ADVERTISEMENT

ಬೀದರ್: ಅದ್ದೂರಿ ಮೆರವಣಿಗೆ, ಐದು‌ ದಿನಗಳ ಗಣೇಶ ಉತ್ಸವಕ್ಕೆ ವಿದ್ಯುಕ್ತ ತೆರೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2023, 15:18 IST
Last Updated 23 ಸೆಪ್ಟೆಂಬರ್ 2023, 15:18 IST
   

ಬೀದರ್: ನಗರದಲ್ಲಿ ಶನಿವಾರ ರಾತ್ರಿ ಶ್ರದ್ಧಾ, ಭಕ್ತಿ ಹಾಗೂ ಸಡಗರ ಸಂಭ್ರಮದ ನಡುವೆ ಗಣಪನ ಮೂರ್ತಿಗಳ ಅದ್ದೂರಿ ಮೆರವಣಿಗೆ ನಡೆಯಿತು.

ನಗರದ ವಿವಿಧ ಕಡೆ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಗಳನ್ನು ವಿಶಿಷ್ಟ ರೀತಿಯಲ್ಲಿ ಅಲಂಕರಿಸಿದ್ದ ವಾಹನಗಳಲ್ಲಿ ಶನಿವಾರ ಸಂಜೆ ಕೂರಿಸಿ, ಪೂಜೆ ಸಲ್ಲಿಸಿದರು.

ಅನಂತರ ಕಿವಿಗಡಚ್ಚಿಕ್ಕುವ ಡಿ.ಜೆ. ಸಂಗೀತದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಮಾರ್ಗದುದ್ದಕ್ಕೂ ಗಣೇಶ ಮಂಡಳಿಯ ಯುವಕರು ಶಿಸ್ತಿನ ಸಿಪಾಯಿಗಳಂತೆ ಕೇಸರಿ, ಬಿಳಿ ವರ್ಣದ ವಸ್ತ್ರ ಧರಿಸಿ, ಭಗವಾ ಧ್ವಜಗಳನ್ನು ಬೀಸುತ್ತ ಹೆಜ್ಜೆ ಹಾಕಿದರು. ಮೈಮರೆತು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಜನ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ನಯಾ ಕಮಾನ, ಸಿದ್ದಿ ತಾಲೀಮ್, ಚೌಬಾರ, ಮಹಮೂದ್ ಗವಾನ ಚೌಕ ವೃತ್ತದಲ್ಲಿ ಸೇರಿದ್ದರು. ಅನೇಕರು ಪ್ರಾಣ ಲೆಕ್ಕಿಸದೆ ಕಟ್ಟಡಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ, ಗಣಪನ ಮೂರ್ತಿಗಳ ವಿಸರ್ಜನೆ ನೋಡಿದರು.

ADVERTISEMENT

ಬಸವೇಶ್ವರ ವೃತ್ತ, ನಯಾಕಮಾನ, ಚೌಬಾರ ಮೂಲಕ ಮೆರವಣಿಗೆಯಲ್ಲಿ ಮೂರ್ತಿಗಳನ್ನು ಕೊಂಡೊಯ್ದು ಔರಾದ್ ತಾಲ್ಲೂಕಿನ ಕೌಠಾ (ಬಿ) ಸಮೀಪದ ಮಾಂಜ್ರಾ ನದಿಯಲ್ಲಿ ವಿಸರ್ಜನೆಗೆ ಕೊಂಡೊಯ್ದರು.ಒಟ್ಟು ನೂರಕ್ಕೂ ಹೆಚ್ಚು ಮೂರ್ತಿಗಳ ಮೆರವಣಿಗೆ ನಡೆಯುತ್ತಿದೆ. ಜಿಲ್ಲೆಯಾದ್ಯಂತ 1500 ಬೆನಕನ ಮೂರ್ತಿಗಳನ್ನು ಸಮೀಪದ ಕೆರೆ ಕಟ್ಟೆಗಳಲ್ಲಿ ವಿಸರ್ಜಿಸಲಾಯಿತು.

ಇದರೊಂದಿಗೆ ಐದು ದಿನಗಳ ಗಣೇಶ ಉತ್ಸವಕ್ಕೆ ವಿದ್ಯುಕ್ತ ತೆರೆ ಬಿತ್ತು. ಇನ್ನು, ಮನೆಗಳಲ್ಲಿ ಕೂರಿಸಿದ ಗಣಪನ ಮೂರ್ತಿಗಳನ್ನು ಆಯಾ ಗಣೇಶ ಮಂಡಳಿಯವರಿಗೆ ನೀಡಿದರು. ಎಲ್ಲಾ ಗಣೇಶ ಮಂಡಳಿಯವರಿಗೆ ಚೌಬಾರ ಸಮೀಪ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಸ್ವಾಗತಿಸಿದರು. ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಇದೇ ರೀತಿ ಪ್ರತಿವರ್ಷ ಹಬ್ಬ ಆಚರಿಸಬೇಕೆಂದು ಹೇಳಿದರು.

ಇದಕ್ಕೂ ಮುನ್ನ ಚೌಬಾರ ಬಳಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೇದಿಕೆಯಲ್ಲಿ ಮೆರವಣಿಗೆಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಗಣೇಶ ಮಹಾಮಂಡಳದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ಮುಖಂಡರಾದ ಗುರುನಾಥ ಕೊಳ್ಳೂರ, ಈಶ್ವರ ಸಿಂಗ್ ಠಾಕೂರ್, ಸೋಮಶೇಖರ ಪಾಟೀಲ ಗಾದಗಿ, ಶಿವಶರಣಪ್ಪ ವಾಲಿ, ನಂದಕಿಶೋರ ವರ್ಮಾ ಇನ್ನಿತರರು ಹಾಜರಿದ್ದರು.

ಡಿಸಿ, ಎಸ್ಪಿಯವರು ಗಣೇಶ ಮಂಡಳಿಯ ಬಾಲಕರೊಂದಿಗೆ ಕೋಲಾಟವಾಡಿ ಗಮನ ಸೆಳೆದರು. ಭಕ್ತರಿಗೆ ಪ್ರಸಾದ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.