ADVERTISEMENT

ಒಳನೋಟ: ಭೂ ಪರಿಹಾರದಲ್ಲಿ ನುಸುಳಿದ ರಾಜಕಾರಣ ಬೈರಗೊಂಡ್ಲು ಜಲಾಶಯಕ್ಕೆ ನಾನಾ ಅಡ್ಡಿ

ಮಂಜುನಾಥ್ ಹೆಬ್ಬಾರ್‌
Published 7 ಮಾರ್ಚ್ 2020, 20:34 IST
Last Updated 7 ಮಾರ್ಚ್ 2020, 20:34 IST
ಬೇಲೂರು ತಾಲ್ಲೂಕಿನ ಗಂಗೂರು ಮತ್ತು ಬೆಟ್ಟದಾಲೂರು ಬಳಿ ಸುರಂಗದ ಮೂಲಕ ನೀರನ್ನು ಹರಿಸಲು ಕಾಮಗಾರಿ ನಡೆಯುತ್ತಿದೆ.  –ಪ್ರಜಾವಾಣಿ ಚಿತ್ರ: ಬಿ.ಎಂ.ರವೀಶ್‌
ಬೇಲೂರು ತಾಲ್ಲೂಕಿನ ಗಂಗೂರು ಮತ್ತು ಬೆಟ್ಟದಾಲೂರು ಬಳಿ ಸುರಂಗದ ಮೂಲಕ ನೀರನ್ನು ಹರಿಸಲು ಕಾಮಗಾರಿ ನಡೆಯುತ್ತಿದೆ.  –ಪ್ರಜಾವಾಣಿ ಚಿತ್ರ: ಬಿ.ಎಂ.ರವೀಶ್‌   
""
""
""

ಬೆಂಗಳೂರು: ಯೋಜನೆಯ ಪ್ರಮುಖ ಘಟ್ಟ ಹಾಗೂ ಬರದಿಂದ ಕಂಗೆಟ್ಟ ಚಿಕ್ಕಬಳ್ಳಾಪುರ–ಕೋಲಾರ ಜಿಲ್ಲೆಗೆ ನೀರು ಒದಗಿಸಬೇಕಾದರೆ ನಿರ್ಮಾಣವಾಗಲೇಬೇಕಾದ ಬೈರಗೊಂಡ್ಲು ಜಲಾಶಯಕ್ಕೆ ಹಲವು ಅಡ್ಡಿ ಆತಂಕಗಳು ಎದುರಾಗಿವೆ.

ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಸೇರುವ ಜಾಗದಲ್ಲಿ 5.87 ಟಿಎಂಸಿ ಅಡಿ ನೀರು ಸಂಗ್ರಹಿಸುವ ಜಲಾಶಯ ನಿರ್ಮಾಣವಾಗಬೇಕಿದೆ. ಜಲಾಶಯ ನಿರ್ಮಾಣಕ್ಕೆ ಈಗಲೇ ಕಾಮ ಗಾರಿ ಗುತ್ತಿಗೆ ನೀಡಿದರೆ ₹592 ಕೋಟಿ ಬೇಕು. ಆದರೆ, ಜಲಾಶಯ ನಿರ್ಮಾಣಕ್ಕೆ ಬೇಕಿರುವ ಜಮೀನು ಹಾಗೂ ಮುಳುಗಡೆಯಾಗಲಿರುವ ಜಮೀನಿನ ಮಾಲೀಕ ರಿಗೆ ನೀಡಬೇಕಾದ ಪರಿಹಾರ ಮೊತ್ತದ ಗೊಂದಲ ಈಗ ಯೋಜನೆಯ ಪಾಲಿಗೆ ದೊಡ್ಡ ಬೆಟ್ಟದಂತೆ ಅಡ್ಡಿಯಾಗಿ ಬಿಟ್ಟಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ 11 ಗ್ರಾಮ ಹಾಗೂ ಕೊರಟಗೆರೆ ತಾಲ್ಲೂಕಿನ 17 ಗ್ರಾಮಗಳ ಒಟ್ಟು 5078 ಎಕರೆ ಭೂಮಿ ಇದಕ್ಕಾಗಿ ಬೇಕಾಗಿದೆ. ಕೊರಟ ಗೆರೆ ಶಾಸಕರಾಗಿರುವ ಜಿ. ಪರಮೇಶ್ವರ ಅವರು ಹಿಂದೆ ಉಪಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷರಾಗಿದ್ದಾಗ ಹಾಕಿದ ಪಟ್ಟಿನಿಂದಾಗಿ ಯೋಜನೆಗೆ ಹಿನ್ನಡೆಯುಂಟಾಗಿದೆ.

ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿ ರುವ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಭೂಮಿಯ ಬೆಲೆ ಹೆಚ್ಚಿದೆ. ಮಾರ್ಗಸೂಚಿ ದರದ(ಎಕರೆಗೆ ₹8 ಲಕ್ಷ) ನಾಲ್ಕು ಪಟ್ಟು ಮೊತ್ತದ ಪರಿಹಾರದ ಲೆಕ್ಕದಲ್ಲಿ ಇಲ್ಲಿ ಎಕರೆಗೆ ₹32 ಲಕ್ಷ ನಿಗದಿ ಮಾಡ ಲಾಗಿತ್ತು. ಪರಮೇಶ್ವರ ಅವರು, ಒಂದೇ ಯೋಜನೆಗೆ ಪರಿಹಾರ ನೀಡುವಾಗ ತಾರತಮ್ಯ ಮಾಡಬಾರದು ಎಂದು ಹಠ ಹಿಡಿದರು. ಮಾರ್ಗಸೂಚಿ ದರ(ಎಕರೆಗೆ ₹5 ಲಕ್ಷ)ದಂತೆ ಎಕರೆಗೆ ₹20 ಲಕ್ಷದ ಬದಲು ₹32 ಲಕ್ಷವೇ ಬೇಕು ಎಂದು ಪಟ್ಟು ಹಿಡಿದರು. ಆಯಾ ಪ್ರದೇಶದ ಮಾರ್ಗಸೂಚಿ ದರದ ನಾಲ್ಕು ಪಟ್ಟು ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶ ಇದ್ದು, ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಏಕ ರೂಪ ದರದಲ್ಲಿ ಪರಿಹಾರ ನೀಡಲು ಅವಕಾಶ ಇರುವುದಿಲ್ಲ ಎಂಬುದು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳ ಅಭಿಪ್ರಾಯ.

ಈ ಬಗ್ಗೆ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗಿತ್ತೇ ವಿನಃ ಸಮಿತಿ ನಿರ್ಣಯಕೈಗೊಂಡು ಅದನ್ನು ಸಚಿವ ಸಂಪುಟಕ್ಕೆ ಮಂಡಿಸಿರಲಿಲ್ಲ. ಭೂ ಪರಿಹಾರ ಕಾಯ್ದೆ ಅನ್ವಯ ಏಕರೂಪದ ಪರಿಹಾರ ನೀಡಿ ಐತೀರ್ಪು ರಚಿಸಲು ಅವಕಾಶ ಇಲ್ಲ. ಈ ಯೋಜನೆಯಲ್ಲಿ ಏಕರೂಪದ ಪರಿಹಾರ ಕೊಡಲು ಸರ್ಕಾರ ತೀರ್ಮಾ ನಿಸಿದರೆ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3ರಲ್ಲಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೂ ಇದು ಅನ್ವಯವಾಗಲಿದೆ. ಈ ಯೋಜನೆಯಲ್ಲಿ ₹20 ಲಕ್ಷದಿಂದ ₹32 ಲಕ್ಷಕ್ಕೆ ಪರಿಹಾರ ಮೊತ್ತ ಏರಿಸಿದರೆ ₹320 ಕೋಟಿ ಹೆಚ್ಚುವರಿ ಹೊರಬೀಳಲಿದೆ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ₹50 ಸಾವಿರ ಕೋಟಿ ನೀಡಬೇಕಾದ ಪರಿಹಾರ ಮೊತ್ತ ₹70 ಸಾವಿರ ಕೋಟಿಗೆ ಏರುತ್ತದೆ.

ಇದು ಇತ್ಯರ್ಥವಾಗದೇ ಇರು ವುದರಿಂದಾಗಿ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿದೆ. ಪರಮೇಶ್ವರ ಅವರು ಹಿಂದೆ ನೀಡಿದ ಆಶ್ವಾಸನೆಯಿಂದಾಗಿ ರೈತರು ಈಗ ಕಡಿಮೆ ಪರಿಹಾರಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಭೂ ಸ್ವಾಧೀನ ವಿಳಂಬವಾದರೆ ಜಲಾಶಯ ನಿರ್ಮಾಣ, ನಾಲೆ, ಫೀಡರ್‌ ನಿರ್ಮಾಣ ಕಾಮಗಾರಿಗಳ ವೆಚ್ಚವೂ ವರ್ಷದಿಂದ ವರ್ಷಕ್ಕೆ ಶೇ 5ರಿಂದ ಶೇ 10ರವರೆಗೆ ಹೆಚ್ಚಳವಾಗುತ್ತಲೇ ಹೋಗುತ್ತದೆ. ಯೋಜನೆ ಅನುಷ್ಠಾನವೂ ವಿಳಂಬವಾಗುತ್ತದೆ ಎಂಬುದು ಅಧಿಕಾರಿಗಳ ಆತಂಕ.

