ADVERTISEMENT

ಸಾಮಾಜಿಕ ಕಾಳಜಿಯ ‘ಪ್ಯಾಡ್ ವುಮನ್‌’

ಪ್ರಮೋದ
Published 26 ಆಗಸ್ಟ್ 2023, 0:49 IST
Last Updated 26 ಆಗಸ್ಟ್ 2023, 0:49 IST
ಸ್ಯಾನಿಟರಿ ಪ್ಯಾಡ್‌ಗಳ ತಯಾರಿಕೆಯಲ್ಲಿ ತೊಡಗಿರುವ ಕೊಪ್ಪಳದ ಭಾರತಿ ಗುಡ್ಲಾನೂರು –
ಸ್ಯಾನಿಟರಿ ಪ್ಯಾಡ್‌ಗಳ ತಯಾರಿಕೆಯಲ್ಲಿ ತೊಡಗಿರುವ ಕೊಪ್ಪಳದ ಭಾರತಿ ಗುಡ್ಲಾನೂರು –   ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ

ಬಾಲಿವುಡ್‌ ಸಿನಿಮಾ ‘ಪ್ಯಾಡ್ ಮ್ಯಾನ್‘ ನೋಡಿ ಪ್ರಭಾವಿತಗೊಂಡ ಕೊಪ್ಪಳದ ಭಾರತಿ ಗುಡ್ಲಾನೂರು  ತನ್ನ ಜಿಲ್ಲೆಯಲ್ಲಿನ ಹೆಣ್ಣುಮಕ್ಕಳಿಗೂ ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಮುಂದಾದರು. ಈ ಬಗ್ಗೆ ತಿಳಿ ಹೇಳಿದಾಗ ಕೇಳಿ ಬಂದ ‘ದುಬಾರಿಯಾದ ಪ್ಯಾಡ್ ಖರೀದಿಸುವಷ್ಟು ಆರ್ಥಿಕ ಶಕ್ತಿ ನಮ್ಮಲ್ಲಿಲ್ಲ’ ಎಂಬ ಸಾರ್ವತ್ರಿಕ ಅಭಿಪ್ರಾಯವು ಭಾರತಿಯವರ ಮನಸ್ಸಿಗೆ ನಾಟಿತು.

ಇದರ ಬಗ್ಗೆ ಗಂಭೀರವಾಗಿ ಯೋಚಿಸಿ ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ ದೊರೆಯುವಂತೆ ಮಾಡಬೇಕೆಂದು ಪಣತೊಟ್ಟಾಗ ಆರಂಭವಾಗಿದ್ದೇ ‘ಸಂಗಿನಿ’ ಸಂಸ್ಥೆ. 2018ರ ಅಕ್ಟೋಬರ್‌ 2ರಂದು ಪರಿಸರಸ್ನೇಹಿ ಪ್ಯಾಡ್‌ಗಳ ತಯಾರಿಕೆ ಕಿರು ಉದ್ಯಮ ಆರಂಭಿಸಿದ ಅವರು ಮೊದಲು ಒಂದು ದಿನಕ್ಕೆ 1500ರಿಂದ 2,000 ಪ್ಯಾಡ್‌ಗಳನ್ನು ತಯಾರಿಸುತ್ತಿದ್ದರು. ದಿನಗಳು ಉರುಳಿದಂತೆ ಬೇಡಿಕೆ ಹೆಚ್ಚಾಯಿತು. ಯಂತ್ರಗಳ ನೆರವಿನೊಂದಿಗೆ ಈಗ ಒಂದು ತಾಸಿಗೆ 1500 ಪ್ಯಾಡ್‌ಗಳನ್ನು ತಯಾರಿಕೆ ಮಾಡುತ್ತಾರೆ. ಆರಂಭದಲ್ಲಿ ಒಂಬತ್ತು ಜನ ಮಹಿಳೆಯರು ಕೆಲಸ ಮಾಡುತ್ತಿದ್ದರು.

