ADVERTISEMENT

IPL 2021: ಗೆಲ್ಲುವ ಪಂದ್ಯಗಳಲ್ಲಿ ಪದೇ ಪದೇ ಸೋಲಿನಿಂದ ಕಂಗೆಟ್ಟ ಅನಿಲ್ ಕುಂಬ್ಳೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2021, 10:33 IST
Last Updated 22 ಸೆಪ್ಟೆಂಬರ್ 2021, 10:33 IST
ಅನಿಲ್‌ ಕುಂಬ್ಳೆ
ಅನಿಲ್‌ ಕುಂಬ್ಳೆ    

ದುಬೈ: ‘ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ಎದುರಾಳಿ ತಂಡದ ವಿರುದ್ಧ ಗೆಲುವು ಸಾಧಿಸುವ ಹಂತದಲ್ಲಿ ಪದೇ ಪದೇ ಸೋಲೊಪ್ಪಿಕೊಳ್ಳುತ್ತಿರುವುದು ಬೇಸರ ಮೂಡಿಸಿದೆ’ ಎಂದು ತಂಡ ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ ಹೇಳಿದ್ದಾರೆ.

ಮಂಗಳವಾರ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ನಡೆದ ಐಪಿಎಲ್‌ ಟೂರ್ನಿಯ 32ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ 2 ರನ್‌ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತ್ತು.

ಪಂದ್ಯ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಸ್ಥಾನ್‌ ವಿರುದ್ಧ ಗೆಲ್ಲುವಂತಹ ಪಂದ್ಯವನ್ನು ಪಂಜಾಬ್‌ ಕಿಂಗ್ಸ್‌ ಕೈಚೆಲ್ಲಿದೆ. 12 ಎಸೆತಗಳಿಗೆ ಕೇವಲ 8 ರನ್‌ ಗಳಿಸಲು ನಮ್ಮ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದಾರೆ. ಜತೆಗೆ, ಗೆಲ್ಲುವ ಪಂದ್ಯಗಳನ್ನು ಪದೇ ಪದೇ ಸೋಲುತ್ತಿರುವುದು ನಮಗೆ ಒಂದು ರೀತಿ ನುಂಗಲಾರದ ತುತ್ತಾಗಿದೆ’ ಎಂದು ಅನಿಲ್‌ ಕುಂಬ್ಳೆ ತಿಳಿಸಿದ್ದಾರೆ.

ADVERTISEMENT

‘ಕೆ.ಎಲ್‌.ರಾಹುಲ್‌ ಹಾಗೂ ಮಯಂಕ್‌ ಅಗರ್‌ವಾಲ್‌ ಉತ್ತಮ ಜೊತೆಯಾಟವಾಡಿದರು. ಹಾಗಾಗಿ ನಾವು 19 ಓವರ್‌ಗಳಲ್ಲಿ ಗುರಿ ಮುಟ್ಟುತ್ತೇವೆ ಎಂದು ಭರವಸೆ ಇತ್ತು. ಆದರೆ, ಪಂದ್ಯ ಕೊನೆಯ ಎರಡು ಎಸೆತಗಳವರೆಗೂ ಹೋಯಿತು. ಇದು ನಿಜಕ್ಕೂ ಕಠಿಣವಾಗಿರುತ್ತದೆ. ನಮ್ಮ ನಿರೀಕ್ಷೆ ಅನಿರೀಕ್ಷಿತವಾಗಿ ಸಾಧ್ಯವಾಗಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಇದೇ ವೇಳೆ ರಾಯಲ್ಸ್‌ ತಂಡದ ಲೆಗ್ ಸ್ಪಿನ್ನರ್ ಲೆಗ್ ಸ್ಪಿನ್ನರ್ ಕಾರ್ತಿಕ್‌ ತ್ಯಾಗಿ ಅವರ ಪ್ರದರ್ಶನಕ್ಕೆ ಕುಂಬ್ಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂಜಾಬ್‌ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದ್ದು, 6 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಹಾಗಾಗಿ ತಂಡದ ಆಟಗಾರರು ತಪ್ಪುಗಳನ್ನು ಪುನರಾರ್ತಿಸುತ್ತಿರುವ ಬಗ್ಗೆ ಟೀಕೆಗಳು ಕೇಳಿಬರುವುದು ಸಹಜ. ಆದರೆ, ಈ ಸೋಲಿನಿಂದ ಮುಂದಿನ ಐದು ಪಂದ್ಯಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರದಂತೆ ನಾವು ಎಚ್ಚರ ವಹಿಸಿಬೇಕಿದೆ’ ಎಂದು ಕುಂಬ್ಳೆ ಸಲಹೆ ನೀಡಿದ್ದಾರೆ.

ಪಂಜಾಬ್ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡಿದ ರಾಯಲ್ಸ್‌ 20 ಓವರ್‌ಗಳಲ್ಲಿ 185 ರನ್‌ ಗಳಿಸಿ ಆಲೌಟ್‌ ಆಗಿತ್ತು. ಈ ಮೊತ್ತ ಬೆನ್ನತ್ತಿದ ಪಂಜಾಬ್‌ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 183 ರನ್‌ ಗಳಿಸಿ, 2 ರನ್‌ ಅಂತರದಿಂದ ಸೋಲೊಪ್ಪಿಕೊಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.