ADVERTISEMENT

ಜಲಾವೃತವಾದ ಸೇತುವೆ ದಾಟಲು ಆ್ಯಂಬುಲೆನ್ಸ್ ಮುಂದೆ ಓಡಿ ಸಹಾಯ ಮಾಡಿದ ಪೋರ ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 6:23 IST
Last Updated 15 ಆಗಸ್ಟ್ 2019, 6:23 IST
   

ಬೆಂಗಳೂರು: ನೀರಿನ ಮಧ್ಯೆ ಚಲಿಸುತ್ತಿರುವಆ್ಯಂಬುಲೆನ್ಸ್. ಅದರ ಮುಂದೆ ಓಡೋಡಿ ಬರುತ್ತಿರುವ ಬಾಲಕ.ಉಸಿರು ಬಿಗಿ ಹಿಡಿದು ಓಡಿ ಬರುತ್ತಿದ್ದ ಆ ಪೋರ ದಡ ತಲುಪುವ ಹೊತ್ತಿಗೆ ಎಡವಿ ಬಿದ್ದರೂ ಅಲ್ಲಿಂದ ಸಾವರಿಸಿ ಮುಂದೆ ಓಡುತ್ತಿದ್ದಾನೆ.ಆ್ಯಂಬುಲೆನ್ಸ್ ಸೇತುವೆ ದಾಟಿ ದಡ ಸೇರುತ್ತದೆ.ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೊ ಇದು.

ಆ್ಯಂಬುಲೆನ್ಸ್‌ ಮುಂದೆ ಓಡುತ್ತಾ ಈ ಬಾಲಕ ಸೇತುವೆದಾಟಲು ದಾರಿ ತೋರಿಸಿದ್ದ.ಕರ್ನಾಟಕದಲ್ಲಿ ಪ್ರವಾಹದ ವೇಳೆ ಕಂಡು ಬಂದ ಮಾನವೀಯ ದೃಶ್ಯ ಇದಾಗಿದ್ದು, ಬಾಲಕನ ಧೈರ್ಯ ಮತ್ತು ಸಹಾಯ ಮಾಡುವ ಗುಣಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಶ್ಲಾಘನೆ ವ್ಯಕ್ತವಾಗಿತ್ತು.

ಅಂದ ಹಾಗೆ ಈ ವಿಡಿಯೊದಲ್ಲಿರುವ ಬಾಲಕನ ಹೆಸರು ವೆಂಕಟೇಶ್. ರಾಯಚೂರು ಜಿಲ್ಲೆಯ ಹಿರೇರಾಯನಕುಂಪೆ ಗ್ರಾಮದಲ್ಲಿರುವ ಸರ್ಕಾರಿ ಪ್ರೈಮರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ. ಈತ ಈಗ ರಾಯಚೂರಿನ ಶವಂತ್‌ಗೆರದಲ್ಲಿರುವ ಪುನರ್ವಸತಿ ಕೇಂದ್ರದಲ್ಲಿದ್ದಾನೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ADVERTISEMENT

ಗೆಳೆಯರೊಂದಿಗೆ ಆಟವಾಡುತ್ತಿದ್ದಾಗ ಆ್ಯಂಬುಲೆನ್ಸ್ ಬರುತ್ತಿರುವುದನ್ನುನೋಡಿದ್ದಾನೆ ವೆಂಕಟೇಶ್. 6 ಮಕ್ಕಳು ಮತ್ತು ಓರ್ವ ಮಹಿಳೆಯ ಮೃತದೇಹವನ್ನು ಹೊತ್ತು ಆ ಆ್ಯಂಬುಲೆನ್ಸ್ ಯಾದಗಿರಿ ಜಿಲ್ಲೆಯ ಮಚನೂರು ಗ್ರಾಮಕ್ಕೆ ಹೋಗುತ್ತಿತ್ತು.ಇಡೀ ಪ್ರದೇಶ ನೀರಿನಿಂದ ಆವೃತವಾಗಿದ್ದರಿಂದ ದಾರಿ ತೋರಿಸುವಂತೆ ಪ್ರಸನ್ನ ಆ್ಯಂಬುಲೆನ್ಸ್ ಸರ್ವೀಸ್‌ನ ಚಾಲಕ ಮಂಜು ಆ ಮಕ್ಕಳಲ್ಲಿ ಹೇಳಿದ್ದರು.ಇದಕ್ಕೆ ಒಪ್ಪಿದ ವೆಂಕಟೇಶ್ ಆ್ಯಂಬುಲೆನ್ಸ್ ಮುಂದೆ ಓಡುತ್ತಾ ದಾರಿ ತೋರಿಸಿದ್ದಾನೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ನಾನು ಮಾಡಿದ ಕೆಲಸ ಸಾಹಸದ್ದು ಹೌದೋ ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ.ನಾನು ಆ ಚಾಲಕನಿಗೆ ಸಹಾಯ ಮಾಡಿದೆ. ನೀರಿನಲ್ಲಿ ಮುಳುಗಿರುವ ಆ ಸೇತುವೆಯಲ್ಲಿ ಸಾಗಬಹುದೇ? ಎಂದು ಚಾಲಕ ನನ್ನಲ್ಲಿ ಕೇಳಿದ್ದರು. ನಾನು ದಾರಿ ತೋರಿಸಿದೆ.ಸಹಾಯವೋ ಸಾಹಸವೋ ಎಂಬುದು ನನಗೆ ಗೊತ್ತಿಲ್ಲ ಎಂದು ವೆಂಕಟೇಶ್ ಮಾತನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.

ವೆಂಕಟೇಶ್ ಆ್ಯಂಬುಲೆನ್ಸ್ ಮುಂದೆ ಓಡುತ್ತಾ ದಾರಿ ತೋರಿಸುತ್ತಿರುವ ವಿಡಿಯೊ ದೃಶ್ಯವನ್ನು ಹಲವಾರು ಸುದ್ದಿ ಮಾಧ್ಯಮಗಳು ಪ್ರಸಾರ ಮಾಡಿವೆ.ಅದೇ ವೇಳೆ ಪ್ರಾಣವನ್ನು ಒತ್ತೆಯಿಟ್ಟು ಆ್ಯಂಬುಲೆನ್ಸ್‌ಗೆ ದಾರಿ ತೋರಿಸಿದ ಈ ಬಾಲಕನಿಗೆ ಶೌರ್ಯ ಪ್ರಶಸ್ತಿ ನೀಡಬೇಕೆಂದು ಟ್ವೀಟಿಗರುಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.