ADVERTISEMENT

PV Web Exclusive: ಬಯಲು ರಂಗಭೂಮಿಯ ಸುವರ್ಣ ಸಂಭ್ರಮಕ್ಕೆ ನಾಟಕ ಬೆಂಗ್ಳೂರು ಸಜ್ಜು

ಮಂಜುಶ್ರೀ ಎಂ.ಕಡಕೋಳ
Published 8 ಫೆಬ್ರುವರಿ 2021, 7:37 IST
Last Updated 8 ಫೆಬ್ರುವರಿ 2021, 7:37 IST
ಪಿ. ಲಂಕೇಶ್
ಪಿ. ಲಂಕೇಶ್   

‘ಆ ಕಾಲವೊಂದಿತ್ತು. ದಿವ್ಯವೇ ತಾನಾಗಿತ್ತು...’ ಅನ್ನುವಂಥ ಕಾಲವದು. 70ರ ದಶಕದ ಕಾಲವದು. ಬೆಂಗಳೂರಿನಲ್ಲಿ ಹವ್ಯಾಸಿ ರಂಗಭೂಮಿ ಪ್ರವರ್ಧಮಾನಕ್ಕೆ ಬರುತ್ತಿದ್ದ ದಿನಗಳವು. ಒಂದೆಡೆ ಆಗಷ್ಟೇ ರಾಜಧಾನಿಗೆ ಬಂದಿದ್ದ ಸಾಹಿತಿ ಡಾ.ಚಂದ್ರಶೇಖರ ಕಂಬಾರರು, ಮತ್ತೊಂದೆಡೆ ಸಾಹಿತ್ಯ–ಪತ್ರಿಕೋದ್ಯಮದಲ್ಲಿ ಬೆಂಕಿಯ ಚೆಂಡಿನಂತಿದ್ದ ಪಿ. ಲಂಕೇಶರು, ಇನ್ನೊಂದೆಡೆ ಬಿ.ವಿ.ಕಾರಂತ ಅವರಂಥ ರಂಗದಿಗ್ಗಜ.

ಆ ದಿನಗಳಲ್ಲಿ ಲಂಕೇಶ್ ಅವರ ಸಾರಥ್ಯದಲ್ಲಿ ಪ್ರತಿಮಾ ನಾಟಕ ರಂಗ ಆರಂಭವಾಗಿದ್ದರೆ, ಆರ್. ನಾಗೇಶ ಅವರು ಕರ್ನಾಟಕ ಸಾಹಿತ್ಯ ಕಲಾ ಸಂಘ ಮಾಡಿಕೊಂಡು ಸಕ್ರಿಯರಾಗಿದ್ದರು. ರಾಜಧಾನಿಯಲ್ಲಿ ನಾಟಕಕಾರರು, ರಂಗನಿರ್ದೇಶಕರು ಸೇರಿದರೆ ಸುಮ್ಮನಿರುತ್ತಾರೆಯೇ? 1972ರ ಫೆಬ್ರುವರಿ 11, 12,13ರಂದು ಲಂಕೇಶ ಅವರ ನೇತೃತ್ವದಲ್ಲಿ ಬಯಲು ರಂಗಭೂಮಿ ನಾಟಕೋತ್ಸವ ಆಯೋಜನೆಯಾಯಿತು.

