
ಗದ್ದೆ ಅವರೆ
ಚಿತ್ರ: ಜಿ.ಕೃಷ್ಣಪ್ರಸಾದ್
ನೋಟಕ್ಕೆ ಒಂದೇ ರೀತಿ ಕಂಡರು ಗಾತ್ರ, ಗುಣ ಸ್ವಭಾವ, ರುಚಿ ಎಲ್ಲವುದರಲ್ಲೂ ಭಿನ್ನವಾಗಿರುವ ಅವರೆಕಾಯಿ ತಳಿಗಳು ನಮ್ಮ ಹೊಲದಲ್ಲಿವೆ. ಅವುಗಳನ್ನು ದಬ್ಪವರೆ, ಚಿಟ್ಟವರೆ, ಗೆಣ್ಣೆತ್ತವರೆ, ಗದ್ದೆಅವರೆ ಹೆಸರಿನಿಂದ ತಳಿಗಳನ್ನು ಗುರುತಿಸಲಾಗುತ್ತಿದೆ. ಹೈಬ್ರಿಡ್ ತಳಿಗಳ ನಡುವೆ ಉಳಿದಿರುವ ನಾಟಿ ಅವರೆ ಕಾಯಿ ತಳಿಗಳ ಲೋಕ ಇಲ್ಲಿದೆ...
ಚಳಿಗಾಲ ಆರಂಭವಾದರೆ, ಮಾರುಕಟ್ಟೆಯಲ್ಲಿ ಅವರೆಕಾಯಿ ಕಾಣಿಸಿಕೊಳ್ಳುತ್ತದೆ. ಅಡುಗೆ ಮನೆಗಳಲ್ಲಿ ಅವರೇಕಾಳಿನ ತರಹೇವಾರಿ ಖಾದ್ಯಗಳು ಸಿದ್ಧವಾಗುತ್ತವೆ.
ಪಡಸಾಲೆಯಲ್ಲಿ ಮನೆ ಮಂದಿಯೆಲ್ಲ ಕುಳಿತು ಸೊಗಡಿನ ಪರಿಮಳ ಸವಿಯುತ್ತಾ, ಅವರೆಕಾಯಿ ಬಿಡಿಸುವಲ್ಲಿ ತಲ್ಲೀನರಾಗಿದ್ದರೆ, ಅಡುಗೆ ಮನೆಯಲ್ಲಿ ಅವರೆಕಾಳು ಉಪ್ಪಿಟ್ಟು, ರೊಟ್ಟಿ, ಖಾರದ ಕಾಳು, ಹುಳಿ, ತೊವ್ವೆ... ಇಂಥ ತರಹೇವಾರಿ ತಿನಿಸುಗಳು ತಯಾರಾಗುತ್ತಿರುತ್ತವೆ.
ಈ ಕಾಲದಲ್ಲಿ ಯಾರನ್ನಾದರೂ ‘ನಿಮ್ಮನೆಯಲ್ಲಿ ಇವತ್ತು ಏನು ಅಡುಗೆ’ ಅಂದರೆ ಸಾಕು. ‘ಅವರೆಕಾಳಿನ ಸಾರು ಮಾಡಿದ್ದೆ’ ಎನ್ನುತ್ತಾರೆ. ಬೆಳಿಗ್ಗೆ ತಿಂಡಿಗೆ ಏನ್ ಮಾಡಿದ್ದಿರಿ ಅಂದ್ರೆ, ‘ಅವರೆಕಾಳು ಉಪ್ಪಿಟ್ಟು, ಮೊನ್ನೆ ಅಕ್ಕಿ ರೊಟ್ಟಿ ಮಾಡಿದ್ದೆ’ ಅಂತ ಸೇರಿಸಿ ಹೇಳುತ್ತಾರೆ. ಸಂಜೆ ಸ್ನ್ಯಾಕ್ಸ್‌ಗೂ ‘ಅವರೆಕಾಳು ಹುರಿದು, ಖಾರ ಹಾಕಿದ್ದೆ. ಬಹಳ ರುಚಿಯಾಗಿತ್ತು’ ಎಂದು ಮಾತು ಪೋಣಿಸುವವರೂ ಇದ್ದಾರೆ. ಚಳಿಗಾಲ ಮುಗಿಯುವವರೆಗೂ ಅವರೆಯದ್ದೇ ಮಾತು.