ಯೋಜನೆಯ ವೃತ್ತಾಂತ
ಬರದ ಬೇಗೆಯಿಂದ ಬಳಲುತ್ತಾ, ಕುಡಿಯುವ ನೀರಿಗೂ ಹಾಹಾಕಾರ ಪಡುತ್ತಿರುವ ಬಯಲುನಾಡಿನ ಜಿಲ್ಲೆಗಳಿಗೆ ನೀರೊದಗಿಸುವ ಆಶಯದಿಂದ ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಈ ಯೋಜನೆ ರೂಪಿಸಿದರು.

ನೇತ್ರಾವತಿ ಹಾಗೂ ಕುಮಾರಧಾರ ನದಿಗಳಿಗೆ ನೀರೊದಗಿಸುವ ಐದು ಹಳ್ಳಗಳ ನೀರನ್ನು ಬಯಲುನಾಡಿನ ಕಡೆಗೆ ಹರಿಯಿಸುವ ಯೋಜನೆ ಇದು. ಹಾಗಂತ ನೇತ್ರಾವತಿ, ಕುಮಾರಧಾರಾ ತಿರುವು ಯೋಜನೆ ಇದಲ್ಲ. ಏಕೆಂದರೆ ವಾರ್ಷಿಕ ಸರಾಸರಿ ನೇತ್ರಾವತಿಯಲ್ಲಿ 548 ಟಿಎಂಸಿ ಅಡಿ ಹಾಗೂ ಕುಮಾರಧಾರಾದಲ್ಲಿ 220 ಟಿಎಂಸಿ ಅಡಿ ನೀರಿನ ಹರಿವು ಇದೆ. ಈ ಪೈಕಿ ಎತ್ತಿನ ಹೊಳೆಗೆ ಬಳಕೆಯಾಗುತ್ತಿರುವುದು 24.01 ಟಿಎಂಸಿ ಅಡಿ ಮಾತ್ರ. ಅಂದರೆ 768 ಟಿಎಂಸಿ ಅಡಿಯಲ್ಲಿ ಅತ್ಯಲ್ಪ ನೀರನ್ನು ಮಾತ್ರ ಪೂರ್ವದ ಕಡೆಗೆ ಹರಿಸಲಾಗುತ್ತದೆ.

ಎತ್ತಿನಹೊಳೆ ಯೋಜನೆಗೆ ಕೆಂಪುಹೊಳೆ, ಹೊಂಗದ ಹಳ್ಳ, ಕೇರಿಹೊಳೆ, ಕಾಡುಮನೆ ಹೊಳೆ–1,2 ಹಾಗೂ ಎತ್ತಿನ ಹೊಳೆಯ ಎರಡು ಉಪಹೊಳೆಗಳ ನೀರನ್ನು ಬಳಸಿಕೊಳ್ಳಲಾಗುತ್ತದೆ. ಜಲಾನಯನ ಪ್ರದೇಶದಲ್ಲಿ ಲಭ್ಯವಾಗುವ 34.26 ಟಿಎಂಸಿ ಅಡಿ ನೀರಿನ ಪೈಕಿ 24.01 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತದೆ.

ಹೊಳೆಗಳ ಹರಿವಿನ ಮಧ್ಯೆ ಕಿರು ಕಟ್ಟೆ ಕಟ್ಟಿ ಸುಮಾರು 940 ಅಡಿ ಎತ್ತರಕ್ಕೆ ಪಂಪ್‌ ಮಾಡಿ ನೀರು ಹರಿಸಲಾಗು ತ್ತದೆ. ಸಕಲೇಶಪುರ ತಾಲ್ಲೂಕಿನಿಂದ ಕೋಲಾರದ ಶ್ರೀನಿ ವಾಸಪುರದವರೆಗೆ ನಾನಾ ಹಂತಗಳಲ್ಲಿ ಯೋಜನೆ ಅನು ಷ್ಠಾನ ವಾಗಬೇಕಿದೆ. 260 ಕಿ.ಮೀ ಉದ್ದ ತೆರೆದ ಕಾಲುವೆ ಹಾಗೂ ಪೈಪ್‌ಲೈನ್ ಮೂಲಕ ನೀರು ಹರಿಯುತ್ತದೆ. ಕಾಲುವೆಯ ಮಾರ್ಗದುದ್ದಕ್ಕೂ ಬರುವ ತಾಲ್ಲೂಕುಗಳ ಕೆರೆ ತುಂಬಿಸುವುದು ಯೋಜನೆಯ ರೂಪುರೇಷೆ.

