
ದಿನಂಪ್ರತಿ ಎಷ್ಟೋ ಹೃದಯಗಳಲ್ಲಿ ಪ್ರೀತಿ ಹುಟ್ಟುತ್ತಲೇ ಇರುತ್ತದೆ; ಮಳೆಗಾಲದಲ್ಲಿ ಹುಟ್ಟುವ ಅಣಬೆಗಳಂತೆ ದಿನ, ವಾರಗಳಲ್ಲೆ ನಶಿಸಿಯೂ ಹೋಗುತ್ತದೆ. ಆದರೆ ಕೆಲವು ಹೃದಯಗಳ ನಡುವಿನ ಪ್ರೀತಿಯು ವರ್ಷಗಟ್ಟಲೆ ಅಗೋಚರವಾಗಿ ಇದ್ದರೂ, ಮಾಸದೆ ಅಚಲವಾಗಿ ಉಳಿದಿರುತ್ತದೆ. ಇಂದಿನ ದಿನಮಾನಗಳಲ್ಲಿ ಇಂತಹ ಶಾಶ್ವತ ಪ್ರೀತಿ ಸಿಗುವುದು ಕಷ್ಟವೇ ಸರಿ.
ಪ್ರೀತಿಯ ಬಲೆಗೆ ಬಿದ್ದವರ ಕುಟುಂಬಗಳ ನಡುವೆ ನಡೆಯುವ ಜಗಳ, ಸಂಘರ್ಷಗಳನ್ನು ನೋಡಿದಾಗಲೆಲ್ಲ, 14-15 ವರ್ಷಗಳ ಹಿಂದೆ ನಡೆದ ಪ್ರಕರಣವೊಂದು ನನಗೆ ನೆನಪಾಗುತ್ತದೆ. ನನ್ನ ಮದುವೆಯ ಸಮಯದಲ್ಲಿಯೇ ನನ್ನ ಪತಿಯ ಆತ್ಮೀಯ ಗೆಳೆಯರೊಬ್ಬರ ಮದುವೆಯೂ ನಿಶ್ಚಯವಾಗಿತ್ತು. ಮನೆಯವರೇ ಹೆಣ್ಣನ್ನು ನೋಡಿ ನಿಶ್ಚಿತಾರ್ಥ ಮಾಡಿದ್ದರು. ಕೆಲ ತಿಂಗಳುಗಳಲ್ಲಿಯೇ ಮದುವೆ ನಡೆಯುವುದರಲ್ಲಿ ಇತ್ತು. ಹುಡುಗ- ಹುಡುಗಿ ಅದಾಗಲೆ ಪ್ರತಿದಿನ ಮಾತನಾಡಲು, ಭಾವನೆಗಳನ್ನು ಪರಸ್ಪರ ಅರ್ಥ ಮಾಡಿಕೊಳ್ಳಲು ಶುರು ಮಾಡಿಕೊಂಡಿದ್ದರು.
ದಿನೇದಿನೇ ಮೊಬೈಲ್ ಯುಗ ಕಾಲಿಡುತ್ತಿತ್ತು. ಆದರೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಮಾಧ್ಯಮಗಳ ಗೊಡವೆ ಇರಲಿಲ್ಲ. ಎಂಗೇಜ್‌ಮೆಂಟ್ ಆದ ಕೆಲವು ವಾರಗಳಲ್ಲಿಯೇ ಎರಡೂ ಕಡೆಯ ಹಿರಿಯರ ನಡುವೆ ತೀರಾ ಸಣ್ಣ ವಿಚಾರಕ್ಕೆ ಮನಸ್ತಾಪವುಂಟಾಯಿತು. ಬಳಿಕ ಅದು ಪ್ರತಿಷ್ಠೆಯ ಪ್ರಶ್ನೆಯಾಗಿ, ವಿಚಾರಗಳಲ್ಲಿ ಭಿನ್ನತೆ ಬಂದು, ಜಗಳ ತಾರಕಕ್ಕೇರಿತು. ಕೊನೆಗೆ ಮದುವೆಯೇ ಮುರಿದುಬಿತ್ತು. ಆದರೆ ಹುಡುಗ, ಹುಡುಗಿ ಗಾಢವಾಗಿ ಪ್ರೀತಿಸುತ್ತಿದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರ ನಡುವೆ ಬಾಂಧವ್ಯ ಬೆಳೆದುಬಿಟ್ಟಿತ್ತು.
ಮನೆಯವರು ಎಷ್ಟೇ ಒತ್ತಾಯ ಮಾಡಿದರೂ ಇಬ್ಬರೂ ಮದುವೆಯ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಬೇರೆಯವರನ್ನು ಮದುವೆ ಮಾಡಿಕೊಳ್ಳಲು ಸುತರಾಂ ಒಪ್ಪಲಿಲ್ಲ. ನಿತ್ಯ ಇಬ್ಬರ ಮನೆಗಳಲ್ಲೂ ಜಗಳ, ಅಳು, ಬೇಜಾರು ಎಲ್ಲವೂ ನಡೆದೇ ಇತ್ತು. ಇವರೇ ಹಿರಿಯ ಮಕ್ಕಳಾಗಿದ್ದು, ಇಬ್ಬರಿಗೂ ತಮ್ಮ, ತಂಗಿ ಇದ್ದರು.