ಖಾರಕ್ಕೆ ಜೊತೆಗೆಯಾಗುತ್ತಿದ್ದ ಅವರೆ ಈಗೀಗ ಪಾಯಸದಂತಹ ಸಿಹಿ ಪದಾರ್ಥಕ್ಕೂ ಜೋಡಿಸುತ್ತಿದ್ದಾರೆ. ಮೊನ್ನೆ ಹೀಗೆ ಅವರೆ ಮುಗಿಯುವವರೆಗೂ ನಿತ್ಯದ ಊಟ–ಉಪಹಾರದ ಪಟ್ಟಿಯಲ್ಲಿ ಒಂದು ಅವರೆಕಾಳಿನ ಖಾದ್ಯ ಗ್ಯಾರಂಟಿ ಇದ್ದೇ ಇರುತ್ತದೆ. ಜೊತೆಗೆ ಪಟ್ಟಣ ನಗರಗಳಲ್ಲಿ ಸಾಲು ಸಾಲು ಅವರೆಬೇಳೆ ಮೇಳಗಳೂ ನಡೆಯುತ್ತಿರುತ್ತವೆ !
ಚಳಿಗಾಲದಲ್ಲಿ ನಮ್ಮ ಜಿಹ್ವಾಚಪಲವನ್ನು ತಣಿಸುವ, ರುಚಿ ಗ್ರಂಥಿಗಳನ್ನು ತವಕಿಸುವಂತೆ ಮಾಡುವ ಅವರೆಕಾಳಿನಲ್ಲಿ ಖಾದ್ಯ ವೈವಿಧ್ಯವಿರುವಂತೆ ತಳಿ ವೈವಿಧ್ಯವೂ ಇದೆ.
ಹೌದು ! ನೋಟಕ್ಕೆ ಒಂದೇ ರೀತಿ ಕಾಣುವ ಅವರೆಕಾಯಲ್ಲಿ ನಾನು ಕಂಡಂತೆ ಮೂರ್ನಾಲ್ಕು ತಳಿಗಳಿವೆ. ಅವುಗಳು ಗಾತ್ರದಲ್ಲಿ, ರುಚಿಯಲ್ಲಿ, ಬೆಳವಣಿಗೆಯ ಲ್ಲೂ ಭಿನ್ನವಾಗಿವೆ ಎಂದು ಬೆಳೆದವರು ಹೇಳುತ್ತಾರೆ.
ದಬ್ಪವರೆ, ಚಿಟ್ಟವರೆ(ಪುಟ್ಟವರೆ), ಗೆಣ್ಣೆತ್ತವರೆ ಮತ್ತು ಗದ್ದೆ ಅವರೆ - ಈ ವರೆಗೂ ಪರಿಚಿತವಾಗಿರುವ ತಳಿಗಳು. ಇವೆಲ್ಲ ರೈತರೇ ಗುರುತಿಸಿ, ಬೆಳೆಸುತ್ತಿರುವ, ಬಳಸುತ್ತಿರುವ ನಾಟಿ ತಳಿಯ ಅವರೆಗಳು. ಇದಲ್ಲದೇ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ, ಹೆಸರುಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ(ಐಐಎಚ್‌ಆರ್) ಇನ್ನೊಂದೆರಡು ಹೈಬ್ರಿಡ್ ತಳಿಗಳನ್ನು ಅಭಿವೃದ್ಧಿಪಡಿಸಿದೆ.
ದಬ್ಪವರೆ, ಚಿಟ್ಟವರೆ, ಗೆಣ್ಣವತ್ತವರೆಯನ್ನು ಹೊಲದಲ್ಲಿ ಬೆಳೆಯುತ್ತಾರೆ. ಎಲ್ಲ ನಾಟಿ ತಳಿಗಳ ಅವರೆಯನ್ನೂ (ಬಹುತೇಕರು) ಮಳೆಯಾಶ್ರಿತವಾಗಿಯೇ ಬೆಳೆಯುತ್ತಾರೆ. ಮಳೆಯಾಶ್ರಿತವಾಗಿ ಬೆಳೆಯುವ ಅವರೆ ಬಲು ರುಚಿಯಾಗಿರುತ್ತದೆ ಎಂಬುದು ಅನುಭವಿ ರೈತರ ಮಾತು.