ಒಮ್ಮೆ ಏತನೀರಾವರಿ ಮೂಲಕ ನೀರೆತ್ತಿ ನಾಲೆಗೆ ಹರಿಸಿದರೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ ನಿರ್ಮಾಣವಾ ಗಲಿರುವ ಬೈರಗೊಂಡ್ಲು ಜಲಾಶಯದವರೆಗೆ ನೀರು ಗುರುತ್ವಾಕರ್ಷಣೆ ಬಲದ ಮೇಲೆ ಹರಿಯಲಿದೆ. ಕುಂದಣ ಎಂಬಲ್ಲಿ 70–80 ಮೀಟರ್ ನೀರನ್ನು ಮತ್ತೆ ಪಂಪ್‌ ಮೂಲಕ ಮೇಲೆತ್ತಿ ಚಿಕ್ಕಬಳ್ಳಾಪುರ–ಕೋಲಾರ ಜಿಲ್ಲೆಗೆ ಹರಿಸಲಾಗುತ್ತದೆ. ಬೈರಗೊಂಡ್ಲುವಿನವರೆಗೆ ಕಾಮಗಾರಿ ಅಂತಿಮಗೊಂಡಿದ್ದು, ಜಲಾಶಯ ಕಾಮಗಾರಿ ಗುತ್ತಿಗೆ ನೀಡಬೇಕಿದೆ. ಕೋಲಾರ–ಚಿಕ್ಕಬಳ್ಳಾಪುರ ನಾಲೆ ಮತ್ತು ಫೀಡರ್ ಕಾಲುವೆಗಳ ಅಂದಾಜು ಪ್ರಕ್ರಿಯೆ ಸದ್ಯ ನಡೆಯುತ್ತಿದೆ.

ಇಪಿಸಿ: ಕೊಳ್ಳೆಗೆ ಒಳ್ಳೆದಾರಿ
ರಾಜ್ಯ ಸರ್ಕಾರ ಇತ್ತೀಚಿನ ವರ್ಷಗ ಳಲ್ಲಿ ಎಲ್ಲ ಯೋಜನೆಗಳನ್ನೂ ಎಂಜಿನಿ ಯರಿಂಗ್‌, ಪ್ರೊಕ್ಯೂರ್‌ಮೆಂಟ್, ಕನ್‌ಸ್ಟ್ರ ಕ್ಷನ್‌(ಇಪಿಸಿ) ಆಧಾರದಲ್ಲಿ ನೀಡುತ್ತಿದೆ. ದುಡ್ಡು ಹೊಡೆಯಲು ಇದೊಂದು ಅನುಕೂಲಕಾರಿ ಕಳ್ಳಮಾರ್ಗವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಡಿಪಿಆರ್ ಆದ ಬಳಿಕ ನಿರ್ದಿಷ್ಟ ಕಾಮಗಾರಿಯನ್ನು ವಿನ್ಯಾಸ, ಸಂಗ್ರಹಣೆ ಹಾಗೂ ನಿರ್ಮಾಣ(ಇಪಿಸಿ) ಲೆಕ್ಕಾಚಾರದಲ್ಲಿ ಟೆಂಡರ್ ಕರೆಯಲಾಗುತ್ತದೆ. ಉದಾಹರಣೆಗೆ, ಯೋಜನೆಯ 1 ಕಿ.ಮೀ ಯಿಂದ 10 ಕಿ.ಮೀವರೆಗೆ ಕಾಲುವೆ ಅಥವಾ ಪೈಪ್‌ಲೈನ್‌ ನಿರ್ಮಾ ಣದ ಒಂದು ಪ್ಯಾಕೇಜ್‌, 10ನೇ ಕಿ.ಮೀಯಿಂದ 20ನೇ ಕಿ.ಮೀವರೆಗೆ ಮತ್ತೊಂದು ಪ್ಯಾಕೇಜ್‌ ಗೊತ್ತು ಮಾಡಿ, ಎಸ್ಆರ್ ಹಾಗೂ ಡಿಪಿಆರ್ ಆಧರಿಸಿ ನಿರ್ದಿಷ್ಟ ಮೊತ್ತ ಗೊತ್ತು ಮಾಡಿ ಇಪಿಸಿ ಟೆಂಡರ್ ಕರೆಯಲಾಗುತ್ತದೆ.

ಟೆಂಡರ್ ಪ್ರಕ್ರಿಯೆ ಇ–ಪ್ರೊಕ್ಯೂರ್‌ಮೆಂಟ್‌ನಲ್ಲೇ ನಡೆಯುತ್ತದೆ. ನಿರ್ದಿಷ್ಟ ಅರ್ಹತೆಯ ಷರತ್ತು ವಿಧಿಸಿ ಬೇಕಾದವರಿಗೆ ಟೆಂಡರ್‌ ಕೊಡುವ ಮೂಲಕ ‘ಪರ್ಸಂಟೇಜ್‌’ ಹೊಡೆಯುವುದು ಒಂದು ಮಾರ್ಗ. ಹೀಗೆ ಮಾಡುವಾಗ ತಮಗೆ ಬೇಕಾದ ವರಿಗೆ ನೀಡಲು ಷರತ್ತು ವಿಧಿಸಲಾಗುತ್ತದೆ(ಬೆಳಗಾವಿಯ ಸುವರ್ಣಸೌಧ ಕಟ್ಟುವಾಗ ಇಂತಹದೇ ಮಾದರಿಯ ಕಟ್ಟಡ ಕಟ್ಟಿದ ಅನುಭವ ಇರಬೇಕು ಎಂಬ ಷರತ್ತು ಒಡ್ಡಿದಂತೆ). ಅದಾದ ಬಳಿಕ ಅತಿ ಕಡಿಮೆ ದರ(ಎಲ್‌–1) ನಮೂದಿಸಿದವರಿಗೆ ಕಾರ್ಯಾದೇಶ ನೀಡಲಾಗುತ್ತದೆ.

