ADVERTISEMENT

ವಿದೇಶಿ ಪ್ರವಾಸಿಗರಿಗೆ ಅಕ್ಕರೆಯ ಆತಿಥ್ಯ ನೀಡುವ ಮೈಸೂರಿನ ಶಶಿಕಲಾ ಅಶೋಕ್‌

ಸುಮಾ ಬಿ.
Published 20 ಡಿಸೆಂಬರ್ 2025, 0:19 IST
Last Updated 20 ಡಿಸೆಂಬರ್ 2025, 0:19 IST
   
ವಿದೇಶಿ ಪ್ರವಾಸಿಗರಿಗೆ ನಮ್ಮ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿದರಷ್ಟೇ ಸಾಕೆ? ಬದುಕಿನ ಬನಿಯ ಅರಸಿ ಬರುವ ಯಾತ್ರಿಕರಿಗೆ, ಪ್ರವಾಸೋದ್ಯಮದ ಪರಿಕಲ್ಪನೆಯ ಆಚೆಗೂ ಮೀರಿದ ಆತ್ಮೀಯತೆಯ ನಂಟನ್ನು ಉಣಬಡಿಸುವ ಜರೂರೂ ಇದೆಯಲ್ಲವೇ? ಅಂತಹದ್ದೊಂದು ಕಾಯಕದಲ್ಲಿ ನಿರತರಾಗಿದ್ದಾರೆ ಮೈಸೂರಿನ ಶಶಿಕಲಾ ಅಶೋಕ್‌. ವಿದೇಶಿ ಅತಿಥಿಗಳಿಗೆ ಆತಿಥ್ಯವನ್ನಷ್ಟೇ ಅಲ್ಲ ಭಾರತೀಯ ಸಂಸ್ಕೃತಿಯ ಸೊಬಗನ್ನೂ ಪರಿಚಯಿಸುವ ವಿಶೇಷ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾರೆ.

‘ಐ ಆ್ಯಮ್‌ ನಾಟ್‌ ಟೇಕಿಂಗ್‌ ಎನಿತಿಂಗ್‌ ಫ್ರಂ ಯುವರ್‌ ಹೋಮ್‌. ಐ ಆ್ಯಮ್‌ ಟೇಕಿಂಗ್‌ ಒನ್‌ ತಿಂಗ್‌, ದಟ್‌ ಈಸ್‌ ಸ್ಯಾಟಿಸ್‌ಫ್ಯಾಕ್ಷನ್‌’.

–ಇಂಗ್ಲೆಂಡ್‌ನಿಂದ ಬಂದಿದ್ದ ವೈದ್ಯ ಪ್ರವಾಸಿಗರೊಬ್ಬರು ಮೈಸೂರಿನ ಶಶಿಕಲಾ ಅವರ ಮನೆಯ ಊಟ ಸವಿದು ಹೇಳಿದ ಮಾತಿದು.

ಹೌದು, ಇಂತಹ ‘ಸಂತೃಪ್ತಿ’ಯನ್ನು 15 ವರ್ಷಗಳಿಂದ ವಿದೇಶಿ ಪ್ರವಾಸಿಗರಿಗೆ ಉಣಬಡಿಸುತ್ತಿದ್ದಾರೆ ಶಶಿಕಲಾ ಅಶೋಕ್‌. ‘ಸಂತೃಪ್ತಿಯನ್ನು ಉಣಬಡಿಸುವುದೇ?’ ಎಂದು ಹುಬ್ಬು ಗಂಟಿಕ್ಕಬೇಡಿ. ವಿದೇಶಿ ಪ್ರವಾಸಿಗರಿಗೆ ಅಕ್ಕರೆಯ ಆತಿಥ್ಯ ನೀಡುತ್ತಿರುವ ಶಶಿಕಲಾ ಅವರು ಭಾರತೀಯ ಆಹಾರ ಪದ್ಧತಿ, ಸಂಸ್ಕೃತಿ, ಆಚಾರ– ವಿಚಾರಗಳನ್ನು ಸದ್ದಿಲ್ಲದೇ ಅವರ ಮನಕ್ಕೆ ದಾಟಿಸುತ್ತಿದ್ದಾರೆ. ಆ ಮೂಲಕ ಪ್ರವಾಸಿಗರಿಗೆ ಸಂತೃಪ್ತ ಭಾವ ನೀಡುತ್ತಿದ್ದಾರೆ.

