ADVERTISEMENT

ಬ್ಯೂಟಿ ಟಿಪ್ಸ್: ಮನೆಯಲ್ಲೇ ಹುಬ್ಬು ತೀಡುವ ಮುನ್ನ..

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 19:30 IST
Last Updated 11 ಸೆಪ್ಟೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಕ್‌ಡೌನ್ ಕಾರಣದಿಂದ ಕೆಲವು ದಿನಗಳ ಕಾಲ ಬ್ಯೂಟಿಪಾರ್ಲರ್‌ ತೆರೆದಿರಲಿಲ್ಲ. ಈಗ ಬ್ಯೂಟಿಪಾರ್ಲರ್‌ ತೆರೆದರೂ ಕೊರೊನಾದ ಕಾರಣದಿಂದ ಬ್ಯೂಟಿಪಾರ್ಲರ್‌ಗೆ ಹೋಗಲು ಹೆಂಗಳೆಯರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮನೆಯಲ್ಲೇ ಸೌಂದರ್ಯಕ್ಕೆ ಸಂಬಂಧಿಸಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಐಬ್ರೊ, ಪೆಡಿಕ್ಯೂರ್‌ ಎಂದು ಮನೆಯಲ್ಲೆ ಮಾಡಿಕೊಳ್ಳುತ್ತಿದ್ದಾರೆ. ಹುಬ್ಬನ್ನು ಸಾಮಾನ್ಯವಾಗಿ ಥ್ರೆಡಿಂಗ್ ಮೂಲಕ ತೀಡುತ್ತಾರೆ. ಆದರೆ ಕೆಲವರು ರೇಜರ್ ಬಳಕೆಯಿಂದ ಹುಬ್ಬಿಗೆ ಆಕಾರ ಕೊಡುವುದರಲ್ಲಿ ಎತ್ತಿದ ಕೈ. ಆದರೆ ಈ ರೇಜರ್ ಬಳಸುವ ಮುನ್ನ ಕೆಲವೊಂದು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.

ಮೊದಲು ಹುಬ್ಬನ್ನು ಟ್ರಿಮ್‌ ಮಾಡಿಕೊಳ್ಳಿ. ನಿಮ್ಮ ಹುಬ್ಬಿನ ಕೂದಲು ದಪ್ಪವಾಗಿದ್ದರೆ ಅಥವಾ ಬಹಳ ಸಮಯದಿಂದ ನೀವು ಟ್ರಿಮ್‌ ಮಾಡಿಸದೇ ಇದ್ದರೆ ಮೊದಲು ಟ್ರಿಮ್ ಮಾಡಿಕೊಳ್ಳುವುದು ಉತ್ತಮ. ಬ್ರಷ್‌ ಸಹಾಯದಿಂದ ಹುಬ್ಬಿನ ಕೂದಲನ್ನು ಮೇಲಕ್ಕೆ ಬಾಚಿಕೊಳ್ಳಿ. ನಂತರ ಕತ್ತರಿಯ ಸಹಾಯದಿಂದ ನಿಧಾನಕ್ಕೆ ಕತ್ತರಿಸಿ. ಇದರಿಂದ ನಿಮಗೆ ಯಾವ ರೀತಿ, ಹೇಗೆ ಆಕಾರ ನೀಡಬೇಕು ಎಂಬುದರ ಸ್ಪಷ್ಟತೆ ಮೂಡುತ್ತದೆ.

ಸಾಧ್ಯವಾದರೆ ಎರಡು ಹುಬ್ಬುಗಳ ನಡುವೆ ಐಬ್ರೊ ಮಾಡುವುದನ್ನು ತಪ್ಪಿಸಿ. ಇದು ಸೂಕ್ಷ್ಮ ಜಾಗ. ನಿಮಗೆ ಸಂಪೂರ್ಣ ಆತ್ಮವಿಶ್ವಾಸವಿದ್ದರೆ ಮಾತ್ರ ಆ ಜಾಗದಲ್ಲಿ ರೇಜರ್ ಬಳಕೆ ಮಾಡಿ. ಏನಾದರೂ ಹೆಚ್ಚು ಕಡಿಮೆಯಾಗಿ ಅಂದ ಕೆಡುವ ಜೊತೆಗೆ ಅಪಾಯವೂ ಆಗಬಹುದು. ಅದರ ಬದಲು ಆ ಜಾಗದಲ್ಲಿ ಪ್ಲಕರ್‌ ಮೂಲಕ ಒಂದೊಂದೇ ಕೂದಲು ಕೀಳುವುದು ಉತ್ತಮ.

ADVERTISEMENT

ಯಾವಾಗಲೂ ಹುಬ್ಬಿನ ಮೇಲ್ಭಾಗದಿಂದ ಆರಂಭಿಸಿ. ಆಗ ನಿಮಗೆ ಯಾವ ರೀತಿಯ ಆಕಾರ ಬೇಕು ಎಂಬುದು ಸ್ವಷ್ಪವಾಗಿ ಅರಿವಾಗುತ್ತದೆ. ಮನೆಯಲ್ಲೇ ಐಬ್ರೊ ಮಾಡಿಕೊಳ್ಳುವಾಗ ಯಾವುದೇ ಕಾರಣಕ್ಕೂ ಹುಬ್ಬಿಗೆ ಬೇರೆ ಆಕಾರ ನೀಡಲು ಹೋಗಬೇಡಿ. ಕೊನೆಗೆ ಹುಬ್ಬಿನ ತುದಿಯನ್ನು ಟ್ರಿಮ್‌ ಮಾಡಿ.

ಸಣ್ಣ ಬ್ಲೇಡ್‌ ಇರುವ ರೇಜರ್ ಅನ್ನು ಸಾಮಾನ್ಯವಾಗಿ ಐಬ್ರೊ ಮಾಡಲು ಬಳಸುತ್ತಾರೆ. ಇದರಿಂದ ಸೂಕ್ಷ್ಮ ಪ್ರದೇಶದಲ್ಲಿನ ಕೂದಲನ್ನು ಅಂದವಾಗಿ ಕತ್ತರಿಸಬಹುದು. ಹುಬ್ಬಿನ ಸುತ್ತಮುತ್ತಲಿನ ಜಾಗಗಳು ತುಂಬಾ ಸೂಕ್ಷ್ಮ. ಆ ಕಾರಣಕ್ಕೆ ಕಣ್ಣಿನ ರೆಪ್ಪೆಯ ಮೇಲೆ ಹಾಗೂ ಹುಬ್ಬಿನ ಸುತ್ತ ಶೇವ್ ಮಾಡಿಕೊಳ್ಳುವ ಮುನ್ನ ಎಚ್ಚರವಿರಲಿ. ಆ ಜಾಗದಲ್ಲಿ ಗಾಯವಾಗದಂತೆ ಎಚ್ಚರಿಕೆಯಿಂದ ಕತ್ತರಿಸಿ. ಮೊದಲು ಚಿಮಟದಿಂದ ಕೂದಲನ್ನು ಒಪ್ಪವಾಗಿಸಿಕೊಳ್ಳಿ. ನಂತರ ಉಳಿದ ಕೂದಲನ್ನು ಶೇವ್ ಮಾಡಿ. ಅವಶ್ಯಕತೆಗಿಂತ ಹೆಚ್ಚಿನ ಕೂದಲನ್ನಷ್ಟೇ ಕತ್ತರಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.