ಇದಾದ ಬಳಿಕ, ಕೈಚಳಕದ ಮತ್ತೊಂದು ದಾರಿ ತೆರೆದುಕೊಳ್ಳುತ್ತದೆ. ಟೆಂಡರ್ ಹಿಡಿದ ಗುತ್ತಿಗೆದಾರನೇ ವಿನ್ಯಾಸ ಮಾಡುವುದರಿಂದ 1ಕಿ.ಮೀ. ನಿಂದ 10 ಕಿ.ಮೀ ಪ್ಯಾಕೇಜ್ ಹಿಡಿದವನು 1ರಿಂದ 8ರವರೆಗೆ ಲೆಕ್ಕತೋರಿಸಿ ನಿರ್ಮಾಣ ಮಾಡುತ್ತಾನೆ. 10ಕಿ.ಮೀ ನಂತರದ ಪ್ಯಾಕೇಜ್ ಕೂಡ ಆತನೇ ಹಿಡಿದಿದ್ದಲ್ಲಿ 9ರಿಂದ 17 ಕಿ.ಮೀವರೆಗೆ ಅಥವಾ 18 ಕಿ.ಮೀ ವರೆಗೆ ಲೆಕ್ಕ ತೋರಿಸಿ ನಿರ್ಮಾಣ ಮಾಡುತ್ತಾನೆ. ಒಂದು ಕಿ.ಮೀಗೆ ನಾಲೆಗೆ₹ 3ಕೋಟಿ, ಪೈಪ್‌ಲೈನ್‌ಗಾದರೆ ₹11 ಕೋಟಿ ಹೆಚ್ಚುವರಿ ಪಾವತಿಸಿದಂ ತಾಗುತ್ತದೆ.

ಕಾರ್ಯಪಾಲಕ ಎಂಜಿನಿ ಯರ್‌ ಕಾಮಗಾರಿ ಸ್ಥಳದಲ್ಲಿ ಅಳತೆ ಮಾಡಿ ಅಳತೆ ಪುಸ್ತಕ(ಎಂ.ಬಿ)ದಲ್ಲಿ ಬರೆದ ಬಳಿಕವೇ ಬಿಲ್ ಅಂತಿಮಗೊಳ್ಳಬೇಕಾದುದು ನಿಯಮ. ಎಂಜಿ ನಿಯರ್‌, 2–3 ಪ್ಯಾಕೇಜ್ ಹಿಡಿದ ಗುತ್ತಿಗೆದಾರರು ಒಟ್ಟಾಗಿ ಇದನ್ನು ಮಾಡುವುದರಿಂದ ಯಾರೊಬ್ಬರೂ ಬಾಯಿಯನ್ನೇ ಬಿಡುವುದಿಲ್ಲ. ಪ್ಯಾಕೇಜ್‌ ನೀಡಿಕೆಯಲ್ಲಿ 1–2 ಕಿ.ಮೀ ವ್ಯತ್ಯಾಸ ಮಾಡಿದರೆ 260 ಕಿ.ಮೀ ಉದ್ದ ನಾಲೆ ನಿರ್ಮಾಣ ಮಾಡಿ, ಬಿಲ್ ಆಗುವಷ್ಟರಲ್ಲಿ ಏನಿಲ್ಲವೆಂದರೂ ಅದು 300 ಕಿ.ಮೀ ತಲುಪಿರುತ್ತದೆ. ರಸ್ತೆ, ಇತರೆ ಕಾಮಗಾರಿ
ಗಳಲ್ಲೂ ಹೀಗೆ ಮಾಡಲಾಗುತ್ತದೆ. ಕಾಮಗಾರಿ ಮಾಡದೆಯೇ ಹಣ ಮಾಡುವ ಸಲೀಸಿನ ದಾರಿ ದುಡ್ಡು ಕೊಳ್ಳೆಗೆ ರಹದಾರಿಯಾಗಿದೆ.