ADVERTISEMENT

ಈ ಕಾರ್ಯಕ್ಕೆ, ಒಂಟಿಕೊಪ್ಪಲಿನಲ್ಲಿರುವ, ಅರ್ಧ ಶತಮಾನದಷ್ಟು ಹಳೆಯದಾದ ಅವರ ಮನೆಯೇ ಕಾರ್ಯಾಲಯ. ಮೈಸೂರು ಸುತ್ತಮುತ್ತಲಿನ ವಿವಿಧ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಂಡು ಈ ಮನೆಗೆ ಭೇಟಿ ನೀಡುವ ವಿದೇಶಿಯರಿಗೆ ಭಾರತೀಯ ಸಂಸ್ಕೃತಿಯ ದರ್ಶನ ಇಲ್ಲಿ ಲಭ್ಯವಾಗುತ್ತದೆ. ಅನತಿ ದೂರದಿಂದಲೇ ಬ್ಯಾಂಡು, ಭಜಂತ್ರಿಯೊಂದಿಗೆ, ಪ್ರತಿಯೊಬ್ಬರಿಗೂ ಹೂವಿನ ಹಾರ ಹಾಕಿ, ತಿಲಕವಿಟ್ಟು ಮನೆಗೆ ಸ್ವಾಗತವೀಯುವ ಅವರ ಕ್ರಮಕ್ಕೆ ವಿದೇಶಿಯರು ಪುಳಕಗೊಳ್ಳುತ್ತಾರೆ.

ನಮಸ್ತೆ, ಹೇಗಿದ್ದೀರಿ?– ಸೀರೆಯುಟ್ಟು ಸಂಭ್ರಮಿಸುತ್ತಿರುವ ವಿದೇಶಿ ಮಹಿಳೆಯರು

ಪ್ರತಿಯೊಬ್ಬರಿಗೂ ಬಾಳೆಎಲೆಯಲ್ಲೇ ಊಟ, ಬಳಿಕ ಮೈಸೂರು ವೀಳ್ಯದೆಲೆಯ ತಾಂಬೂಲ. ಲಘು ಸಂಗೀತ, ಭರತನಾಟ್ಯ ಪ್ರದರ್ಶನ ಈ ವೇಳೆ ಜೊತೆಯಾಗುತ್ತವೆ. ಮಹಿಳೆಯರಿಗೆ ಸೀರೆ ಉಡಿಸುವುದು, ಜಡೆ ಹಾಕಿ ಮಲ್ಲಿಗೆ ಹೂವು ಮುಡಿಸುವುದು, ಮೆಹೆಂದಿ ಬಿಡಿಸುವುದು, ಬೀಳ್ಕೊಡುವಾಗ ಅರಸಿನ, ಕುಂಕುಮವಿಟ್ಟು ಬಾಗಿನ ಕೊಡುವುದು, ಪುರುಷರಿಗೆ ಪಂಚೆ, ಶಲ್ಯ, ಮೈಸೂರು ಪೇಟ ತೊಡಿಸಿ ಬೀಗುವುದು... ಹೀಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಕಾಯಕ ಇಲ್ಲಿ ನಿರಂತರ. ಇನ್ನು ಸಾಕಷ್ಟು ಬಿಡುವು ಮಾಡಿಕೊಂಡು ಬರುವ ಪ್ರವಾಸಿಗರಿಗೆ ಅಳಗುಳಿ ಮನೆ, ಪಗಡೆ ಆಟದ ಪರಿಚಯವನ್ನೂ ಮಾಡಿಸಿದ್ದಾರೆ ಶಶಿಕಲಾ.

