ಈಗೀಗ ಮೊಬೈಲ್ ಹಿಡಿದು ದ್ವೀಪಗಳಂತೆ ಬದುಕುವುದು, ಆ ಬದುಕಿನಲ್ಲಿಯೇ ಎಲ್ಲ ತರಹದ ಖುಷಿ, ಸಂತೋಷ ಕಾಣುವುದು ಸಾಮಾನ್ಯವೆಂಬಂತಾಗಿದೆ. ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕಲೆತು, ಬೆರೆತಾಗಲೂ ಮೊಬೈಲ್ ಎಂಬ ಮಾಯಾವಿ ಆಗ್ಗಾಗ್ಗೆ ಮಿಣುಕಿ ತನ್ನ ಇರುವಿಕೆಯನ್ನು ತೋರ್ಪಡಿಸುತ್ತದೆ. ಎಂಥ ಜನಸಂದಣಿಯೇ ಇರಲಿ; ಕುಟುಂಬದ ಸಮಾರಂಭಗಳೇ ಆಗಲಿ, ‘ನನ್ನನ್ನು ನೋಡು’ ಎಂದು ಮೊಬೈಲ್ ಹೇಳುವಂತೆ, ನಾವು ಪದೇ ಪದೇ ಅದನ್ನೊಮ್ಮೆ ಮುಟ್ಟಿ, ಮಾತನಾಡಿಸಿ ಸಮಾಧಾನಗೊಂಡಂತೆ ಕಾಣುತ್ತೇವೆ.
ಸಂಬಂಧಗಳೆಲ್ಲ ಸಡಿಲವಾಯ್ತು, ಆ ಕಾಲ ಈಗಿಲ್ಲ. ಒಟ್ಟಾಗಿ ಕುಳಿತು, ಪಟ್ಟಾಗಿ ಆಡುತ್ತಿದ್ದ ಚನ್ನಮಣೆ, ಅಳುಗುಳಿ ಮನೆ, ಗುಡ್ನ, ಪಗಡೆಯಾಟ ಎಲ್ಲಿ ಮಾಯವಾದವು? ಎಂದು ಹಳೆಯದರ ಕುರಿತ ಹಳಹಳಿಕೆ ನಿಂತಿಲ್ಲ. ಮೊಬೈಲ್‌ನಲ್ಲಿ ‘ವರ್ಚುವಲ್ ಪಗಡೆ’ಯಾಟ ಇರುವ ಆ್ಯಪ್‌ಗಳೇನೋ ಸಿಗುತ್ತವೆ. ಆದರೆ, ಒಟ್ಟಾಗಿ ಕುಳಿತು, ಪಗಡೆ ಹಾಕಿ ಆಡುತ್ತಿದ್ದ ಪಗಡೆ ಹಾಸು ಎಲ್ಲಿ ಹೋದವು. ಇಂಥ ಪಾರಂಪರಿಕ ಆಟ ಹಾಗೂ ಅವುಗಳ ಪರಿಕರಗಳನ್ನು ಆಧುನೀಕರಣಕ್ಕೆ ಒಗ್ಗಿಸಿ, ಹೊಸ ವಿನ್ಯಾಸ ನೀಡಿದ್ದಾರೆ ಮೈಸೂರಿನ ತನುಶ್ರೀ ಎಸ್.ಎನ್.
ಹೊಸತನದ ಅಗತ್ಯಗಳನ್ನು ಮನಗಂಡು ತಾಪ್ಲಾ, ನವಕಂಕರಿ ( ಸಾಲು ಮನೆಯಾಟ, ಟಿಕ್ ಟ್ಯಾಕ್‌ನ ಆಧುನಿಕ ರೂಪ), ಚೌಕಾಬಾರ (ಐದು, ಏಳು, ಒಂಬತ್ತು, ಹನ್ನೊಂದು) ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಆಡುವ ವಿಭಿನ್ನ ಪಗಡೆಯಾಟಗಳು, ಹಾವು ಏಣಿಯಾಟ, ವಿಮಾನಂ, ತಾಂಜಾವೂರಂ ಕಟ್ಟಂ, ಶೊಲೋ ಗುಟ್ಟಿ ಹೀಗೆ ಇಪ್ಪತ್ತಕ್ಕೂ ಹೆಚ್ಚು ಆಟಗಳ ಮಾದರಿಯನ್ನು, ಅವುಗಳಿಗೆ ಬೇಕಾದ ಪರಿಕರಗಳನ್ನು ವಿನ್ಯಾಸಗೊಳಿಸಲಾಗಿದೆ.
