
ಪ್ರಾತಿನಿಧಿಕ ಚಿತ್ರ
ಬೆಂಗಳೂರಿನಿಂದ ಸಾಗರಕ್ಕೆ ಹೊರಟಿದ್ದ ರಾತ್ರಿ ಪ್ರಯಾಣದ ಸರ್ಕಾರಿ ಬಸ್ ಇನ್ನೇನು ಹೊರಡುವುದರಲ್ಲಿತ್ತು. ಒಳಗೆ ಬಂದ ಸುಮಾರು 20 ವರ್ಷದ ಹುಡುಗಿಯೊಬ್ಬಳು, ಮಹಿಳೆಯರ ಪಕ್ಕ ಖಾಲಿಯಿದ್ದ ಸೀಟಿಗಾಗಿ ಹುಡುಕಾಡಿದಳು. ಕೊನೆಗೂ ಅವಳ ಬಯಕೆಯ ಸೀಟು ಸಿಗದೆ, ಪುರುಷರೊಬ್ಬರ ಪಕ್ಕ ಸಿಕ್ಕಿದ ಸೀಟಿನ ಅರ್ಧಭಾಗದಲ್ಲಿ ನಿರಾಸೆಯಿಂದಲೇ ಕುಳಿತು, ಇನ್ನುಳಿದ ಜಾಗದಲ್ಲಿ ತನ್ನ ಬ್ಯಾಗ್ ಇಟ್ಟಿದ್ದಳು.
ಬಸ್ ಹೊರಟರೂ ಅವಳ ಇರುಸುಮುರುಸು ಮಾತ್ರ ಕಡಿಮೆಯಾಗಲಿಲ್ಲ. ಪ್ರತಿ ಸ್ಟಾಪ್ ಬಂದಾಗಲೂ ಯಾರಾದರೂ ಮಹಿಳೆಯ ಪಕ್ಕದ ಸೀಟು ಖಾಲಿ ಯಾಯಿತೇ ಎಂದು ನೋಡುವುದರಲ್ಲೇ ಅವಳ ಅರ್ಧ ಪ್ರಯಾಣ ಮುಗಿದಿತ್ತು. ಅಂತೂ ಅರಸೀಕೆರೆ ಬರುತ್ತಿದ್ದಂತೆ, ನನ್ನ ಪಕ್ಕ ಖಾಲಿಯಾದ ಸೀಟಿಗೆ ಬಂದು ಕುಳಿತಳು. ಆಗ ಅವಳು ಸ್ವಲ್ಪ ನಿರಾಳವಾದಂತೆ ಕಂಡುಬಂತು.
ಆಕೆಯ ಹೆಸರು ಪ್ರಿಯಾ. ಅವಳೊಂದಿಗೆ ಮಾತನಾಡಿದಾಗ ನನಗೆ ತಿಳಿದುಬಂದದ್ದು, ಈ ಹಿಂದೆ ಬಸ್ ಪ್ರಯಾಣಗಳಲ್ಲಿ ಅವಳಿಗಾಗಿದ್ದ ಕೆಟ್ಟ ಅನುಭವಗಳು ಪುರುಷರ ಪಕ್ಕ ಕುಳಿತುಕೊಳ್ಳಲು ಅವಳು ಭಯಪಡುವಂತೆ ಮಾಡಿದ್ದವು. ಜೋರಾಗಿ ವಿರೋಧಿಸಿದರೆ ಬೇರೆಯವರು ತನ್ನ ಬಗ್ಗೆ ತಪ್ಪು ತಿಳಿಯಬಹುದೇನೋ ಎಂಬ ಕಾರಣಕ್ಕೆ ಎಷ್ಟೋ ಬಾರಿ ಮೌನವಾಗಿಯೇ ಪ್ರತಿಭಟಿಸುತ್ತಿದ್ದಳಂತೆ.