ಸ್ಯಾನಿಟರಿ ಪ್ಯಾಡ್‌ಗಳ ತಯಾರಿಕೆಯಲ್ಲಿ ತೊಡಗಿರುವ ಕೊಪ್ಪಳದ ಭಾರತಿ ಗುಡ್ಲಾನೂರು

ಕೊಪ್ಪಳದಲ್ಲಿ ತಯಾರಾಗುವ ಪ್ಯಾಡ್ ಉತ್ಪನ್ನಗಳಿಗೆ ದೆಹಲಿ, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮಾರುಕಟ್ಟೆಯಿದೆ. ಒಂದು ತಿಂಗಳಿಗೆ 3ರಿಂದ 4 ಲಕ್ಷ ಪ್ಯಾಡ್‌ಗಳು ಹೊರರಾಜ್ಯದಲ್ಲಿಯೇ ಮಾರಾಟವಾಗುತ್ತಿವೆ. ಆಗ ದಿನಕ್ಕೆ 2000 ಪ್ಯಾಡ್‌ಗಳನ್ನು ತಯಾರಿಸುವುದೇ ಕಷ್ಟವಾಗಿದ್ದ ದಿನಗಳನ್ನೂ ಮೀರಿ ಬಂದಿದ್ದಾರೆ. ಈಗ ನಿತ್ಯ 8,000 ಪ್ಯಾಡ್‌ ತಯಾರಾಗುತ್ತಿವೆ. ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಹೆಣ್ಣು ಮಕ್ಕಳಿಗೆ ಪ್ಯಾಡ್ ತಲುಪಿಸಲು ಭಾರತಿ ವ್ಯವಸ್ಥೆ ಮಾಡಿದ್ದಾರೆ.   

ADVERTISEMENT

ತಮ್ಮ ಸಂಸ್ಥೆಯ ಪರಿಸರಸ್ನೇಹಿ ಪ್ಯಾಡ್‌ಗಳ ಮಹತ್ವದ ಬಗ್ಗೆ ಜನರೊಂದಿಗೆ ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಮುಟ್ಟಿನ ವಿಷಯ ಕೂಡ ಮುಕ್ತವಾಗಿ ಮಾತನಾಡಿ ಎಂದು ಕರೆ ಕೊಡುತ್ತಿದ್ದಾರೆ. ಅವರ ಮುಕ್ತ ಮಾತು ದೊಡ್ಡ ಮಾರುಕಟ್ಟೆಯನ್ನೇ ಸೃಷ್ಟಿಸಿದೆ. ಈ ಪ್ಯಾಡ್‌ಗಳನ್ನು ಬಳಕೆ ಮಾಡಿ ಮಣ್ಣಿನಲ್ಲಿ ಹಾಕಿದರೆ ಒಂದು ವರ್ಷದಲ್ಲಿ ಗೊಬ್ಬರವಾಗಿ ಪರಿವರ್ತಿತವಾಗುತ್ತದೆ. ಇದು ಹೆಚ್ಚು ಸುರಕ್ಷಿತ ಮತ್ತು ಪರಿಸರಸ್ನೇಹಿ ಎನ್ನುವ ಅಂಶವನ್ನೇ ಹೆಣ್ಣುಮಕ್ಕಳ ಮುಂದಿಟ್ಟಿದ್ದಾರೆ.

ಖಾಸಗಿ ಕಂಪನಿಗಳು, ಸಂಘ ಸಂಸ್ಥೆಗಳು ಮತ್ತು ದಾನಿಗಳ ನೆರವು ಪಡೆದು ಶಾಲಾ ಕಾಲೇಜುಗಳಲ್ಲಿ  ವಿದ್ಯಾರ್ಥಿನಿಯರಿಗೆ ಸುಲಭವಾಗಿ ಕಡಿಮೆ ಬೆಲೆಗೆ ಪ್ಯಾಡ್‌ ಸಿಗುವ ವ್ಯವಸ್ಥೆ ಮಾಡಿದ್ದಾರೆ. ‘ಪ್ಯಾಡ್ ಮ್ಯಾನ್‘ ಪ್ರೇರಣೆಯಿಂದ ಸಾಮಾಜಿಕ ಕಳಕಳಿಯಾಗಿದ್ದ ಮುಟ್ಟಿನ ಜಾಗೃತಿ ಬಳಿಕ ಉದ್ಯಮವಾಗಿದೆ. ಈಗ ’ಪ್ಯಾಡ್ ವುಮೆನ್‌’ ಎನ್ನುವ ಗರಿಯನ್ನೂ ತಂದುಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.