ಇಬ್ಬರೂ ಒಳ್ಳೆಯ ಸಂಬಳ ಬರುವ ಉತ್ತಮ ನೌಕರಿಯಲ್ಲಿದ್ದರು. ವರ್ಷಗಳು ಉರುಳಿದರೂ ಮನೆಯವರ ಹಟ ಮಾತ್ರ ಕರಗಲೇ ಇಲ್ಲ. ಆದರೂ ಹುಡುಗ, ಹುಡುಗಿ ಓಡಿ ಹೋಗಲಿಲ್ಲ, ರಿಜಿಸ್ಟರ್ ಮದುವೆ ಆಗಲಿಲ್ಲ. ಮನೆಯವರನ್ನೆಲ್ಲಾ ಒಪ್ಪಿಸಿಯೇ ಮದುವೆ ಆಗುತ್ತೇವೆ ಎಂಬ ದೃಢಸಂಕಲ್ಪದಲ್ಲಿಯೇ ಇದ್ದರು. ಏನೇ ಮಾಡಿದರೂ ಇಬ್ಬರೂ ರಾಜಿ ಆಗದೇ ಇದ್ದಾಗ ಮನೆಯವರು ಕಿರಿಯ ಮಕ್ಕಳ ಮದುವೆಗಳನ್ನು ಮಾಡಿ ಮುಗಿಸಿದರು.
ಈ ನಡುವೆ ಹುಡುಗನಿಗೆ ತೀವ್ರತರದ ಮೂಳೆ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿತು. ಆತ ಬದುಕುವುದೇ ಕಷ್ಟ ಎನ್ನುವಂತಾಯಿತು. 3-4 ವರ್ಷಗಳ ಚಿಕಿತ್ಸೆ, ಆರೈಕೆ, ದೇವರ ದಯ, ಹುಡುಗಿಯ ಪ್ರಾರ್ಥನೆ, ಪ್ರೀತಿಯ ಫಲ ಎಲ್ಲವೂ ಕೈಗೂಡಿತೇನೋ ಎಂಬಂತೆ ಹುಡುಗ ಚೇತರಿಸಿಕೊಂಡು ಮತ್ತೆ ಮೊದಲಿನಂತೆ ಆದ. ಆ ಸಂಕಷ್ಟದ ಸಮಯದಲ್ಲಿ ಹುಡುಗಿಯು ಹೆಂಡತಿಯಂತೆಯೇ ಮುಂದಾಗಿ ಹುಡುಗನ ಸೇವೆಗೆ ಟೊಂಕ ಕಟ್ಟಿ ನಿಂತಳು. ಇವರ ವಿಚಾರದಲ್ಲಿ ಎರಡೂ ಮನೆಯವರು ವಿಲನ್‌ಗಳಾಗಿದ್ದರೂ ಹುಡುಗನ ತಾಯಿ ಮಾತ್ರ ಇವರ ಪ್ರೀತಿಗೆ ಬೆಂಗಾವಲಾಗಿ, ಬೆಂಬಲವಾಗಿ ಸದಾ ಕಾಲ ನಿಂತಿದ್ದರು.
ಅಂತೂ ಇಂತೂ ಆಪ್ತೇಷ್ಟರ ಒತ್ತಾಯಕ್ಕೆ ಕಟ್ಟುಬಿದ್ದು, ಇಬ್ಬರ ನಡುವಿನ ಅಗಾಧವಾದ ಪ್ರೀತಿಗೆ ಮನಸೋತು, ಹಿಂದೊಮ್ಮೆ ಹಿರಿಯರು ಒಪ್ಪಿ ನಿಶ್ಚಯಿಸಿದ್ದ ಮದುವೆ 12 ವರ್ಷಗಳ ನಂತರ ನಡೆಯಿತು!
ಕೊನೆಗೂ ಮನೆಯವರ ಹಟ ಸೋತಿತು, ಪ್ರೀತಿ ಗೆದ್ದಿತು. ಪ್ರೀತಿಯು ಜಗತ್ತಿನಲ್ಲಿ ಏನನ್ನು ಬೇಕಾದರೂ ಮಾಡಿಸುತ್ತದೆ ಎಂಬುದಕ್ಕೆ ಈ ಪ್ರಕರಣ ಒಂದು ಅದ್ಭುತವಾದ ನಿದರ್ಶನದಂತಿದೆ. ದಂಪತಿಯು ಇಂದು ಮಕ್ಕಳೊಂದಿಗೆ ಸಂತೋಷವಾಗಿ ಇದ್ದಾರೆ. ಇದು, ‘ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು’ ಎಂಬ ಬುದ್ಧನ ಮಾತನ್ನು ನೆನಪಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.