ಬೆಂಗಳೂರು: ಮನೆಗಳಲ್ಲಿ ಹೆಣ್ಣು ಮಕ್ಕಳು ಇದ್ದರೆ ಅದರ ಸೊಬಗು ಚಂದ. ಅವರು ಪ್ರತಿ ಮನೆಗೆ ಭೂಷಣ ಎಂದು ಹಿರಿಯರು ಹೇಳುತ್ತಾರೆ.
ತಂದೆ–ತಾಯಿ, ಸಹೋದರರ, ತಾತ ಅಜ್ಜಿಯರಿಗೆ ಹೆಚ್ಚು ಅಚ್ಚುಮೆಚ್ಚು ಈ ಹೆಣ್ಣು ಮಕ್ಕಳು. ಜಗತ್ತು ಹೆಣ್ಣು ಮಕ್ಕಳ ಬಗ್ಗೆ ವಿಶೇಷವಾಗಿ ಸ್ಮರಿಸಲು, ಅವರ ಪ್ರೀತಿ ಹಂಚಲು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರದಂದು ‘ವಿಶ್ವ ಹೆಣ್ಣು ಮಕ್ಕಳ ದಿನ‘ ಎಂದು ಆಚರಿಸಲಾಗುತ್ತದೆ.
ಈ ವರ್ಷ ಸೆಪ್ಟೆಂಬರ್ 22 ರಂದು ‘ವಿಶ್ವ ಹೆಣ್ಣು ಮಕ್ಕಳ ದಿನ‘ ಆಚರಿಸಲಾಗುತ್ತಿದೆ. ಹುಟ್ಟಿದಾಗ ಮನೆಯವರ ಪ್ರೀತಿ ಗಳಿಸುವ ಹೆಣ್ಣು ಮಗು, ಅದರಲ್ಲೂ ತಾಯಿಯ ಅಂತರಂಗದ ಒಡನಾಡಿಯೇ ಆಗಿರುತ್ತದೆ. ಬೆಳೆಯುತ್ತಾ ಮನೆಯಲ್ಲಿ ಸಹೋದರರ ಮುದ್ದಿನ ಅಕ್ಕ–ತಂಗಿ ಆಗಿ ಒಂದು ರೀತಿ ಮನೆಗೆ ಅವಳೇ ರಾಣಿ ಎನ್ನುವಂತೆ ಬೆಳೆಯುತ್ತಾಳೆ.
ಹೆಣ್ಣು ಮಕ್ಕಳ ಬಗ್ಗೆ ಅದರಲ್ಲೂ ತಂದೆಯರಿಗೆ ವಿಶೇಷ ಒಲವು. ಹೆಣ್ಣು ಮಕ್ಕಳು ಬೆಳೆಯುತ್ತಾ ಕುಟುಂಬದಲ್ಲಿ ಪ್ರಮುಖ ಸ್ಥಾನ ಗಳಿಸುತ್ತಾರೆ. ಮದುವೆಯಾಗಿ ಹೋಗುವವರೆಗೂ ಅವಳು ಮನೆಗೆ ಹೆಣ್ಣು ಮಗು.
ಈ ದಿನ ತಂದೆ–ತಾಯಿಗಳು, ಸಹೋದರರು ಹೆಣ್ಣು ಮಕ್ಕಳಿಗೆ ವಿಶೇಷ ಶಭಾಶಯ ಕೋರಿ ಅವರಿಗೆ ಉಡುಗೊರೆ ನೀಡುತ್ತಾರೆ. ನಟ ಅಕ್ಷಯ್ ಕುಮಾರ್ ಅವರು ಹೆಣ್ಣು ಮಕ್ಕಳ ದಿನದ ಪ್ರಯುಕ್ತ ತಮ್ಮ ಮಗಳ ಜೊತೆ ಇರುವ ಫೋಟೊ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.
‘ಮಗಳ ಒಂದು ಅಪ್ಪುಗೆಯ ಮುಂದೆ ತಂದೆಯರಿಗೆ ಈ ಜಗತ್ತಿನಲ್ಲಿ ಬೇರೆಯದ್ದೂ ಇಲ್ಲ‘ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ. ಅನೇಕ ಸೆಲಿಬ್ರಿಟಿಗಳು ಹೆಣ್ಣು ಮಕ್ಕಳ ಶುಭಾಶಯ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.