ADVERTISEMENT

ಜೂನ್ 23 ಅಂತರರಾಷ್ಟ್ರೀಯ ವಿಧವೆಯರ ದಿನ: ಏನಿದರ ಮಹತ್ವ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಜೂನ್ 2022, 10:21 IST
Last Updated 23 ಜೂನ್ 2022, 10:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಸ್ತ್ರೀ’ ಅಬಲೆಯಲ್ಲ, ಸಬಲೆ ಎಂದು ಘೋಷಣೆಗಳು ಆಗಾಗ ಮೊಳಗುತ್ತಿದ್ದರೂ ಕೆಲ ಮಹಿಳೆಯರು ಒಂದು ಹಂತದಲ್ಲಿ ಅನುಭವಿಸುವ ಸಂಕಟ ಶತಶತಮಾನಗಳಿಂದಲೂ ನಡೆದುಕೊಂಡು ಬಂದಿದೆ.

ಹೆಂಡತಿಯಾಗಿ, ತಾಯಿಯಾಗಿ ಕುಟುಂಬವನ್ನು ಸಲಹುವ ಸ್ತ್ರೀ, ಆಕಸ್ಮಿಕವಾಗಿ ಗಂಡನನ್ನು ಕಳೆದುಕೊಂಡರೆ ಅವಳು ಈ ಸಮಾಜದಲ್ಲಿ ವಿಧವೆ ಎನ್ನುವ ಪಟ್ಟ ಹೊತ್ತು ಬಿಡುತ್ತಾಳೆ. ಇದರಿಂದ ಅದೆಷ್ಟೊ ಮಹಿಳೆಯರು ಅನುಭವಿಸುವ ತಲ್ಲಣಗಳು ಒಂದೆರಡಲ್ಲ.

ವಿಧವೆ ಆದ ಮೇಲೆ ಅವಳು ಅನುಭವಿಸುವ ಸಂಕಷ್ಟಗಳನ್ನು ಅವಳು ಯಾರ ಮುಂದೆಯೂ ಹೇಳಿಕೊಳ್ಳುವುದಿಲ್ಲ. ಪ್ರಪಂಚದ ಅನೇಕ ದೇಶಗಳ, ಅನೇಕ ಸಮಾಜಗಳಲ್ಲಿ ವಿಧವೆ ಪಟ್ಟ ಹೊತ್ತ ಮಹಿಳೆಯನ್ನು ಇಂದಿಗೂ ಕೂಡ ನಿಕೃ‌ಷ್ಟವಾಗಿ ನೋಡಿಕೊಂಡು ಬರಲಾಗುತ್ತಿದೆ.

ADVERTISEMENT

ವಿಧವೆಯರ ದಿನ

ವಿಧವೆಯರೂ ಕೂಡ ತಮ್ಮ ಇಚ್ಛೆಯಂತೆ ಜೀವನ ಏಕೆ ಸಾಗಿಸಬಾರದು? ಅವರ ಹಕ್ಕುಗಳನ್ನು ರಕ್ಷಿಸಬೇಕು, ಅವರಿಗೆ ಸುಗಮ ಜೀವನಕ್ಕೆ ದಾರಿ ಮಾಡಿಕೊಡಬೇಕು, ಗೌರವ ನೀಡಬೇಕು ಎಂದು ಪ್ರತಿ ವರ್ಷ ಜೂನ್ 23 ರಂದು ‘ಅಂತರರಾಷ್ಟ್ರೀಯ ವಿಧವೆಯರ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ವಿಧವಾ ಮಹಿಳೆಯರಿಗೆ ನ್ಯಾಯ ಸಿಗಬೇಕು, ಅವರ ಮೇಲೆ ದೌರ್ಜನ್ಯಗಳು ನಿಲ್ಲಬೇಕು, ಸಮಾಜದ ಮುಖ್ಯವಾಹಿನಿಯಲ್ಲಿ ವಿಧವೆ ಎನಿಸಿಕೊಂಡವರೂ ಕೂಡ ಘನತೆಯಿಂದ ಬಾಳಲು ಎಲ್ಲ ಸಮಾಜಗಳು ಅವಕಾಶ ಮಾಡಿಕೊಡಬೇಕು ಎಂದು 2011 ರಲ್ಲಿ ವಿಶ್ವಸಂಸ್ಥೆ ಅಂತರರಾಷ್ಟ್ರಿಯ ವಿಧವೆಯರ ದಿನವನ್ನಾಗಿ ಘೋಷಣೆ ಮಾಡಿತು.

ವಿಧವೆಯರ ದಿನ ಭಾರತೀಯರಿಂದ ಆಚರಣೆಗೆ

ಹೌದು ವಿಶ್ವಸಂಸ್ಥೆಯಿಂದ ಮನ್ನಣೆ ಪಡೆದ, ಲಂಡನ್‌ನಲ್ಲಿ ಅನಿವಾಸಿ ಭಾರತೀಯರಿಂದ ಸ್ಥಾಪಿಸಲ್ಪಟ್ಟ ಅಂತರರಾಷ್ಟ್ರೀಯ ಎನ್‌ಜಿಒ ‘ಲೂಂಬಾ ಫೌಂಡೇಶನ್‌’ ಕಾಳಜಿಯಿಂದ ಅಂತರರಾಷ್ಟ್ರೀಯ ವಿಧವೆಯರ ದಿನ ಆಚರಣೆಗೆ ಬಂತು. ಲೂಂಬಾ ಫೌಂಡೇಶನ್‌ ಮುಖ್ಯಸ್ಥ ಲಾರ್ಡ್ ಲೂಂಬಾ ಪಂಜಾಬ್‌ನವರು.

ಲಾರ್ಡ್ ಲೂಂಬಾ ತಾಯಿ ಪುಷ್ಪವತಿ ಲೂಂಬಾ ಅವರು 1953, ಜೂನ್ 23 ರಂದು ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ಲೂಂಬಾ ಅವರಿಗೆ ಗಂಡನನ್ನು ಕಳೆದುಕೊಂಡ ಮಹಿಳೆಯರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು 1954 ರಿಂದ ವಿಧವೆಯರ ದಿನವನ್ನು ಆಚರಣೆ ಪ್ರಾರಂಭಿಸಿದರು.

ಭಾರತದಲ್ಲಿ ವಿಧವೆಯರ ಬಗ್ಗೆ ಇರುವ ಹಳೆ ಕಾಲದ ಭಾವನೆಗಳು ಇನ್ನೂ ಗಾಢವಾದ ಪ್ರಮಾಣದಲ್ಲಿ ಇರುವುದರಿಂದ ಗಂಡನನ್ನು ಕಳೆದುಕೊಂಡ ಅನೇಕ ಮಹಿಳೆಯರು ಒಂಟಿ ಭಾವನೆ ಅನುಭವಿಸುತ್ತಾ, ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿಯಲು ಬಯಸುತ್ತಾರೆ.

ಉತ್ತರ ಪ್ರದೇಶ ಮಥುರಾದಲ್ಲಿ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬೃಂದಾವನದ ವಿಧವೆಯರು ಎಂಬ ಆಚರಣೆಯನ್ನೇ ಮಾಡಿಕೊಂಡು ಬರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.