ಅವರೆಕಾಯಿಯನ್ನು ರಾಗಿಯ ಜೊತೆಗೆ ಮಿಶ್ರಬೆಳೆ ಅಥವಾ ಅಕ್ಕಡಿ ಬೆಳೆಯಾಗಿ(6 ಸಾಲು ರಾಗಿಗೆ ಒಂದು ಸಾಲು ಅವರೆ ಅಥವಾ 9 ಸಾಲು ರಾಗಿಗೆ ಒಂದು ಸಾಲು ಅವರೆಯಂತೆ ಬಿತ್ತನೆ) ಬೆಳೆಯುವುದು ವಾಡಿಕೆ. ಹೀಗೆ ಮಿಶ್ರಬೆಳೆಯಾಗಿ ಬೆಳೆಯುವವರು, ತಮ್ಮ ಮನೆಗಾಗುವಷ್ಟೇ ಬೆಳೆದುಕೊಳ್ಳುತ್ತಾರೆ. ಬೆಳೆದಿರುವುದನ್ನು ಬಳಸಿ ಉಳಿದರಷ್ಟೇ ಮಾರಾಟ ಮಾಡುತ್ತಾರೆ.
ಎಲ್ಲ ತಳಿಯ ಅವರೆಕಾಯಿಗಳೂ ಆರು ತಿಂಗಳ ಬೆಳೆ. ಜೂನ್ ತಿಂಗಳಲ್ಲಿ (ಮುಂಗಾರಿಗೆ ಬಿತ್ತುವೆ) ರಾಗಿ, 90 ದಿನಗಳಲ್ಲಿ ಅಥವಾ 120 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ರಾಗಿ ಕೊಯ್ಲಾದರೂ, ಅದರೊಂದಿಗೆ ಬಿತ್ತುವೆ ಅವರೆಕಾಯಿ, ಡಿಸೆಂಬರ್–ಜನವರಿವರೆಗೂ ಹೊಲದಲ್ಲಿರುತ್ತದೆ. ಜನವರಿ ಮೊದಲ ವಾರದಿಂದ ಕಟಾವು ಆರಂಭ.
ಕನಕಪುರದ ಸಿನಗಲು ಅವರೆ ಕಂಡಿದ್ದನಾದರೂ, ಅದರ ಬೀಜ ಮಾತ್ರ ಸಣ್ಣ; ಕಾಯಿ ದೊಡ್ಡದೇ.
ಈ ಗದ್ದೆ ಅವರೆ ಕಾಯಿಯೂ ಸಣ್ಣ ; ಬೀಜವೂ ಸಣ್ಣ.
ಗೆಣ್ಣೆತ್ತವರೆ
ದಪ್ಪವರೆಯನ್ನು ದಬ್ಬವರೆ/ದಬ್ಬೆ ಅವರೆ ಎಂದು ಕರೆದಿರಬಹುದು. ಇದು ಸಿಪ್ಪೆಸಹಿತ ಕಾಯಿ ದಪ್ಪವಾಗಿರುತ್ತದೆ. ಸ್ವಲ್ಪ ಚಪ್ಪಟೆಯಾಕಾರದಲ್ಲಿರುತ್ತದೆ. ಒಳಗಡೆಯಿರುವ ಕಾಳುಗಳೂ ದಪ್ಪವಿರುತ್ತದೆ. ಚಪ್ಪರದವರೆ ತರ ಅಗಲ. ರುಚಿಯಲ್ಲೂ ಸಪ್ಪೆ. ಇದನ್ನು ರೈತರು ಕೇವಲ ಅವರೆಕಾಯಿಗಷ್ಟೇ ಬೆಳೆಯುವುದಿಲ್ಲ, ಜಾನುವಾರುಗಳಿಗೆ ಮೇವಿಗಾಗಿಯೂ ಬಳಸುತ್ತಾರೆ. ಹಾಗಾಗಿ, ಕಾಯಿ ಚೆನ್ನಾಗಿ ಬಂದರೆ ರೈತರಿಗೆ ಡಬ್ಬಲ್ ಲಾಭ.
ಈ ಚಿಟ್ಟವರೆ, ಕಾಯಿಯ ಸಿಪ್ಪೆ ಕಾಳಿಗೆ ಅಂಟಿಕೊಂಡಿರುತ್ತದೆ. ಕಾಳು ಚಿಕ್ಕದಿರುತ್ತದೆ. ಇದೇ ಕಾರಣಕ್ಕೆ ಚಿಕ್ಕದಾದ ಅವರೆ ಎನ್ನುವುದು, ಚಿಟ್ಟವರೆ, ಪುಟ್ಟದಾಗಿರುವುದಕ್ಕೆ ಪುಟ್ಟವರೆ ಎಂದು ಕರೆಯುತ್ತಾರೆ. ಇದನ್ನೂ ಕೂಡ ಹೊದಲ್ಲೇ, ರಾಗಿಯಲ್ಲಿ ಅಕ್ಕಡಿಯಾಗಿ ಬೆಳೆಯುತ್ತಾರೆ.
