಯಾಣ
ಸುಷ್ಮಾ 40 ವರ್ಷ ಶಿಕ್ಷಕಿಯಾಗಿದ್ದರು. ಛತ್ತೀಸಗಢದ ಚರ್ಮಿರಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಕ್ಕಳಿಗೆ ಪಾಠ ಮಾಡಿ ನಿವೃತ್ತಿಯಾಗಿದ್ದರು. 2000ರಲ್ಲಿ ನಿವೃತ್ತರಾದ ಬಳಿಕ ಇಂದೋರ್‌ಗೆ ಸ್ಥಳಾಂತರಗೊಂಡಿದ್ದರು. ನಿವೃತ್ತಿಯ ನಂತರ ಆರಾಮದಾಯಕ ಜೀವನವನ್ನು ಬಯಸುವವರ ನಡುವೆ, ಓದಿನ ಹುಚ್ಚು ಹಿಡಿಸಿಕೊಂಡಿದ್ದ ಸುಷ್ಮಾ ಅವರು ತಮ್ಮೊಳಗೆ ಆವರಿಸುವ ಶೂನ್ಯತೆಯಿಂದ ಹೊರಬರಬೇಕೆಂದು ನಿರ್ಧರಿಸಿದ್ದರು. ತಮ್ಮನ್ನು ಪೂರ್ತಿಗೊಳಿಸುವುದು ಪುಸ್ತಕಗಳೇ ಎಂದು ಓದುವುದು, ಬರೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದರು.
ಜಾಹೀರಾತು ನೀಡಿದ ತಿರುವು
ಸುಮಾರು ಮೂರು ವರ್ಷಗಳ ಹಿಂದೆ ಆನ್‌ಲೈನ್‌ನಲ್ಲಿ ಮರಾಠಿ ಎಂ.ಎ ಪದವಿ ಪ್ರವೇಶದ ಬಗ್ಗೆ ನೀಡಿದ್ದ ಜಾಹೀರಾತು ಸುಷ್ಮಾ ಅವರ ಕಣ್ಣಿಗೆ ಬಿದ್ದಿತ್ತು. ಅದನ್ನು ನೋಡಿ ಮರಾಠಿ ಎಂ.ಎ ಓದುವುದಕ್ಕೆ ನಿರ್ಧರಿಸಿದ್ದರು. 44 ವರ್ಷದ ತಮ್ಮ ಮಗಳ ನೆರವಿನಿಂದ ಕೋರ್ಸ್‌ಗೆ ಸೇರಿದ್ದರು.
ಆದರೆ ಬದಲಾದ ತಂತ್ರಜ್ಞಾನ, ಆನ್‌ಲೈನ್ ತರಗತಿಗಳು ಸುಷ್ಮಾ ಅವರಿಗೆ ಸವಾಲು ಒಡ್ಡಿದ್ದವು. ಆದರೂ ಛಲ ಬಿಡದೆ ಆನ್‌ಲೈನ್‌ನಲ್ಲಿ ಮತ್ತು ಭೌತಿಕವಾಗಿ ತರಗತಿಗೆ ತೆರಳಿ ಅಭ್ಯಾಸ ಮಾಡಿದ್ದರು. ಅದರ ಫಲವಾಗಿ ಪದವಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.
ಸದ್ಯ ಸುಷ್ಮಾ ಅವರು ಕೆಲವು ಹಿಂದಿ ಲೇಖಕರ ಕೃತಿಗಳನ್ನು ಮರಾಠಿಗೆ ಅನುವಾದಿಸುತ್ತಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಸುಷ್ಮಾ ಅವರ ಮಗ, ಸೊಸೆ ಮತ್ತು ಮೊಮ್ಮಗ ಹಾಜರಾಗಿದ್ದರು ಎಂದು ‘ನ್ಯೂ ಪವರ್ ಗೇಮ್’ ಎನ್ನುವ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.
ಜ್ಞಾನಾರ್ಜನೆಗೆ ವಯಸ್ಸು ಎಂದಿಗೂ ಅಡ್ಡಿಯಲ್ಲ ಎನ್ನುವುದನ್ನು ಸುಷ್ಮಾ ಅವರು ಸಾಬೀತುಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.ಡಾ.ರಾಕೇಶ್ ಸಿಂಘೈ, ದೇವಿ ಅಹಲ್ಯಾ ವಿಶ್ವವಿದ್ಯಾಲಯದ ಉಪಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.