ADVERTISEMENT

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ | ರಂಗೇರಿದ ಚುನಾವಣಾ ಕಣ: ಕೈ - ಕಮಲ ಪೈಪೋಟಿ

ಎಚ್.ಬಾಲಚಂದ್ರ
ವಿಜಯಕುಮಾರ್ ಎಸ್.ಕೆ.
Published 23 ಮಾರ್ಚ್ 2024, 6:35 IST
Last Updated 23 ಮಾರ್ಚ್ 2024, 6:35 IST
   

ಉಡುಪಿ/ಚಿಕ್ಕಮಗಳೂರು: ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಉಮೇದುವಾರಿಕೆ ಘೋಷಣೆ ಮಾಡಿದ ಬಳಿಕ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಉಭಯ ಪಕ್ಷಗಳ ನಾಯಕರು ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದು ಮತಬೇಟೆಗೆ ಇಳಿದಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಹುರಿಯಾಳಾಗಿ ಕೆ.ಜಯಪ್ರಕಾಶ್ ಹೆಗ್ಡೆ ಕಣದಲ್ಲಿದ್ದಾರೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಇರುವುದು ಸ್ಪಷ್ಟವಾಗಿ ಕಾಣುತ್ತದೆ.

ಜಾತಿ ಸಮೀಕರಣ:

ಕೋಟ ಶ್ರೀನಿವಾಸ ಪೂಜಾರಿ ಹಿಂದುಳಿದ ವರ್ಗಗಳ ಬಿಲ್ಲವ ಸಮುದಾಯಕ್ಕೆ ಸೇರಿದವರು. ಕೆ.ಜಯಪ್ರಕಾಶ್ ಹೆಗ್ಡೆ ಕರಾವಳಿಯ ಪ್ರಬಲ ಬಂಟ ಸಮುದಾಯದವರು. ಬಿಲ್ಲವ ಹಾಗೂ ಬಂಟ ಸಮುದಾಯಗಳು ಕರಾವಳಿಯ ಪ್ರಬಲ ಜಾತಿಗಳಾಗಿರುವುದರಿಂದ ಸ್ಪರ್ಧೆಯು ತೀವ್ರ ಕುತೂಹಲ ಕೆರಳಿಸಿದೆ. ಎರಡೂ ಪಕ್ಷಗಳು ಅಳೆದು ತೂಗಿ, ಜಾತಿ ಸಮೀಕರಣ ಮಾಡಿ ಟಿಕೆಟ್‌ ನೀಡಿವೆ.

ADVERTISEMENT

ಬಿಜೆಪಿಗೆ ಬಂಡಾಯ ಬಿಸಿ:

ಬಿಜೆಪಿಯಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಪ್ರಮೋದ್ ಮಧ್ವರಾಜ್‌ಗೆ ಟಿಕೆಟ್‌ ಕೈತಪ್ಪಿರುವುದು ಬಿಜೆಪಿಗೆ ಒಳಪೆಟ್ಟು ಕೊಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಪ್ರಮೋದ್ ಮಧ್ವರಾಜ್ ಬಹಿರಂಗವಾಗಿ ಎಲ್ಲಿಯೂ ಬಂಡಾಯ ಪ್ರದರ್ಶಿಸದಿದ್ದರೂ ಅಸಮಾಧಾನದ ಹೊಗೆಯಂತೂ ಆಡುತ್ತಿದೆ.