ರಾಮನಗರ ಜಿಲ್ಲೆ ಕನಕಪುರ ಭಾಗದಲ್ಲಿ ಸಿನಗಲು ಅವರೆ ಎಂಬ ಹೆಸರಿನ ನಾಟಿ ಅವರೆಕಾಯಿ ಇದೆ. ಇದರ ಕಾಳು ಸಣ್ಣ ಕಾಯಿಯ ಗಾತ್ರವೂ ಸಣ್ಣ. ರುಚಿ ಮತ್ತು ಸೊಗಡು ಜಾಸ್ತಿ. ಚಿಟ್ಟವರೆಯ ಗುಣ-ಗಾತ್ರವೂ ಹೀಗೆ ಇದೆ. ಬಹುಶಃ ಇದು ಚಿಟ್ಟವರೆಯ ಇನ್ನೊಂದು ತಳಿ ಇರಬಹುದು.
ದಪ್ಪವರೆಗಿಂತ ಚಿಟ್ಟವರೆಯ ಖಾದ್ಯಗಳು ಬಲುರುಚಿ. ತುಂಬಾ ಸೊಗಡಿರುತ್ತದೆ. ಇದರಲ್ಲಿ ಹಿತ್ಕವರೆ ಬೇಳೆ(ಅವರೆಕಾಳನ್ನು ಹಿಸುಕಿದ ನಂತರ ಉಳಿವ ಬೇಳೆ)ಯಿಂದ ಮಾಡುವ ಹುಳಿ, ತೊವ್ವೆ ಬಹಳ ರುಚಿಯಾಗಿರುತ್ತದೆ ಎಂದು ರೈತರು ಹೇಳುತ್ತಾರೆ. ಚಿಟ್ಟವರೆ ಕಾಳನ್ನು ಹುರಿದು ಖಾರ ಲೇಪಿಸಿ ಸಂಜೆಯ ಕುರುಕುಲು ತಿಂಡಿಗಾಗಿ ಬಳಸುತ್ತಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ ಭಾಗ, ರಾಮನಗರ ಜಿಲ್ಲೆಯ ಮಾಗಡಿ, ಕನಕಪುರ ಭಾಗದಲ್ಲಿ ಅಲ್ಲಲ್ಲಿ ಚಿಟ್ಟವರೆ ತಳಿ ಇನ್ನೂ ಇದೆಯಂತೆ ಎನ್ನುತ್ತಾರೆ. ಈ ಅವರೆಕಾಯಿಯನ್ನೂ ಮೇವಿಗಾಗಿ ಬಳಸುತ್ತಾರೆ ಎನ್ನುತ್ತಾರೆ ಕೃಷಿ ಬರಹಗಾರ ಮಲ್ಲಿಕಾರ್ಜುನ ಹೊಸ ಪಾಳ್ಯ.
ಗೆಣ್ಣೆತ್ತಲವರೆ ತಲೆತಲಾಂತರದಿಂದ ಉಳಿದು ಬಂದಿರುವ ನಾಟಿ ತಳಿ ಅವರೆ. ನೆಲದ ಅವರೆ ಎಂದೂ ಕರೆಯುತ್ತಾರೆ. ಇದು ಬಳ್ಳಿಯಾಗಿ ಹಬ್ಬಿ ಬೆಳೆಯುತ್ತದೆ. ಜೂನ್ ಜುಲೈ ತಿಂಗಳಲ್ಲಿ ನೆಟ್ಟರೆ ನವೆಂಬರ್ ಡಿಸೆಂಬರ್ ಸಮಯದಲ್ಲಿ ಮೈತುಂಬ ಕಾಯಿ ಬಿಡುತ್ತದೆ.
ಪ್ರತಿ ಗೆಣ್ಣಿಗೂ ಕಾಯಿ ಬಿಡುವುದು ಇದರ ವಿಶೇಷ. ಕಡಿಮೆ ಆರೈಕೆಯಲ್ಲೂ ಹೆಚ್ಚು ಇಳುವರಿ ಬಿಡುತ್ತದೆ. ಇನ್ನಿತರ ಅವರೆ ತಳಿಗೆ ಕಾಡುವ ಯಾವುದೇ ಕೀಟಗಳು ಇದನ್ನು ಕಾಡುವುದಿಲ್ಲ. ಹಸಿಕಾಯಿಗಳಿಂದ ಬಸ್ಸಾರು ಪಲ್ಯ ಮಾಡಿದರೆ ತುಂಬಾ ರುಚಿಯಾಗಿತ್ತದೆ ಎನ್ನುತ್ತಾರೆ ಕೃಷಿಕ ಅಣೇಕಟ್ಟೆ ವಿಶ್ವನಾಥ್.