ಟೆಂಡರ್ ಪ್ಯಾಕೇಜ್‌ ವಿವರ, ಕಾರ್ಯಾದೇಶ, ಕಾಮಗಾರಿ ನಡೆಯುವ ಪಕ್ಕಾ ಸ್ಥಳ, ಎಂ.ಬಿ. ದಾಖಲೆ, ಕೊನೆಗೆ ಬಿಲ್ ಪಾವತಿ(ಲೆಟರ್ ಆಫ್ ಕ್ರೆಡಿಟ್‌–ಎಲ್‌ಒಸಿ) ಈ ಎಲ್ಲ ಪ್ರಕ್ರಿಯೆ ಮುಗಿಯಲು ಇಂತಹ ಯೋಜನೆಗಳಲ್ಲಿ ಐದಾರು ವರ್ಷ ಬೇಕು. ಟೆಂಡರ್ ಸಿದ್ಧಪಡಿಸಿದ ಎಂಜಿನಿಯರ್‌–ಗುತ್ತಿಗೆದಾ ರರಿಗೆ ಬಿಟ್ಟರೆ ಬೇರಾರಿಗೂ ಈ ಅಕ್ರಮದ ಸುಳಿವು ಕೂಡ ಸಿಗುವುದಿಲ್ಲ. ಒಂದು ವೇಳೆ ಎಲ್ಲ ದಾಖಲೆ ಸಿಕ್ಕಿದರೂ ಅಧ್ಯಯನ ಮಾಡಿ ಸಾಬೀತುಪಡಿಸಲು ಕನಿಷ್ಠ 2 ವರ್ಷ ಬೇಕಾಗುತ್ತದೆ. ಹೀಗಾಗಿ ಅಕ್ರಮ ಪತ್ತೆ ಉಸಾಬರಿಗೆ ಯಾರೂ ಹೋಗುವುದಿಲ್ಲ.

ಕಾಮಗಾರಿಗೆ ಭೂಸ್ವಾಧೀನವೇ ತೊಡಕು
ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯೇ ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಕೆಲವೆಡೆ ಒಂದಿಷ್ಟು ಭೂಮಿ ಸ್ವಾಧೀನಪಡಿಸಿಕೊಂಡಿದ್ದರೆ, ಇನ್ನೂ ಹಲವೆಡೆ ಈ ಪ್ರಕ್ರಿಯೆಗೆ ಚಾಲನೆಯೇ ಸಿಕ್ಕಿಲ್ಲ. ವಿವಿಧ ಜಿಲ್ಲೆಗಳ ಸ್ಥಿತಿಗತಿ ಹೀಗಿದೆ:

ಹಾಸನ: ಭೂಸ್ವಾಧೀನ ವಿವಾದದಿಂದ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಅರಸೀಕೆರೆ ಭಾಗದಲ್ಲಿ ಮೊದಲ ಹಂತದ ಕಾಮಗಾರಿ (ಪೈಪ್‌ ಅಳವಡಿಕೆ) ಮಂದಗತಿಯಲ್ಲಿ ಸಾಗುತ್ತಿದೆ.

ಸಕಲೇಶಪುರ ತಾಲ್ಲೂಕಿನಲ್ಲಿ 448.32 ಎಕರೆ ಭೂಮಿಯ ಅಗತ್ಯವಿದೆ. 400 ಎಕರೆಯನ್ನು ನೇರ ಖರೀದಿ ಮಾಡಲಾಗಿದ್ದು, ಅದಕ್ಕಾಗಿ ₹136 ಕೋಟಿ ಪರಿಹಾರವನ್ನು ಭೂ ಮಾಲೀಕರಿಗೆ ವಿಶ್ವೇಶ್ವರಯ್ಯ ಜಲ ನಿಗಮ ಪಾವತಿಸಿದೆ. ಇನ್ನು 48 ಎಕರೆ ಭೂಮಿಯನ್ನು ನೀಡಲು ಮಾಲೀಕರು ಒಪ್ಪಿಲ್ಲ. ಹಾಗಾಗಿ ಭೂಸ್ವಾಧೀನ ಕಾಯ್ದೆ ಪ್ರಕಾರ ಸ್ವಾಧೀನ ಪಡೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.‌

ಎರಡನೇ ಹಂತದಲ್ಲಿ ಅಂದರೆ ಒಟ್ಟು 100 ಕಿ.ಮೀ. ನಾಲೆ ನಿರ್ಮಾಣಕ್ಕೆ ಸಕಲೇಶಪುರ ತಾಲ್ಲೂಕಿನ 4 ಗ್ರಾಮ, ಆಲೂರು ತಾಲ್ಲೂಕಿನ 16 ಗ್ರಾಮ, ಬೇಲೂರು ತಾಲ್ಲೂಕಿನ 30 ಗ್ರಾಮ, ಅರಸೀಕೆರೆ ತಾಲ್ಲೂಕಿನ 25 ಗ್ರಾಮಗಳ ವ್ಯಾಪ್ತಿಯಲ್ಲಿ 2,769 ಎಕರೆ ಸ್ವಾಧೀನದ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು (ಭೂ ಸ್ವಾಧೀನ ಕಾಯ್ದೆ 19 (1) ಪ್ರಕ್ರಿಯೆ), ತಿಂಗಳಲ್ಲಿ ಪರಿಹಾರ ನಿಗದಿಯಾಗುವ ನಿರೀಕ್ಷೆ ಇದೆ.