ಈ ಪಾರಂಪರಿಕ ಒಳಾಂಗಣ ಆಟಗಳು ಮಿದುಳನ್ನು ಚುರುಕುಗೊಳಿಸುವ ಆಟಗಳೆಂದೇ ಪ್ರಸಿದ್ಧಿ ಪಡೆದುಕೊಂಡಿವೆ. ಮಗಳೊಮ್ಮೆ ದೇಗುಲದ ಹೊರಾಂಗಣದ ಕೆತ್ತನೆಯಲ್ಲಿ ಕಂಡ ‘ಗುಳಿ’ಯನ್ನು ಕಂಡು ಇದೇನು? ಎಂದು ಕೇಳಿದ್ದಳು. ಅಲ್ಲಿಂದ ಪ್ರೇರಣೆ ಪಡೆದು, ಬೇಲೂರು, ಹಳೆಬೀಡು, ಚಾಮುಂಡಿ ಬೆಟ್ಟ, ಬಳ್ಳಿಗಾವೆ, ಕುರುವತ್ತಿ ಹೀಗೆ ಯಾವುದೇ ದೇಗುಲಕ್ಕೆ ಭೇಟಿ ಕೊಟ್ಟರೂ ಅಲ್ಲಿನ ಕೆತ್ತನೆಯಲ್ಲಿದ್ದ ದೇಸಿ ಆಟಗಳ ಕಡೆಗೆ ಗಮನ ಹೋಗುತ್ತಿತ್ತು. ಪಾರಂಪರಿಕ ಆಟಗಳ ಬಗ್ಗೆ ಇದ್ದ ಕುತೂಹಲ, ಸಂಶೋಧನೆ ಹೆಚ್ಚಾಯಿತು. ಅದರ ಫಲವೇ ಪಾರಂಪರಿಕ ಆಟಗಳ ಹೊಸ ವಿನ್ಯಾಸದ ಉದ್ಯಮ ಎನ್ನುತ್ತಾರೆ ತನುಶ್ರೀ .
ಐದು ವರ್ಷಗಳಿಂದ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಹುದ್ದೆ ಬಿಟ್ಟು ಪತಿ ಶಶಿಶೇಖರ. ಎಸ್ ಅವರೊಂದಿಗೆ ಈ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಪರಿಕರಗಳೆಲ್ಲವೂ ಪರಿಸರಸ್ನೇಹಿಯಾಗಿದ್ದು, ತಲೆಮಾರಿನಿಂದ ತಲೆಮಾರಿಗೆ ಬಳುವಳಿಯಾಗಿ ಕೊಡುವಷ್ಟು ಬಾಳಿಕೆ ಬರುತ್ತದೆ ಎನ್ನುವ ಖಚಿತತೆ ಅವರದ್ದು. ವೈವಿಧ್ಯ ಆಟಗಳ ಪರಿಕರಗಳನ್ನು ನೋಡಲು https://rollthedice.in/collections/all ಸಂಪರ್ಕಿಸಬಹುದು. ಹೊಸ ವರ್ಷ ಸಮೀಪದಲ್ಲಿದೆ. ಮನೆಮಂದಿಯೆಲ್ಲ ಸೇರಿ, ಹೊಸ ವರ್ಷವನ್ನು ಬರಮಾಡಿ ಕೊಳ್ಳುವಾಗ ಇಂಥ ದೇಸಿ ಆಟಗಳ ಪರಿಕರಗಳಿದ್ದರೆ ಎಷ್ಟು ಚಂದ ಅಲ್ವಾ.
ಚೌಕಾಬಾರಾ
ಪಗಡೆಯಾಟ
ರಾಮಾಯಣದ ಪಝಲ್ ಬೋರ್ಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.