ಗದ್ದೆ ಅವರೆ, ಇದು ಇನ್ನೊಂದು ತಳಿ. ಒಣಭೂಮಿ ಭತ್ತದ ಗದ್ದೆಗಳ ಬದುವಿನ ಮೇಲೆ ಬೆಳೆಯುತ್ತದೆಯಂತೆ. ಇದು ನಾಟಿ(ಜವಾರಿ) ತಳಿ. ಆರು ತಿಂಗಳ ಈ ಅವರೆ ತಳಿ ಹಬ್ಬುತ್ತದೆ. ಗೊಂಚಲು ಗೊಂಚಲು ಸಣ್ಣಗಾತ್ರದ ಕಾಯಿ ಹೊತ್ತು ನಿಲ್ಲುತ್ತದೆ.
ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ಸಂಚಾಲಕ ಜಿ.ಕೃಷ್ಣಪ್ರಸಾದ್, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ‘ದೇಸಿ ಆಹಾರ ಮೇಳ’ ಆಯೋಜಿಸಿದ್ದರು. ಅದರಲ್ಲಿ ಹಳ್ಳಿ ಅಡುಗೆಗಳ ಪ್ರದರ್ಶನಕ್ಕೆ ಕಡಳ್ಳಿ ಸಮುದಾಯ ಬೀಜ ಬ್ಯಾಂಕ್ ನ ಮಾದೇವಿ ಅವರು ಈ ಗದ್ದೆ ಅವರೆಯನ್ನು ತಂದಿದ್ದರಂತೆ.
ಮಾದೇವಿ ಅವರು ಅವರೆಯ ವಿವರವನ್ನು ಕೃಷ್ಣಪ್ರಸಾದ್ ಅವರಿಗೆ ವಿವರಿಸಿದ್ದಾರೆ.
‘ಗದ್ದೆ ಅವರೆಯ ಬೀಜ ಮಾತ್ರ ಸಣ್ಣ, ಕಾಯಿ ದೊಡ್ಡದಾಗಿರುತ್ತದೆ. ಘಮಲುಹೆ ಚ್ಚು. ಕಾಯಿ ಮುಟ್ಟಿದರೆ ಸಾಕು ಇದರ ಸೊಗಡು ಕೈಗೆ ಮುತ್ತಿಕ್ಕುತ್ತದೆ. ಇದರ ಎಳೆ ಕಾಯಿ ಇಡಿಯಾಗಿ ಮುರಿದು ಪಲ್ಯ ಮಾಡಬಹುದು. ಸಣ್ಣ ಕಾಳಿನಿಂದ ಸಾಂಬಾರ್ ಮಾಡಬಹುದು. ಬಲು ರುಚಿ. ತತ್ತಿ ಜೊತೆ ಗದ್ದೆ ಅವರೆ ಸೇರಿಸಿದರೆ ಒಳ್ಳೆ ರುಚಿಕರ ಸಾಂಬಾರ್ ಸಿದ್ಧ’ ಎಂದು ಮಾದೇವಿ ಹೇಳುತ್ತಾರೆ.
ಈ ಎಲ್ಲ ತಳಿಗಳು ಜವಾರಿ ಅಥವಾ ನಾಟಿ ತಳಿಗಳು. ಎಲ್ಲವನ್ನೂ ಮಳೆಯಾಶ್ರಿತ ವಾಗಿಯೇ ಬೆಳೆಯುವುದು. ಮಳೆಆಶ್ರಯದಲ್ಲಿ ಬೆಳೆದರೆ ಸೊಗಡು ಮತ್ತು ರುಚಿ ಚೆನ್ನಾಗಿರುತ್ತದೆ. ನೀರಾವರಿಯಲ್ಲಿ ಬೆಳೆದ ಕಾಯಿಗಳಲ್ಲಿ ಸೊಗಡು ಕಡಿಮೆ, ರುಚಿಯೂ ಅಷ್ಟಕ್ಕಷ್ಟೇ ಎಂದು ರೈತರು ಹೇಳುತ್ತಾರೆ. ಈ ನಾಟಿ ತಳಿಗಳನ್ನು ಬೆಳೆಯು ರೈತರು ಪ್ರತಿ ವರ್ಷ ಬಿತ್ತನೆ ಬೀಜಗಳಿಗಾಗಿ ಕಾಯಿಗಳನ್ನು ಸಂಗ್ರಹಿಸಿ ಬೀಜ ಮಾಡಿ ಜೋಪಾನ ಮಾಡುತ್ತಾರೆ. ಮುಂದಿನ ವರ್ಷಕ್ಕೆ ಅವುಗಳನ್ನೇ ಬಿತ್ತನೆ ಮಾಡುತ್ತಾರೆ.