ಆಗಷ್ಟೇ ಬೆಂಗಳೂರಿಗೆ ಬಂದಿದ್ದ ಡಾ.ಚಂದ್ರಶೇಖರ ಕಂಬಾರ ಅವರು ಅಪ್ಪಟ ದೇಸಿಸೊಗಡಿನ ‘ಜೋಕುಮಾರಸ್ವಾಮಿ’ ನಾಟಕ ಬರೆದರೆ, ಪಿ. ಲಂಕೇಶ ಅವರು ದೊರೆ ಈಡಿಪಸ್‌ನನ್ನು ಕನ್ನಡಕ್ಕೆ ಕರೆತಂದರು. ಅಷ್ಟೇ ಅಲ್ಲ, ಅವರನ್ನು ತೀವ್ರವಾಗಿ ಕಾಡಿದ್ದ ವಚನ ಚಳವಳಿ, ಬಸವ ಪ್ರಜ್ಞೆಯನ್ನು ‘ಸಂಕ್ರಾಂತಿ’ಯಲ್ಲಿ ಕಟ್ಟಿಕೊಟ್ಟರು. ಒಂದೇ ವರ್ಷದಲ್ಲಿ ಆಧುನಿಕ ಕನ್ನಡ ರಂಗಭೂಮಿಗೆ ‘ಜೋಕುಮಾರ ಸ್ವಾಮಿ’, ‘ಸಂಕ್ರಾಂತಿ’, ‘ದೊರೆ ಈಡಿಪಸ್’ ನಾಟಕಗಳು ದೊರೆತವು. ದೆಹಲಿಯ ಎನ್‌ಎಸ್‌ಡಿಯಲ್ಲಿದ್ದ ರಂಗಕರ್ಮಿ ಬಿ.ವಿ. ಕಾರಂತ ಅವರನ್ನು ಬೆಂಗಳೂರಿಗೆ ಕರೆಸಿ ಮೂರೂ ನಾಟಕಗಳ ನಿರ್ದೇಶನದ ಜವಾಬ್ದಾರಿ ನೀಡಲಾಯಿತು. ತಾಲೀಮು ನಡೆದು ಮೂರೂ ನಾಟಕಗಳು ಯಶಸ್ವಿಯಾಗಿ ರಂಗದ ಮೇಲೆ ಪ್ರದರ್ಶನವಾದವು.

ADVERTISEMENT
ಬಿ.ವಿ. ಕಾರಂತ

ಅಂದು ರಾಜಧಾನಿಯ ಜನರನ್ನು ಕನ್ನಡ ರಂಗಭೂಮಿಯತ್ತ ಸೂಜಿಗಲ್ಲಿನಂತೆ ಸೆಳೆದಿದ್ದ ‘ಬಯಲು ರಂಗಭೂಮಿ’ಗೆ ಈಗ ಸುವರ್ಣ ಸಂಭ್ರಮ. ಈ ನಿಮಿತ್ತ ಈ ಬಾರಿಯ ‘ನಾಟಕ ಬೆಂಗ್ಳೂರು’ ತನ್ನ 13ನೇ ವರ್ಷದ ರಂಗ ಸಂಭ್ರಮವನ್ನು ‘ಬಯಲು ರಂಗಭೂಮಿ’ಯ ಸುವರ್ಣ ಸಂಭ್ರಮದೊಂದಿಗೆ ಆಚರಿಸುತ್ತಿದೆ.

‘1972ರಲ್ಲಿ ಲಂಕೇಶರ ನೇತೃತ್ವದಲ್ಲಿ ರೂಪುಗೊಂಡಿದ್ದ ಬಯಲು ರಂಗಭೂಮಿ ಒಂದು ರೀತಿಯಲ್ಲಿ ಕನ್ನಡ ಹವ್ಯಾಸಿ ರಂಗಭೂಮಿಗೆ ತಿರುವು ನೀಡಿತೆಂದೇ ಹೇಳಬಹುದು. ಬಯಲು ರಂಗಭೂಮಿ ನಾಟಕೋತ್ಸವದ ಬಳಿಕ ಬೆಂಗಳೂರಿನಲ್ಲಿ ‘ನಟರಂಗ’, ‘ಕಲಾಗಂಗೋತ್ರಿ’, ‘ಬೆನಕ’, ‘ರಂಗಸಂಪದ’ ಆಮೇಲೆ ‘ಸಮುದಾಯ’ ರೂಪುಗೊಂಡವು. ಒಂದರ್ಥದಲ್ಲಿ ಇವುಗಳಿಗೆ ಬಯಲು ರಂಗೋತ್ಸವ ಪ್ರೇರಣೆಯಾಯಿತು’ ಎಂದು ಅಂದಿನ ನೆನಪುಗಳನ್ನು ಮೆಲುಕು ಹಾಕುತ್ತಾರೆ ಹಿರಿಯ ರಂಗಕರ್ಮಿಗಳು.