ಕೆಲವೊಮ್ಮೆ ಬೇರೆ ಸೀಟಿಗೆ ಬೇಡಿಕೆಯಿಟ್ಟರೆ, ‘ಹೋಗ್ತಾ ಇರೋದೇ ಫ್ರೀಯಾಗಿ, ಸಿಕ್ಕ ಸೀಟಲ್ಲಿ ಸುಮ್ನೆ ಕೂತ್ಕೊಳಮ್ಮ’ ಎಂಬ ತಾತ್ಸಾರದ ಮಾತನ್ನು ಕೇಳಿ ರೋಸಿಹೋಗಿರುವುದಾಗಿ ಹೇಳಿದಳು. ನಂತರ ನಿದ್ದೆಗೆ ಜಾರಿದ ಅವಳು ಎಚ್ಚರಗೊಂಡಿದ್ದು ಶಿವಮೊಗ್ಗ ಬಸ್ ನಿಲ್ದಾಣದಲ್ಲಿಯೇ. ‘ಆ ಸೀಟಿನಲ್ಲಿ ಕುಳಿತಾಗಲೂ ಇಷ್ಟೇ ಆರಾಮದಾಯಕ ವಾಗಿ ಮಲಗುವುದು ಯಾವಾಗ?’ ಎಂಬ ನನ್ನ ಪ್ರಶ್ನೆಗೆ ‘ಎಂದಿಗೂ ಸಾಧ್ಯವಿಲ್ಲ’ ಎಂಬುದೇ ಆಕೆಯ ಉತ್ತರವಾಗಿತ್ತು. ಇದು ಬರೀ ಪ್ರಿಯಾ ಒಬ್ಬಳ ಕಥೆಯಲ್ಲ. ರಾತ್ರಿ ಒಬ್ಬಂಟಿಯಾಗಿ ಪ್ರಯಾಣಿಸುವ ನೂರಾರು ಮಹಿಳೆಯರ ವ್ಯಥೆಯೂ ಹೌದು. ಎಷ್ಟೋ ಮಹಿಳೆಯರು ಇಂದಿಗೂ ರಾತ್ರಿ ವೇಳೆ ರೈಲು ಅಥವಾ ಬಸ್‌ನಲ್ಲಿ ಒಬ್ಬರೇ ಪ್ರಯಾಣಿಸಲು ಹೆದರುತ್ತಾರೆ.
ಇಂತಹ ಅನುಭವಗಳು ರಾತ್ರಿ ಪ್ರಯಾಣಕ್ಕಷ್ಟೇ ಸೀಮಿತವಾಗಿಲ್ಲ. ಹಾಡಹಗಲೇ ಒಂಟಿ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುವ ನೀಚ ಮನಃಸ್ಥಿತಿಗಳೂ ನಮ್ಮ ನಡುವೆ ಇವೆ. ಬೆಂಗಳೂರಿನ ಮೆಟ್ರೊ ರೈಲಿನಲ್ಲಿ ಸಹ ಮಹಿಳೆಯೊಬ್ಬರ ಜೊತೆ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದು ಇತ್ತೀಚೆಗೆ ವರದಿಯಾಗಿತ್ತು. ಜನ ತುಂಬಿರುವ ಬಸ್‌ಗಳಲ್ಲಂತೂ ಇಂಥ ದುರುಳರ ದಂಡೇ ಇರುತ್ತದೆ.
ಕೆಲವು ಪುಂಡರಿಗೆ ಪಾಠ ಕಲಿಸಿದ ಘಟನೆಗಳ ಬಗ್ಗೆ ಎಷ್ಟು ಕೇಳುತ್ತೇವೆಯೋ ಕೇಳದೇ ಉಳಿದುಹೋಗುವ ಕಥೆಗಳೂ ಅಷ್ಟೇ ಪ್ರಮಾಣದಲ್ಲಿ ಇರುತ್ತವೆ. ತಮಗಾಗುವ ಇಂತಹ ನರಕಸದೃಶ ಅನುಭವವನ್ನು ಹೆಚ್ಚಿನ ಹೆಣ್ಣುಮಕ್ಕಳು ಒಡಲೊಳಗೇ ಬಚ್ಚಿಟ್ಟುಕೊಂಡಿರುತ್ತಾರೆ.
ನೋಡಿದವರು ಏನೆಂದುಕೊಳ್ಳುವರೋ ಎಂಬ ಭಯದಲ್ಲಿ ದೌರ್ಜನ್ಯವನ್ನು ಸಹಿಸಿಕೊಂಡು ಸುಮ್ಮನಾಗುವ ಪ್ರಿಯಾ ಅಂಥವರು ತಮ್ಮ ಪರವಾಗಿ ದನಿ ಎತ್ತುವುದು ಯಾವಾಗ? ಹೀಗೆ ದನಿ ಎತ್ತುವುದರಲ್ಲಿ ತಪ್ಪೇನಿದೆ? ಅವರ ದನಿ ಗಟ್ಟಿಗೊಳಿಸಬೇಕಾದವರು ಮತ್ತು ಸ್ಪಂದಿಸಬೇಕಾದವರು ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಮೂಡುತ್ತವೆ. ಹೆಣ್ಣುಮಕ್ಕಳೊಂದಿಗೆ ಕೆಟ್ಟದಾಗಿ ವರ್ತಿಸುವವರಿಗೆ ಕಾನೂನಿನ ಭಯವೂ ಇರುವುದಿಲ್ಲವೇ? ಹಾಗಿದ್ದರೆ, ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಮರೀಚಿಕೆಯಾಗಿಯೇ ಉಳಿಯದಂತೆ ಮಾಡುವುದಾದರೂ ಹೇಗೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.