ಕರ್ನಾಟಕದ ಇತರ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಾಗ ಹೋಟೆಲ್‌ನಲ್ಲಿ ಊಟ ಮಾಡುವ ಪ್ರವಾಸಿಗರು, ಮೈಸೂರಿನಲ್ಲಿ ಶಶಿಕಲಾ ಅವರ ಮನೆಯ ಆತಿಥ್ಯ ಕಂಡು ಬೆರಗಾಗುತ್ತಾರೆ. ಭಾರತೀಯ ಮನೆಗಳ ಊಟ, ಸಂಸ್ಕೃತಿಯ ಒಟ್ಟಂದದ ಕಲ್ಪನೆಯು ವಿದೇಶಿಯರ ಮನದಲ್ಲಿ ಮೂಡುತ್ತದೆ.

ಈ ರೀತಿಯ ಭಿನ್ನ ಹಾದಿಯಲ್ಲಿ ನಡೆಯುತ್ತ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಶಶಿಕಲಾ ಅವರಿಗೆ ವಿದೇಶಿಯರಿಗೆ ಉಣಬಡಿಸುವ ಅವಕಾಶ ಒದಗಿಬಂದದ್ದು ಆಕಸ್ಮಿಕವಾಗಿ. ಶಶಿಕಲಾ ಅವರ ಪತಿ ಅಶೋಕ್‌ ವಿದೇಶಿ ಪ್ರವಾಸ ಸಂಘಟಕರು. ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ಪ್ರವಾಸಿತಾಣಗಳ ವೀಕ್ಷಣೆಗೆ ಸಿದ್ಧತೆ ಮಾಡಿಕೊಡುತ್ತಾರೆ.

ಹೀಗೆ 2009ರಲ್ಲಿ ಮೈಸೂರಿಗೆ ಬಂದಿದ್ದ ಜರ್ಮನಿಯ ಎರಡು ಕುಟುಂಬಗಳು, ಭಾರತೀಯ ಸಾಂಪ್ರದಾಯಿಕ ಶೈಲಿಯ ಊಟ ಸವಿಯುವ ಇಂಗಿತ ವ್ಯಕ್ತಪಡಿಸಿದವು. ಆಗ ಮಧ್ಯಾಹ್ನದ ಊಟದ ಸಮಯ ಮೀರಿದ್ದರಿಂದ ಅವರನ್ನು ಅಶೋಕ್‌ ಹೋಟೆಲಿಗೆ ಬದಲಾಗಿ ತಮ್ಮ ಮನೆಗೇ ಕರೆತಂದರು. ಊಟ ಮಾಡಿದ ಬಳಿಕ ಆ ಅನಿರೀಕ್ಷಿತ ಅತಿಥಿಗಳಲ್ಲಿ ಕಂಡುಬಂದ ತೃಪ್ತಿ, ಸಂತಸ ಶಶಿಕಲಾ ಅವರಲ್ಲಿ ಪ್ರವಾಸಿಗರ ಆತಿಥ್ಯದ ಪರಿಕಲ್ಪನೆ ಒಡಮೂಡಿಸಿತು. ಅಂದಿನಿಂದ ಅವರು ವಿದೇಶಿಯರಿಗೆ ಅಪ್ಪಟ ದೇಸಿ ಊಟ ಉಣಬಡಿಸುವುದನ್ನೇ ಕಾಯಕವನ್ನಾಗಿಸಿಕೊಂಡರು.