ರಾಮನಗರ: ರಾಮನಗರ ಜಿಲ್ಲೆ ಯನ್ನು ಕೊನೆಯ ಹಂತದಲ್ಲಿ ಈ ಯೋಜನೆಯಡಿ ಸೇರಿಸಲಾಗಿದೆ. ಭೂಮಿ ಕೊಡಲು ಮುಂದೆ ಬಂದಿರುವ ಕೆಲವು ರೈತರ ಜತೆ ಮಾತುಕತೆ ಮಾತ್ರ ನಡೆದಿದೆ.

ತುಮಕೂರು: ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ತುಮ ಕೂರು ಗ್ರಾಮಾಂತರದಲ್ಲಿ ಕಾಮಗಾರಿ ಆರಂಭವಾಗಿದೆ. ಆದರೆ ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ತಾಲ್ಲೂಕು ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ. ಜಿಲ್ಲೆಯಲ್ಲಿ ಭೂಸ್ವಾಧೀನಕ್ಕೆ ₹ 2,470 ಕೋಟಿ ಅಗತ್ಯವಿದೆ. ಬಿಡುಗಡೆಯಾಗಿರುವುದು ₹ 120 ಕೋಟಿ ಮಾತ್ರ.

ತಿಪಟೂರು ತಾಲ್ಲೂಕಿನ ಕೊನೆಹಳ್ಳಿ ಸಮೀಪದ ಅಮೃತ್ ಮಹಲ್ ಪ್ರದೇಶದ 82 ಎಕರೆಯು ಅಮೃತ್ ಮಹಲ್ ರಾಸುಗಳ ಮೇವಿಗೆ, ಸಂತಾನೋತ್ಪತ್ತಿಗೆ ಮೀಸಲಿಡಲಾಗಿದೆ. ಇಲ್ಲಿ ಕಾಮಗಾರಿ ನಡೆಸುವುದನ್ನು ಪರಿಸರವಾದಿಗಳು ವಿರೋಧಿಸಿದ್ದಾರೆ.

ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಗಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೈರಗೊಂಡ್ಲು ಬಫರ್ ಡ್ಯಾಂಗೆ ಜಮೀನು ನೀಡಲು ಕೆಲವು ರೈತರು ವಿರೋಧಿಸುತ್ತಿದ್ದಾರೆ. ಗುಬ್ಬಿ ತಾಲ್ಲೂಕು ಚೇಳೂರುಬಳಿ 130 ಅಡಿ ಎತ್ತರದಲ್ಲಿ 10 ಕಿ.ಮೀ ಉದ್ದದ ಮೇಲ್ಗಾಲುವೆ ಕಾಮಗಾರಿ ನಡೆಯುತ್ತಿದೆ.

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈವರೆಗೆ ಒಂದೇ ಒಂದು ನಯಾಪೈಸೆಯ ಕಾಮಗಾರಿ ನಡೆದಿಲ್ಲ. ಜಿಲ್ಲೆಗೆ ಕುಡಿಯುವ ನೀರಿಗೆ 2.217 ಟಿಎಂಸಿ ಅಡಿ ಮತ್ತು 196 ಕೆರೆಗಳಿಗೆ 2.876 ಟಿಎಂಸಿ ಅಡಿ ನೀರು ಬರಬೇಕು.

‘ಮೂರು ತಿಂಗಳ ಹಿಂದೆ ಗೌರಿಬಿದ ನೂರು ತಾಲ್ಲೂಕಿನ 86 ಕೆರೆಗಳಿಗೆ ನೀರು ತುಂಬಿಸುವ ₹ 737 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್‌ ನಡೆದಿದೆ. ಸದ್ಯ, ಭೂಸ್ವಾಧೀನ ಪ್ರಕ್ರಿಯೆಗೆ ಸಮೀಕ್ಷೆ ನಡೆದಿದೆ’ ಎನ್ನುತ್ತಾರೆ ಅಧಿಕಾರಿಗಳು.

