ADVERTISEMENT

ಲಹರಿ: ಅವನ ಒಲವಿನ ಬಲೆಯಲಿ ಸೆಳೆಯುತ ಕುಣಿಸಿದ ಕೆಂಪು ಗುಲಾಬಿಗೆ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2026, 6:55 IST
Last Updated 7 ಫೆಬ್ರುವರಿ 2026, 6:55 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿತ್ರ: ಎಐ ಚಿತ್ರ

ನನ್ನಿಷ್ಟದ ಕೆಂಪು ಗುಲಾಬಿ ಮೂಲಕ ಬದುಕಿಗೆ ಬಂದವನು ಅವನು. ಪ್ರತಿ ಹಂತದಲ್ಲೂ ಜೊತೆಯಾಗಿ ನಿಂತು ಮುಳ್ಳಿನ ಗಿಡದಲ್ಲೂ ಅರಳುವ ಚೆಂದದ ಗುಲಾಬಿಯಂತೆ, ಬದುಕಿನ ಕಷ್ಟಗಳಿಗೆ ಬೆನ್ನೆಲುಬಾಗಿ ಬಾಳ ಬೆಳಗಿಸುತ್ತಿದ್ದಾನೆ. ಹೀಗಿದ್ದಾಗ ಬದುಕು ಚಂದವಾಗಿಸಿ ಮುಡಿಗೇರಿದ ಅಂದದ ಗುಲಾಬಿಯ ನೆನೆಯಲು ಪದಗಳ ಹೆಣೆಯುವ ಬಯಕೆ ನನ್ನದು.

ADVERTISEMENT

ಅದೊಂದು ಕಾಲವಿತ್ತು, ಕೆಂಪು ಗುಲಾಬಿ ಪ್ರೀತಿ ಸಂಕೇತವೆಂದಾಗಲೀ, ಹುಡುಗನೊಬ್ಬ ಮನದನ್ನೆಗೆ ತನ್ನುಸಿರಲ್ಲಿನ ಭಾವನೆಗಳನ್ನು ವ್ಯಕ್ತಪಡಿಸಲು ತಂದು ನೀಡುತ್ತಾನೆಂದಾಗಲೀ ಅರಿಯದ ವಯಸ್ಸದು.

ಮುಂಜಾನೆಯ ತಂಪಲ್ಲಿ ಮುಗುಳು ನಗುತ್ತಿದ್ದ ಕೆಂಪು ಗುಲಾಬಿಯನ್ನು ಕಿತ್ತು ತಂದು ದೇವರ ಮುಂದಿಟ್ಟು, ಈ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಸಿಗುವಂತಾಗಲಿ ಎನ್ನುತ್ತಿದ್ದೆ.

ಗುಲಾಬಿ ಎಂದರೆ ಮುಳ್ಳಿನ ಗಿಡದಲ್ಲಿ ಚೆಂದದ ನಗೆ ಬೀರಿ ಅರಳಿ ನಿಲ್ಲುವ ನೈದಿಲೆ, ಅದರ ಘಮ್‌ ಎನ್ನುವ ಪರಿಮಳ, ಮೃದು ಪಕಳೆ. ಎರಡು ಜಡೆಗಳಿಗೆ ಒಂದೊಂದು ಕೆಂಪು ಗುಲಾಬಿ ಹೂವ ಮುಡಿಸಿ ಖುಷಿ ಪಡುವ ಅಮ್ಮನ ಪ್ರೀತಿ. ಶಾಲೆಯ ಕಾರ್ಯಕ್ರಮಕ್ಕೆ ಬರುವ ಅತಿಥಿಗಳನ್ನು ಸ್ವಾಗತಿಸಲು ನೀಡುವ, ಪ್ರೀತಿಯ ಟೀಚರ್‌ ಟೇಬಲ್‌ ಮೇಲೆ ಪ್ರತಿ ದಿನ ಇಡುವ ಹೂವು. ಜತೆಗೆ ನನ್ನೆಲ್ಲಾ ಖುಷಿಯನ್ನು ಸಂಭ್ರಮಿಸುವ ನನ್ನ ಮುದ್ದು ಗುಲಾಬಿ.

ಪ್ರಾತಿನಿಧಿಕ ಚಿತ್ರ

ಆದರೆ ಕಾಲೇಜು ಮೆಟ್ಟಿಲು ಹತ್ತಿದಾಗಲೇ ತಿಳಿದಿದ್ದು ಕೆಂಪು ಗುಲಾಬಿಗೆ ಹಲವು ಬಣ್ಣ, ಹಲವು ಅರ್ಥವೆಂದು.

ಆ ದಿನ ಅವನೊಬ್ಬ ಕೆಂಪು ಗುಲಾಬಿ ಹಿಡಿದು ಎದುರು ಬಂದು ಮಂಡಿಯೂರಿ ‘ನನ್ನ ಮನದರಸಿ...’ ಎಂದಾಗ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟ ಅನುಭವ. ಕೈಯಲ್ಲಿದ್ದ ಕೆಂಪು ಗುಲಾಬಿಯೇ ಇವನೇನು ಮಾಡಲು ಹೊರಟಿದ್ದಾನೆ ಎನ್ನುವ ಪ್ರಶ್ನೆಗೆ ಉತ್ತರ ನೀಡಿತ್ತು. ಅವನನ್ನು ನೋಡಿದಾಗಲೆಲ್ಲ ನನ್ನ ಕನಸಿನ ಹುಡುಗ ಎನ್ನಿಸುತ್ತಿದ್ದುದ್ದಕ್ಕೂ, ಅವನು ನನ್ನಿಷ್ಟದ ಗುಲಾಬಿ ತಂದು ನೀಡಿದ್ದಕ್ಕೂ ಸರಿಯಾಗಿತ್ತು.

ಅವನೇನೋ ಕೆಂಪು ಗುಲಾಬಿಯ ಮೂಲಕ ತನ್ನ ಮನದ ಮಾತಿಗೆ ಕನ್ನಡಿ ಹಿಡಿದಿದ್ದ. ನನ್ನ ಪರಿಸ್ಥಿತಿ... ಮನದಲ್ಲಿ ಗೊಂದಲ ಗೂಡುಕಟ್ಟಿತ್ತು. ಗುಲಾಬಿ ಒಂದೇ ಆದರೂ ಅಮ್ಮ ಮುಡಿಸುತ್ತಿದ್ದ ಕೆಂಪು ಗುಲಾಬಿಗೂ ಅವನು ನೀಡುತ್ತಿರುವ ಕೆಂಪು ಗುಲಾಬಿಗೂ ಅಜಗಜಾಂತರ ವ್ಯತ್ಯಾಸ.

ಅವನು ನನ್ನ ಕನಸಿನ ಕೂಸಿಗೆ ತೊಟ್ಟಿಲಾಗಿ ಪೋಷಿಸುತ್ತಾನೆಂಬ ನಂಬಿಕೆಯಿತ್ತು. ಜತೆಗೆ ನನ್ನ ಪ್ರತಿ ಸಂಭ್ರಮದ ಸ್ನೇಹಿತೆ ಗುಲಾಬಿಯೂ ‘ಒಪ್ಪಿಕೊಳ್ಳೆ ಪರವಾಗಿಲ್ಲ’ ಎಂದು ಪಿಸುಗುಟ್ಟಿತ್ತು. ಅಷ್ಟೇ.. ಅವನು ಕೆಂಪು ಗುಲಾಬಿಯೊಂದಿಗೆ ಬದುಕಿಗೆ ಬಂದಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.