ರಾಜ್ಯದಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಮೈಸೂರು ಮುಂಚೂಣಿಯಲ್ಲಿದೆ. ಸಾಮಾನ್ಯವಾಗಿ ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ನಿರಂತರವಾಗಿ ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರದಲ್ಲಿ ಮೂರ್ನಾಲ್ಕು ದಿನ ಶಶಿಕಲಾ ಅವರ ಮನೆಯಲ್ಲಿ ವಿದೇಶಿ ಅತಿಥಿಗಳು ಇದ್ದೇ ಇರುತ್ತಾರೆ. ಇಬ್ಬರಿಂದ ಹಿಡಿದು 25ರಿಂದ 30 ಪ್ರವಾಸಿಗರು ಒಮ್ಮೆಲೇ ಬರುತ್ತಾರೆ. ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸಂದರ್ಭದಲ್ಲಿ ಒಂದಿಬ್ಬರು ಅಡುಗೆ ಸಹಾಯಕರನ್ನು ಜೊತೆಯಲ್ಲಿಟ್ಟುಕೊಳ್ಳುತ್ತಾರೆ. ಖಾದ್ಯ ತಯಾರಿಯೆಲ್ಲ ಶಶಿಕಲಾ ಅವರದ್ದೇ.

‘ನಾನು ತಯಾರಿಸುವ ಅಡುಗೆಯ ರುಚಿ ಸ್ವಲ್ಪ ವ್ಯತ್ಯಾಸವಾದರೂ ಭಾರತಕ್ಕೆ ಕೆಟ್ಟ ಹೆಸರು. ವಿದೇಶಿಯರು ತಮ್ಮ ಊರುಗಳಿಗೆ ತೆರಳಿದಾಗ ನನ್ನ ಹೆಸರನ್ನೇನೂ ಹೇಳುವುದಿಲ್ಲ; ಬದಲಾಗಿ ಭಾರತದ ಹೆಸರನ್ನು ಹೇಳುತ್ತಾರೆ. ಹೀಗಾಗಿ, ದೇಶದ ಪ್ರತಿನಿಧಿಯಾಗಿ ಅವರಿಗೆ ಆತಿಥ್ಯ ನೀಡುತ್ತೇನೆ. ಆ ಪ್ರಜ್ಞೆ ಯಾವಾಗಲೂ ನನ್ನಲ್ಲಿ ಜಾಗೃತವಾಗೇ ಇರುತ್ತದೆ. ನಾವು ಅಕ್ಕರೆ, ಆತಿಥ್ಯ ತೋರಿದರೆ ಅವರಲ್ಲೂ ಆ ಭಾವ ಸ್ಫುರಿಸುತ್ತದೆ. ಮನುಷ್ಯ ಏನೇ ಕೊಟ್ಟರೂ ‘ಬೇಕು ಬೇಕು’ ಎನ್ನುತ್ತಾನೆ. ‘ಸಾಕು’ ಎನ್ನುವುದು ಊಟದಲ್ಲಿ ಮಾತ್ರ. ನಮ್ಮ ಮನೆಯಲ್ಲಿ ಊಟ ಮಾಡುವವರು ಸಂತೃಪ್ತಿಯಿಂದ ಹಿಂದಿರುಗಬೇಕು ಎಂಬುದೇ ನನ್ನ ಆಸ್ಥೆ’ ಎನ್ನುತ್ತಾರೆ ಶಶಿಕಲಾ.

ಈವರೆಗೆ, ಅಮೆರಿಕದ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಡೇವಿಡ್‌ ಜೆ. ಗ್ರಾಸ್‌ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳ ಪ್ರವಾಸಿಗರು ಶಶಿಕಲಾ ಅವರ ಆತಿಥ್ಯ ಪಡೆದಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಮೈಸೂರಿನ ಚೇಂಬರ್‌ ಆಫ್‌ ಕಾಮರ್ಸ್‌ನಲ್ಲಿ ಸಹ ಕಾರ್ಯದರ್ಶಿಯಾಗಿರುವ ಶಶಿಕಲಾ, ಭಾರತೀಯ ಸಂಸ್ಕೃತಿ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತೇಜನಕಾರಿ ಉಪನ್ಯಾಸವನ್ನೂ ನೀಡುತ್ತಾರೆ.