ಕೋಲಾರ: ಜಿಲ್ಲೆಯಲ್ಲಿ ಪೈಪ್‌ಲೈನ್‌ ಮಾರ್ಗದ ಸರ್ವೆ ಕಾರ್ಯಕ್ಕೆ ಗ್ರಹಣ ಬಡಿದಿದೆ. ಭೂಸ್ವಾಧೀನ ಪ್ರಕ್ರಿ ಯೆಗೆ ಚಾಲನೆಯೇ ದೊರೆತಿಲ್ಲ. ಯೋಜನೆ ಯಡಿ ಜಿಲ್ಲೆಗೆ 2.84 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಜಿಲ್ಲಾ ಕೇಂದ್ರದ ಬಾಡಿಗೆ ಕಟ್ಟಡದಲ್ಲಿ ಕಚೇರಿ ತೆರೆದಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕಾಮಗಾರಿ ನಡೆದಿಲ್ಲ.

***
ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ಮಧ್ಯೆ ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕಾಗಿ ಭೂಸ್ವಾಧೀನ ಆಗದೇ ಯೋಜನೆಗೆ ಹಿನ್ನಡೆ ಆಗಿದೆ. ರಾಜಕೀಯ ಮೇಲಾಟದಲ್ಲಿ ನೀರಿಲ್ಲದೆ ಕಂಗೆಟ್ಟಿರುವ ಆಂಧ್ರದ ಗಡಿ ಭಾಗದಲ್ಲಿರುವ ಗ್ರಾಮಗಳಿಗೆ ಹನಿ ನೀರು ಸಿಗುತ್ತದೆಯೋ ಇಲ್ಲವೊ ಎಂಬ ಆತಂಕ ಉಂಟಾಗಿದೆ. ಯೋಜನೆಗೆ ಈಗಾಗಲೇ ಕೊಟ್ಟಿರುವ ಹಣವೇ ಸಾಕಿತ್ತು. ₹1,500 ಕೋಟಿ ಬೇಕಿರಲಿಲ್ಲ. ಇದು ಯಾವ ಕಾರಣಕ್ಕಾಗಿಯೋ ಗೊತ್ತಿಲ್ಲ.
–ಕೆ.ಆರ್‌.ರಮೇಶ್‌ ಕುಮಾರ್‌,ಶ್ರೀನಿವಾಸಪುರ ಶಾಸಕ

**
ಭೂಮಿ ಬಿಟ್ಟು ಕೊಡುವ ತುಮಕೂರು ಜಿಲ್ಲೆ ರೈತರಿಗೆ ₹ 8 ಲಕ್ಷ ದೊಡ್ಡ ಬಳ್ಳಾಪುರ ರೈತರಿಗೆ ₹32 ಲಕ್ಷ ಪರಿಹಾರ ಕೊಡ
ಬೇಕು ಅಂತ ಆಯಿತು. ಅದು ವಿವಾದವಾಗಿತ್ತು. ಈಗ ಪರಿಹಾರ ಆಗುವ ಹಂತಕ್ಕೆ ಬಂದಿದೆ. ಎರಡೂ ಕಡೆಯವರಿಗೆ ಹೆಚ್ಚು ತಾರತಮ್ಯ ಆಗದಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಕಾಯ್ದೆ ತಿದ್ದುಪಡಿ ಅಗತ್ಯವಾಗಿದ್ದು ಆದಷ್ಟು ಬೇಗ ಮಾಡುತ್ತೇವೆ. ಎರಡು ವರ್ಷಗಳಲ್ಲಿ ಯೋಜನೆಯನ್ನು ಪೂರ್ಣ ಗೊಳಿಸುವ ಗುರಿಯಿದ್ದು ಕಾಲಮಿತಿಯಲ್ಲಿ ಕಾಮಗಾರಿ ಮುಗಿಸುತ್ತೇವೆ.
–ಜೆ.ಸಿ.ಮಾಧುಸ್ವಾಮಿ,ಕಾನೂನು, ಸಣ್ಣ ನೀರಾವರಿ ಸಚಿವ

**
ಸರ್ಕಾರ ಪಾರದರ್ಶಕವಾಗಿ ಕೇಂದ್ರೀಯ ಜಲ ಆಯೋಗ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈಡ್ರಾಲಾಜಿ ವತಿಯಿಂದ ಜಂಟಿಯಾಗಿ ಎತ್ತಿನಹೊಳೆ ಜಲಾನಯನ ಪ್ರದೇಶದ ಇಡೀ ಮಳೆಗಾಲದ ಮಳೆ ಪ್ರಮಾಣ ಮತ್ತು ನೀರಿನ ಲಭ್ಯತೆಯ ಮರು ಅಧ್ಯಯನ ಮಾಡಿಸಿ ಸತ್ಯಾಂಶವನ್ನು ಜನಸಾಮಾನ್ಯರ ಮುಂದಿಡಬೇಕು. ಯೋಜನೆಯ ಅಂಚಿನ ಪ್ರದೇಶಗಳಾದ ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡಬಾರದು.
–ಆಂಜನೇಯ ರೆಡ್ಡಿ,ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.