ಮೊಗವೀರ ಸಮುದಾಯದ ಬಲ, ವೈಯಕ್ತಿಕ ವರ್ಚಸ್ಸು ಹಾಗೂ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಪ್ರಮೋದ್ ಮಧ್ವರಾಜ್‌ ಬಂಡಾಯ ಪ್ರದರ್ಶಿಸಿದರೆ ಬಿಜೆಪಿಗೆ ಹಿನ್ನಡೆ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ಮೀನುಗಾರರ ಒಲವು ಯಾರ ಕಡೆಗೆ:

ಸ್ಥಳೀಯ ಸಂಸ್ಥೆಗಳ ಚುನಾವಣೆ ಇರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಇರಲಿ ಕರಾವಳಿಯಲ್ಲಿ ಪ್ರಬಲವಾಗಿರುವ ಮೀನುಗಾರರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮೀನುಗಾರರು ಯಾವ ಪಕ್ಷದ ಕಡೆಗೆ ವಾಲುತ್ತಾರೋ ಆ ಪಕ್ಷದ ಅಭ್ಯರ್ಥಿಯ ಗೆಲುವು ಸುಲಭ ಎಂದೇ ಹೇಳಬಹುದು. ಪ್ರಮೋದ್ ಮಧ್ವರಾಜ್‌ಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಮೀನುಗಾರರು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ.

ಬಿಜೆಪಿ ಭದ್ರಕೋಟೆ: 

ದಶಕಗಳ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಉಡುಪಿ ಜಿಲ್ಲೆ ಪ್ರಸ್ತುತ ಬಿಜೆಪಿ ತೆಕ್ಕೆಯಲ್ಲಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಜಿಲ್ಲೆಯ ಉಡುಪಿ, ಕುಂದಾಪುರ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರು ಇದ್ದಾರೆ. ವಿಧಾನಸಭಾ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲೂ ಮತದಾರರು ಬಿಜೆಪಿ ಪರವಾಗಿ ಮತ ಹಾಕಿದರೆ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚು.

ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳೂ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು, ಪ್ರತ್ಯೇಕ ಅಭಿಮಾನಿಗಳ ಬಳಗ ಹೊಂದಿದ್ದಾರೆ. ರಾಜಕೀಯವಾಗಿಯೂ ಅನುಭವ ಹೊಂದಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ 2009, 2010, 2016 ಹಾಗೂ 2022ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದು, 2019ರಲ್ಲಿ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾಗಿ ಬಳಿಕ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿಯೂ ಕೋಟ ಕಾರ್ಯ ನಿರ್ವಹಿಸಿದ್ದಾರೆ.

ಕೆ.ಜಯಪ್ರಕಾಶ್ ಹೆಗ್ಡೆ ಕೂಡ ಅನುಭವಿ ರಾಜಕಾರಣಿ. 1994ರಲ್ಲಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದ ಜೆ.ಪಿ.ಹೆಗ್ಡೆ  ನಂತರ 1999 ಹಾಗೂ 2004ರ ವಿಧಾನಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದಾರೆ. ಎರಡು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ.

ಉಡುಪಿ– ಚಿಕ್ಕಮಗಳೂರು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲೂ ಗೆಲುವು ಸಾಧಿಸಿರುವ ಜಯಪ್ರಕಾಶ್ ಹೆಗ್ಡೆ ಅವರಿಗೆ ಸಂಸತ್ ಪ್ರವೇಶಿಸಿದ ಅನುಭವ ಇದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಚಿಕ್ಕಮಗಳೂರಿಗೆ ಇಬ್ಬರೂ ಸ್ಥಳೀಯರಲ್ಲ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು ನಾಲ್ಕು ಕ್ಷೇತ್ರ ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೆ. ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೆ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ಇಬ್ಬರು ಅಭ್ಯರ್ಥಿಗಳೂ ಜಿಲ್ಲೆಯವರಲ್ಲ. ಲಿಂಗಾಯತ ಒಕ್ಕಲಿಗ ಪರಿಶಿಷ್ಟ ಜಾತಿ ಮತ್ತು ಪಂಗಡ ಕುರುಬ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಯಪ್ರಕಾಶ್ ಹೆಗ್ಡೆ ಈ ಹಿಂದೆ ಈ ಕ್ಷೇತ್ರವನ್ನು ಒಮ್ಮೆ ಪ್ರತಿನಿಧಿಸಿದ್ದು ಜಿಲ್ಲೆಯ ಜನರಿಗೆ ಪರಿಚಿತರು. ಜಿಲ್ಲೆಯ ಸಮಗ್ರ ಚಿತ್ರಣ ಸಮಸ್ಯೆಗಳ ಅರಿವಿದೆ. ಎಲ್ಲಾ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಆತ್ಮೀಯ ಒಡನಾಟ ಇದೆ. ನಾಲ್ವರು ಶಾಸಕರು ಕಾಂಗ್ರೆಸ್‌ನವರೇ ಇರುವುದು ಹೆಗ್ಡೆ ಅವರಿಗೆ ವರ. ಆದರೆ ಕಾಂಗ್ರೆಸ್‌ನಿಂದ ಪ್ರಬಲ ಆಕಾಂಕ್ಷಿಗಳಾಗಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಸುಧೀರ್‌ಕುಮಾರ್ ಮುರೊಳ್ಳಿ ಮತ್ತು ಈ ಇಬ್ಬರ ಬೆಂಬಲಕ್ಕೆ ನಿಂತಿದ್ದ ಶಾಸಕರ ವಿಶ್ವಾಸ ಗಳಿಸುವ ಸವಾಲು ಹೆಗ್ಡೆ ಅವರಿಗೆ ಇದೆ.