ಹೀಗಿರುತ್ತದೆ ಊಟದ ಮೆನು

ಚಪಾತಿ, ತೊವ್ವೆ, ಚಿತ್ರಾನ್ನ ಅಥವಾ ಪುಳಿಯೋಗರೆ, ಎರಡು ಬಗೆಯ ಕೋಸಂಬರಿ, ಎರಡು ಬಗೆಯ ಸಿಹಿಖಾದ್ಯ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಬಾಳೆಹಣ್ಣು. ಬಹುತೇಕ ಪ್ರವಾಸಿಗರಿಗೆ ಮೈಸೂರುಪಾಕ್‌ನ ರುಚಿ ತೋರಿಸಿದ್ದಾರೆ. ಅಲ್ಲದೆ ಹಬ್ಬದ ಸಮಯಗಳಲ್ಲಿ ಬರುವ ಪ್ರವಾಸಿಗರಿಗೆ ಆಯಾ ಹಬ್ಬದ ಸಾಂಪ್ರದಾಯಿಕ ಅಡುಗೆಗಳನ್ನು ಸವಿಯುವ ಭಾಗ್ಯ ದೊರೆಯುತ್ತದೆ. ಹೋಳಿ, ದೀಪಾವಳಿ, ದಸರಾ ಹಬ್ಬಗಳನ್ನು ವಿದೇಶಿಯರೊಂದಿಗೆ ಆಚರಿಸಿದೆ ಶಶಿಕಲಾ ಅವರ ಕುಟುಂಬ.

ತಮ್ಮ ಅತಿಥಿಗಳೊಂದಿಗೆ ಒಡನಾಡಲು ಅನುವಾಗುವಂತೆ ಫ್ರೆಂಚ್‌, ಇಬು, ಜಮರ್ನ್‌ ಭಾಷೆಗಳನ್ನು ಶಶಿಕಲಾ ಕಲಿತಿದ್ದಾರೆ. ಇನ್ನು ಪ್ರವಾಸಿಗರಿಗೆ ಕನ್ನಡ ಹೇಳಿಕೊಡುವುದನ್ನು ಅವರು ಮರೆತಿಲ್ಲ.

‘ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಭಾರತವನ್ನು ಕೊಳ್ಳೆ ಹೊಡೆದರು’ ಎಂದು ಶಾಲಾ ದಿನಗಳಲ್ಲಿ ಓದಿದ ನೆನಪು. ಆ ದೇಶಗಳ ಪ್ರವಾಸಿಗರು ಈಗ ನಮ್ಮನೆ ಅತಿಥಿಗಳು. ಭಾರತೀಯರ ಹೃದಯವೈಶಾಲ್ಯವನ್ನು ಇದು ತೋರುತ್ತದೆ. ನಮ್ಮೊಂದಿಗೆ ಸ್ನೇಹದಿಂದಿದ್ದರೆ ಎಂತಹವರನ್ನೂ ಇಲ್ಲಿನ ಸಂಸ್ಕೃತಿ ಪೊರೆಯುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ’ ಎನ್ನುತ್ತಾ ಹೆಮ್ಮೆಯ ನಗೆ ಬೀರುತ್ತಾರೆ ಶಶಿಕಲಾ.

ಆ ಸಂಗ ಪೇಚಿನ ಪ್ರಸಂಗ

  • ಕೆಲ ವಿದೇಶಿಯರು ಊಟ ಮಾಡುವಾಗ ಚಪಾತಿ ಜೊತೆ ಬಡಿಸಿದ ದಾಲ್, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ– ಸಂಡಿಗೆ ಎಲ್ಲವನ್ನೂ ಸೇರಿಸಿ ರೋಲ್‌ ಮಾಡಿ ತಿನ್ನಲು ಶುರುಮಾಡುತ್ತಾರಂತೆ. ಆಗ ಅವರನ್ನು ತಡೆದು ಇಲ್ಲಿನ ಊಟದ ಕ್ರಮದ ಪಾಠ ಮಾಡಿದ್ದಾರೆ ಶಶಿಕಲಾ. ಬಹುತೇಕರಿಗೆ ಕೈತುತ್ತು ತಿನ್ನಿಸಿ ತಾಯಿಯ ಪ್ರೀತಿಯನ್ನೂ ತೋರಿದ್ದಾರೆ.