ಅಂದಿನ ನಟ ವರ್ಗ–ನೇಪಥ್ಯ

‘ಜೋಕುಮಾರ ಸ್ವಾಮಿ’ಯಲ್ಲಿ ಗಿರೀಶ ಕಾರ್ನಾಡ್ ‘ಗೌಡ’ನಾಗಿ ಅಭಿನಯಿಸಿದ್ದರೆ, ಅವರೊಂದಿಗೆ ಟಿ.ಎಸ್. ನಾಗಾಭರಣ, ಉಮೇಶ ರುದ್ರ, ಎನ್.ಕೆ. ಮೋಹನರಾಂ, ಎಲ್. ಕೃಷ್ಣಪ್ಪ, ಗಿರಿಜಾ ಲೋಕೇಶ್, ಶಾರದಾ ರುದ್ರ, ಎಲ್. ಕೃಷ್ಣಪ್ಪ ಮತ್ತಿತರರು ಅಭಿನಯಿಸಿದ್ದರು. ಮೇಳದಲ್ಲಿ ಚಂದ್ರಶೇಖರ ಕಂಬಾರ, ಬಿ.ವಿ. ಕಾರಂತ, ದೊಡ್ಡರಂಗೇಗೌಡ ಮತ್ತಿತರರು ಇದ್ದರು. ‘ಸಂಕ್ರಾಂತಿ’ಯಲ್ಲಿ ‘ಉಜ್ಜ’ ಪಾತ್ರದಲ್ಲಿ ಬಿ.ವಿ. ಕಾರಂತ, ‘ಕೆಂಚ’ನಾಗಿ ಎಚ್.ಜಿ. ಸೋಮಶೇಖರರಾವ್, ‘ಉಷಾ’ ಪಾತ್ರದಲ್ಲಿ ವೈಶಾಲಿ ಇದ್ದರು. ಆಗಿನ್ನೂ ವೈಶಾಲಿ ಅವರು ‘ಕಾಸರವಳ್ಳಿ’ ಆಗಿರಲಿಲ್ಲ. ಮೂರು ನಾಟಕಗಳ ರಂಗ ಮತ್ತು ಬೆಳಕಿನ ವಿನ್ಯಾಸ ವಿ. ರಾಮಮೂರ್ತಿ ಅವರದ್ದಾಗಿತ್ತು. ಎನ್‌ಎಸ್‌ಡಿಯಿಂದ ಬಂದಿದ್ದ ಅವರು ಆಗಷ್ಟೇ ವಿದೇಶಕ್ಕೂ ಹೋಗಿ ಬೆಳಕಿನ ವಿನ್ಯಾಸ ಅಧ್ಯಯನ ಮಾಡಿಕೊಂಡು ಬಂದಿದ್ದರು. ಹೀಗೆ ಕನ್ನಡ ರಂಗಭೂಮಿಯ ಮುಖ್ಯ ನಾಟಕಕಾರರು, ನಿರ್ದೇಶಕ, ನೇಪಥ್ಯ ಕಲಾವಿದರು ಸೇರಿಕೊಂಡು ಮಾಡಿದ್ದ ಬಯಲು ರಂಗಭೂಮಿ ನಾಟಕೋತ್ಸವದ ನೆನಪುಗಳು ಇಂದಿಗೂ ಹಿರಿಯ ರಂಗಪ್ರೇಮಿಗಳ ಭಿತ್ತಿಯಲ್ಲಿ ಹಸಿರಾಗಿದೆ.

ಅಂದಿನ ನಾಟಕಗಳು ಇಂದಿಗೆ

13ನೇ ವರ್ಷದ ಸಂಭ್ರಮದಲ್ಲಿರುವ ‘ನಾಟಕ ಬೆಂಗ್ಳೂರು’ ಫೆ. 13, 14 ಮತ್ತು 15ರಂದು ಬಯಲು ರಂಗಭೂಮಿ ಸುವರ್ಣ ಸಂಭ್ರಮ ಆಚರಿಸುತ್ತಿದೆ. ಆಗ ಪ್ರದರ್ಶನವಾಗಿದ್ದ ಮೂರೂ ನಾಟಕಗಳ ಪ್ರದರ್ಶನವೂ ನಡೆಯಲಿದೆ. ಬಯಲು ರಂಗೋತ್ಸವದಲ್ಲಿ ಪಾಲ್ಗೊಂಡಿದ್ದ ರಂಗಕರ್ಮಿಗಳು ಫೆ. 14ರಂದು ನಡೆಯುವ ಕಾರ್ಯಕ್ರಮದಲ್ಲಿ ಅಂದಿನ ನೆನಪುಗಳನ್ನು ಮೆಲುಕುಹಾಕಲಿದ್ದಾರೆ. ಅಂದು ಅವರಿಗೆ ಗೌರವ ಸಮರ್ಪಣೆಯೂ ನಡೆಯಲಿದೆ.