ಹವಾಮಾನ ವೈಪರೀತ್ಯದಿಂದ ಮಳೆ ಏರುಪೇರಾಗುವುದು, ಬಿತ್ತಿದ ಅವರೆಕಾಯಿ ಫಸಲು ಕೊಡದಿರುವಂತಹ ಪ್ರಸಂಗಗಳು ಬಂದರೆ, ಬೆಳೆದವರ ಬಳಿ ಬೀಜ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವೂ ಇದೆ. ಕೆಲವು ಕಡೆ ರೈತರೇ ಸಮುದಾಯ ಬೀಜ ಬ್ಯಾಂಕ್‌ಗಳನ್ನು ಮಾಡಿಕೊಂಡಿದ್ದು, ಅದರ ಮೂಲಕವೂ ಬೀಜ ವಿನಿಮಯ ಮಾಡಿಕೊಳ್ಳುತ್ತಾರೆ.
ಹೈಬ್ರಿಡ್ ಅವರೆ ತಳಿಗಳು: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಹೆಬ್ಬಾಳ ಅವರೆ–3, ಹೆಸರಘಟ್ಟದ ಐಐಎಚ್‌ಆರ್ ಅರ್ಕಾ ಜಯ್ ಮತ್ತು ಅರ್ಕಾ ವಿಜಯ್ ಎಂಬ ಅವರೆ ತಳಿಗಳನ್ನು ಅಭಿವೃದ್ಧಿಪಡಿಸಿದೆ.
ಹೆಬ್ಬಾಳ ಅವರೆ-3 – ಯಾವುದೇ ಕಾಲದಲ್ಲಿ ಬೆಳೆಯಬಹುದು. ಬಿತ್ತನೆ ಮಾಡಿದ 70 ರಿಂದ 75 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಅರ್ಕಾ ಜಯ್, ಕುಬ್ಬವಾಗಿ ಬೆಳೆಯುವ ಗಿಡ, ಪೊದೆಯಾಕಾರದಲ್ಲಿ ಬೆಳೆಯುತ್ತವೆ. ನೇರಳೆ ಬಣ್ಣದ ಹೂವುಗಳು ಮತ್ತು ಉದ್ದವಾದ, ತಿಳಿ ಹಸಿರು ಬಣ್ಣದ ಕಾಯಿಗಳಿರುತ್ತವೆ. ಕಡಿಮೆ ತೇವಾಂಶದಲ್ಲೂ ಬೆಳೆಯಬಲ್ಲ ತಳಿ ಇದು. ನಾಟಿ ಮಾಡಿದ 75 ದಿನಗಳ ನಂತರ ಕೊಯ್ಲಿಗೆ ಬರುತ್ತದೆ. ಇದರ ಕಾಳುಗಳು ಅಡುಗೆಗೆ ಉತ್ತಮ ಎನ್ನುತ್ತಾರೆ ವಿಜ್ಞಾನಿಗಳು.
ಇಲ್ಲಿವರೆಗೂ ‘ಅವರೆ ಲೋಕ'ದ ವೈವಿಧ್ಯದ ಬಗ್ಗೆ ಓದಿದ್ದೀರಲ್ಲವಾ. ಈಗ ನಿಮ್ಮ ಭಾಗದಲ್ಲಿ ಯಾವ ಯಾವ ಅವರೆಕಾಯಿ ತಳಿ ಬೆಳೆಯುತ್ತೀರಿ? ಅವುಗಳ ಗುಣ ವಿಶೇಷಣಗಳೇನು? ಅವರೆಕಾಯಿಯಿಂದ ಏನೇನು ಖಾದ್ಯಗಳನ್ನು ಮಾಡುತ್ತೀರಿ. ಒಂದು ಸಾಲು ಪ್ರತಿಕ್ರಿಯಿಸಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.