  • ಊಟವೆಲ್ಲ ಮುಗಿದ ಬಳಿಕ ‘ಈ ಬಾಳೆ ಎಲೆನೂ ತಿನ್ನಬೇಕಾ’ ಎಂದು ಕೇಳಿದವರುಂಟು. ಆಗ ನಗು ಉಮ್ಮಳಿಸಿದರೂ ನಯವಾಗೇ ಬಾಳೆ ಎಲೆಯ ಮಹತ್ವ, ಬಳಸುವ ರೀತಿವನ್ನು ವಿವರಿಸಿದ್ದಾರೆ.

  • ವಿದೇಶಿ ಮಹಿಳೆಯರಿಗೆ ಸೀರೆ ಉಡಿಸಿ, ಮಲ್ಲಿಗೆ ಹೂ ಮುಡಿಸಿದಾಗ ಶಶಿಕಲಾ ಅವರ ಮಾಂಗಲ್ಯದ ಮೇಲೆಯೂ ಕೆಲವರ ಕಣ್ಣು ಬೀಳುವುದುಂಟು! ‘ಈ ಸರ ಎಷ್ಟು ಚೆನ್ನಾಗಿದೆ. ಸ್ವಲ್ಪ ಕೊಡಿ ಫೋಟೊ ತೆಗೆಸಿಕೊಂಡು ವಾಪಸ್‌ ಕೊಡುವೆ’ ಎಂಬ ಬಯಕೆ ಹೊರಸೂಸಿದವರಿದ್ದಾರೆ. ಆಗ ಮಾಂಗಲ್ಯದ ಮಹತ್ವವನ್ನೂ ಮನದಟ್ಟು ಮಾಡಿಸಿದ್ದಾರೆ ಶಶಿಕಲಾ.

  • ಯುಕೆಯಿಂದ ಬಂದಿದ್ದ ನ್ಯಾಯಮೂರ್ತಿಯೊಬ್ಬರು ‘ಭಾರತದ ನ್ಯಾಯಾಲಯ‌ಗಳಲ್ಲಿ ಸಾಕ್ಷಿಗಳು ಪ್ರಮಾಣ ಮಾಡುವ ಭಗವದ್ಗೀತೆಯನ್ನು ನೋಡಬಹುದೇ’ ಎಂದು ಕೇಳಿದರಂತೆ. ಅವರಿಗೆ ಮನೆಯಲ್ಲಿದ್ದ ಭಗವದ್ಗೀತೆ ಪುಸ್ತಕವನ್ನೇ ಶಶಿಕಲಾ ಉಡುಗೊರೆಯಾಗಿ ನೀಡಿದ್ದಾರೆ.

ಮೈಸೂರಿನ ತಾಣಗಳನ್ನು ನೋಡಿ ಖುಷಿಯಾಯಿತು. ಬಾಳೆ ಎಲೆ ಮೇಲಿನ ಊಟ ವಿಸ್ಮಯ ಮೂಡಿಸಿತು. ಸೀರೆ ಮಲ್ಲಿಗೆ ಹೂವು ತೊಟ್ಟು ಪುಳಕಗೊಂಡಿರುವೆ. ಸೀರೆ ಉಡಬೇಕೆಂಬ ಆಸೆ ಕೈಗೂಡಿತು.
– ವಜೇನಿಯಾ, ಜರ್ಮನಿ
ಉದ್ದನೆಯ ಸೀರೆ ಕಂಡು ಅಚ್ಚರಿಗೊಂಡೆವು. ಅದನ್ನು ಉಟ್ಟುಕೊಳ್ಳುವ ವಿಧಾನ ಆಸಕ್ತಿದಾಯಕ.
– ಸು ಮತ್ತು ನಿಗೆಲ್‌ ದಂಪತಿ, ಇಂಗ್ಲೆಂಡ್‌

ನಾವೂ ಭಾರತೀಯರು ಭಾರತದಲ್ಲಿದ್ದಾಗ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.