ಕಷ್ಟದ ಸಮಯದಲ್ಲಿ ಪಕ್ಷ ಬಿಟ್ಟಿದ್ದರು ಎಂಬ ಬೇಸರವೂ ಕಾರ್ಯಕರ್ತರಲ್ಲಿದೆ. ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲೆಯ ರಾಜಕಾರಣಕ್ಕೆ ಹೊಸಬರು. ಶೋಭಾ ಕರಂದ್ಲಾಜೆ ಅವರಿಗೆ ಈ ಕ್ಷೇತ್ರದ ಟಿಕೆಟ್ ನೀಡದೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯಕ್ಕೆ ಪಕ್ಷ ಮನ್ನಣೆ ನೀಡಿರುವುದು ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ. ಆದರೆ ಸ್ಥಳೀಯರಿಗೆ ಟಿಕೆಟ್ ನೀಡಲಿಲ್ಲ ಎಂಬ ಬೇಸರವೂ ಕಾರ್ಯಕರ್ತರಲ್ಲಿ ಇದೆ.

ಅವರ ವಿಶ್ವಾಸ ಗಳಿಸುವ ಸವಾಲು ಪೂಜಾರಿ ಅವರಿಗೆ ಇದೆ. ಲೋಕಸಭೆ ಚುನಾವಣೆ ಆಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಮೇಲೆಯೂ ಮತ ಸೆಳೆಯುವ ಶಕ್ತಿ ಪಕ್ಷಕ್ಕೆ ಇದೆ. ಬಿಜೆಪಿ– ಜೆಡಿಎಸ್‌ ಮೈತ್ರಿಯಾಗಿದ್ದರೂ ಬಹಿರಂಗವಾಗಿ ಒಟ್ಟಿಗೆ ಪ್ರಚಾರ ಸಭೆಗಳು ಇನ್ನೂ ನಡೆದಿಲ್ಲ. ಜೆಡಿಎಸ್ ಕಾರ್ಯಕರ್ತರು ಈ ಬಾರಿ ಯಾರ ಪರ ಇರಲಿದ್ದಾರೆ ಎಂಬುದೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಬಿಜೆಪಿ ಅಭ್ಯರ್ಥಿ ಆಗಲೇ ಪ್ರಚಾರ ಆರಂಭಿಸಿದ್ದರೆ ಚುನಾವಣೆ ಸಂಬಂಧ ಕಾಂಗ್ರೆಸ್‌ ಇನ್ನೂ ಒಂದೇ ಒಂದು ಬಹಿರಂಗ ಸಭೆಯನ್ನೂ ನಡೆಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.