ಚಂದ್ರಶೇಖರ ಕಂಬಾರ

1972ರಲ್ಲಿ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿದ್ದರು. ಆ ಸಂದರ್ಭದಲ್ಲಿ ಅವರೊಂದು ಸೆಮಿನಾರ್ ಕೂಡಾ ಆಯೋಜಿಸಿ ಆ ನೆನಪಿಗೆ ಪುಸ್ತಕವನ್ನೂ ತಂದಿದ್ದರು. ಅದಕ್ಕೆ ಅವರೇ ಮುನ್ನುಡಿಯನ್ನೂ ಬರೆದಿದ್ದರು. ಆಗ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಡಾ.ಎಚ್. ನರಸಿಂಹಯ್ಯ ಕುಲಪತಿ ಆಗಿದ್ದರು. ರಂಗಕರ್ಮಿಗಳಾದ ಜಿ.ಕೆ. ಗೋವಿಂದರಾವ್, ಎಲ್. ಕೃಷ್ಣಪ್ಪ, ಜೆ. ಲೋಕೇಶ್, ಟಿ.ಎಸ್. ನಾಗಾಭರಣ, ಎನ್.ಕೆ. ಮೋಹನರಾಂ, ಟಿ.ಎನ್. ಸೀತಾರಾಂ, ರಾಮಚಂದ್ರ ಮೂರ್ತಿ,ರಾಮಕೃಷ್ಣಮೂರ್ತಿ ಇವರೆಲ್ಲಾ ಬಯಲು ರಂಗೋತ್ಸವದಲ್ಲಿ ಪಾಲ್ಗೊಂಡಿದ್ದರು. ಆ ದಿನಗಳ ಸುವರ್ಣ ಸಂಭ್ರಮಕ್ಕಾಗಿ ಹಳೆಯ ನೆನಪುಗಳ ಕುರಿತಾಗಿ ಪುಸ್ತಕವೊಂದನ್ನು ‘ನಾಟಕ ಬೆಂಗ್ಳೂರು’ ಹೊರತರುತ್ತಿದೆ.

24 ನಾಟಕಗಳ ರಂಗಸುಗ್ಗಿ

ಈ ಬಾರಿ ನಾಟಕ ಬೆಂಗ್ಳೂರು ಫೆ. 8ಕ್ಕೆ ಶುರುವಾಗಿ ಮಾರ್ಚ್ 10ಕ್ಕೆ ಮುಕ್ತಾಯವಾಗಲಿದೆ. ಒಟ್ಟು 28 ದಿನಗಳ ರಂಗ ಸಂಭ್ರಮದಲ್ಲಿ 24 ನಾಟಕಗಳು ಪ್ರದರ್ಶನವಾಗಲಿವೆ. ಫೆ. 8ರಂದು ಸಂಜೆ 6ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಹಿರಿಯ ನಟ ‘ಮುಖ್ಯಮಂತ್ರಿ’ ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಅತಿಥಿಗಳಾಗಿ ಪಾಲ್ಗೊಳ್ಳುವರು. ಅಂದು ‘ಕಲಾಗಂಗೋತ್ರಿ’ ತಂಡವು ‘ಮೂಕಜ್ಜಿಯ ಕನಸುಗಳು’ ನಾಟಕ ಪ್ರದರ್ಶಿಸಲಿದೆ.

ಹೆಚ್ಚಿನ ಮಾಹಿತಿ ಮತ್ತು ಸಂಪರ್ಕಕ್ಕೆ: 94485 42411, 94480 69667.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.